ಕೆಲವು ಸಂದರ್ಭಗಳಲ್ಲಿಯಾದರೂ ಜನ ರಿಲ್ಯಾಕ್ಸ್ ಆಗಿ ಇರಬೇಕು, ಎಷ್ಟು ರಿಲ್ಯಾಕ್ಸ್ ಆಗಿ ಇರಬೇಕೆಂದರೆ ಅವರಿಗೆ ಯಾವ ಔಪಚಾರಿಕತೆಯನ್ನು ಪಾಲಿಸುವ ಒತ್ತಡವೂ ಇರಬಾರದು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಮನುಷ್ಯ ಹುಟ್ಟಾ ಮೃದು
ಸತ್ತಾಗ ಮಾತ್ರ, ಬಿರುಸು, ಗಡಸು.
ಗಿಡ,ಮರ,ಹೂ,ಬಳ್ಳಿಗಳೂ ಹಾಗೇ, ಕೋಮಲ, ನಮ್ರ
ಬಾಡಿದಾಗ, ಬರಡಾದಾಗ ಮಾತ್ರ, ಒರಟು, ಪೆಡಸು.
ಅಂತೆಯೇ, ಸೆಟೆದವರು, ಬಾಗದವರು
ಸಾವಿನ ಹರಿಕಾರರು,
ನಮ್ರರು, ಒಗ್ಗಿಕೊಳ್ಳುವವರು
ಬದುಕಿನ ವಾರಸುದಾರರು.
ಸೆಟೆದವು, ಒಣಗಿದವನ್ನ ಮುರಿಯುವುದು ಸುಲಭ
ಬಗ್ಗುವವು, ಹಸಿರಾದವು ಬಾಳುತ್ತವೆ ಬಹುಕಾಲ.
~ ಲಾವೋತ್ಸೇ
ಒಮ್ಮೆ ಹೀಗಾಯಿತು. ಚೀನ ದೇಶದ ಚಕ್ರವರ್ತಿ, ಝೆನ್ ಮಾಸ್ಟರ್ ನ ಭೇಟಿಯಾಗಲು ಬಂದ. ಚಕ್ರವರ್ತಿ ಬಂದಾಗ, ಝೆನ್ ಮಾಸ್ಟರ್ ನೆಲದ ಮೇಲೆ ಹೊರಳಾಡುತ್ತ ಬಿದ್ದು ಬಿದ್ದು ನಗುತ್ತಿದ್ದ, ಅವನ ಶಿಷ್ಯರೂ ಸಿಕ್ಕಾಪಟ್ಟೆ ನಗಾಡುತ್ತಿದ್ದರು, ಬಹುಶಃ ಝೆನ್ ಮಾಸ್ಟರ್ ಯಾವುದೋ ಜೋಕ್ ಹೇಳಿರಬಹುದು. ಇದನ್ನು ನೋಡಿ ಚಕ್ರವರ್ತಿಗೆ ಮುಜುಗರವಾಯಿತು. ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ, ಏಕೆಂದರೆ ಝೆನ್ ಮಾಸ್ಟರ್ ನ ವರ್ತನೆ ಅಷ್ಟು ವಿಚಿತ್ರವಾಗಿತ್ತು. ರಾಜನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ, ಅವನು ಹೇಳಿಯೇ ಬಿಟ್ಟ…..
“ ಇಂಥ ವಿಚಿತ್ರ ವರ್ತನೆಯನ್ನು ನಾನು ನಿನ್ನಂಥ ಒಬ್ಬ ಝೆನ್ ಮಾಸ್ಟರ್ ನಿಂದ ನಿರೀಕ್ಷಿಸಿರಲಿಲ್ಲ, ಝೆನ್ ಮಾಸ್ಟರ್ ಆದ ಮೇಲೆ ನೀನು ಕೆಲವೊಂದು ಶಿಷ್ಟಾಚಾರ ಪಾಲಿಸಬೇಕು. ಆದರೆ ನೀನು ಹುಚ್ಚನಂತೆ ಇಲ್ಲಿ ನೆಲದ ಮೇಲೆ ಬಿದ್ದು ಉರುಳಾಡುತ್ತ ನಗಾಡುತ್ತಿದ್ದೀಯ”
ಬಿಲ್ಲು ಬಾಣಗಳೊಂದಿಗೆ ಶಸ್ತ್ರಸಜ್ಜಿತನಾಗಿ ಬಂದಿದ್ದ ಚಕ್ರವರ್ತಿಯನ್ನು ಒಮ್ಮೆ ನೋಡಿ ಝೆನ್ ಮಾಸ್ಟರ್ ಮಾತನಾಡಿದ, “ ನನಗೆ ಹೇಳು, ನೀನು ನಿನ್ನ ಬಳಿ ಇರುವ ಬಾಣವನ್ನು ಯಾವಾಗಲೂ ಬಿಲ್ಲಿಗೆ ಹೂಡಿ ಹೆದೆಯೇರಿಸಿಯೇ ಇಟ್ಟಿರುತ್ತಿಯೋ ಅಥವಾ ನಿನ್ನ ಬಿಲ್ಲು, ಬಾಣಕ್ಕೆ ಏನಾದರೂ ವಿಶ್ರಾಂತಿ ನೀಡುತ್ತೀಯೋ?”
“ ಹಾಗೇನಾದರೂ ನಾನು ಯಾವಾಗಲೂ ಬಾಣವನ್ನು ಬಿಲ್ಲಿಗೆ ಹೂಡಿ ಹೆದೆಯೇರಿಸಿಯೇ ಇಟ್ಟರೆ, ಬಿಲ್ಲು ತನ್ನ elasticity ಕಳೆದುಕೊಂಡು ಬಿಡುತ್ತದೆ. ಮತ್ತು ಬೇಕಾದಾಗ ಅದು ನಮ್ಮ ಉಪಯೋಗಕ್ಕೆ ಬರುವುದಿಲ್ಲ”. ಚಕ್ರವರ್ತಿ ಉತ್ತರಿಸಿದ.
“ ನಾನೂ ಅದನ್ನೇ ಮಾಡುತ್ತಿದ್ದೆ” ಝೆನ್ ಮಾಸ್ಟರ್ ಚಕ್ರವರ್ತಿಗೆ ತಿಳಿಸಿ ಹೇಳಿದ.

