ಪ್ರೇಮಿಸುವಿಕೆ ( Making Love ) : ಓಶೋ 365 #Day 97

ಪ್ರೇಮವನ್ನು ಆಸ್ವಾದಿಸಬೇಕು, ನಿಧಾನವಾಗಿ ರುಚಿ ನೋಡಬೇಕು, ಆಗ ಅದು ನಿಮ್ಮ ಅಸ್ತಿತ್ವವನ್ನು ಆವರಿಸಿಕೊಳ್ಳುತ್ತದೆ ಮತ್ತು ಸ್ವತಃ ನಿಮ್ಮನ್ನು ನುಂಗಿಹಾಕುವಂಥ ಉತ್ಕಟ ಅನುಭವವನ್ನು ನಿಮ್ಮದಾಗಿಸುತ್ತದೆ. ನೀವು ಪ್ರೇಮಿಸುತ್ತಿದ್ದೀರಿ ಎನ್ನುವುದಲ್ಲ, ನೀವೇ ಪ್ರೇಮವಾಗಿದ್ದೀರಿ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.

ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ  ಆರ್ದ್ರ ಅಂತಃಕರಣ.

ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.

~ ರೂಮಿ

ಪ್ರೇಮ, ನಿಮ್ಮ ಸುತ್ತಲಿನ ಅತ್ಯಂತ ಶಕ್ತಿಶಾಲಿ ವಲಯವಾಗಬಹುದು. ಅದು ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನ ಅದರೊಳಗೆ ಕಳೆದುಹೋಗುವಂತೆ ಸಿದ್ಧ ಮಾಡಬಲ್ಲದು. ಆದರೆ ನೀವು ಅದಕ್ಕಾಗಿ ಕಾಯಬೇಕು. ಸ್ವಲ್ಪ ಕಾಯಿರಿ, ಆದಷ್ಟು ಬೇಗ ನಿಮಗೆ ಆ ಚಾಣಾಕ್ಷತೆ ಲಭ್ಯವಾಗುತ್ತದೆ. ಪ್ರೇಮದ ಶಕ್ತಿ ನಿಮ್ಮನ್ನು ತಾನೇ ತಾನಾಗಿ ಸೇರಿಕೊಳ್ಳುತ್ತ ಹೋಗಲಿ. ಆ ಕ್ಷಣ ಸಮೀಪಿಸುತ್ತಿರುವುದು ನಿಮಗೆ ಗೊತ್ತಾಗುತ್ತದೆ, ಅದರ ಸೂಚನೆಗಳು, ಮುನ್ಸೂಚನೆಗಳ ಬಗ್ಗೆ ನಿಮಗೆ ಅರಿವಾಗುತ್ತ ಹೋಗುತ್ತದೆ. ಮುಂದೆ ನಿಮಗೆ ಯಾವ ಕಷ್ಟ ಎದುರಾಗುವುದಿಲ್ಲ.

ನೀವು ಪ್ರೇಮಿಸಬೇಕಾದ ಸ್ಥಿತಿ ತಾನಾಗಿ, ಸಹಜವಾಗಿ ಒದಗಿ ಬರಲಿಲ್ಲವಾದರೆ, ಕಾಯಿರಿ ; ಯಾವ ಅವಸರದ ಅವಶ್ಯಕತೆಯಿಲ್ಲ. ಪಾಶ್ಚಿಮಾತ್ಯ ಮನಸ್ಸಿಗೆ ಈ ಬಗ್ಗೆ ಬಹಳ ಅವಸರ, ಪ್ರೇಮಿಸುವಿಕೆಯ ಬಗ್ಗೆಯೂ. ಅದು ಮಾಡಿ ಮುಗಿಸಬೇಕಾದ ಸಂಗತಿ ಎನ್ನುವುದು ಅದರ ತಿಳುವಳಿಕೆ. ಇದು ಸಂಪೂರ್ಣ ತಪ್ಪು ದೃಷ್ಟಿಕೋನ.

ಪ್ರೇಮವನ್ನು manipulate ಮಾಡುವುದು ಸಾಧ್ಯವಿಲ್ಲ. ಅದು ಸಂಭವಿಸಬೇಕಾದಾಗ ಸಂಭವಿಸುತ್ತದೆ, ಅದು ಸಂಭವಿಸುತ್ತಿಲ್ಲವಾದರೂ ಯಾವ ಚಿಂತೆ ಮಾಡಬೇಕಾದ ಅವಶ್ಯಕತೆಯಿಲ್ಲ. ಏನಾದರೂ ಮಾಡಿ ಪ್ರೇಮಿಸಲೇಬೇಕು ಎನ್ನುವ ಅಹಂ ಕಟ್ಟಿಕೊಳ್ಳಬೇಡಿ. ಇದೂ ಕೂಡ ಪಾಶ್ಚಿಮಾತ್ಯ ಮನಸ್ಸಿನಲ್ಲಿದೆ ; ಏನಾದರೂ ಮಾಡಿ ಪ್ರೇಮಿಸಿ ಬಿಡಬೇಕು ಎನ್ನುವ ಅವಸರ. ಅದು ಅವರಿಗೆ ಸಾಧ್ಯವಾಗುತ್ತಿಲ್ಲವಾದರೆ ಅವರು ನೈಜ ಗಂಡಸು ಅಥವಾ ಹೆಂಗಸು ಅಲ್ಲ. ಇದು ಮೂರ್ಖತನ, ಹುಚ್ಚುತನ. ಪ್ರೇಮ ನಮ್ಮನ್ನು ಬೆಳೆಸುವ ಸಂಗತಿ. ಅದನ್ನು ಮ್ಯಾನೇಜ್ ಮಾಡುವುದು ಅಸಾಧ್ಯ. ಯಾರೆಲ್ಲ ಈ ಪ್ರಯತ್ನ ಮಾಡಿದ್ದಾರೋ ಅವರೆಲ್ಲ ಪ್ರೇಮದ ಚೆಲುವನ್ನ ಮಿಸ್ ಮಾಡಿಕೊಂಡಿದ್ದಾರೆ. ಆಗ ಇದು ಕೇವಲ ಲೈಂಗಿಕ ಪರಿಹಾರವಾಗುತ್ತದೆ, ಆದರೆ ಪ್ರೇಮದ ಎಲ್ಲ ಸೂಕ್ಷ್ಮ ಮತ್ತು ಆಳ ಆಯಾಮಗಳು ಅನುಭವಕ್ಕೆ ಸಿಗುವುದೇ ಇಲ್ಲ.

ನಸ್ರುದ್ದೀನ್ ಭಾವಿ ಮದುವೆ ಗಂಡಿನ ಕೈ ಕುಲುಕಿ ಅಭಿನಂದನೆ ಹೇಳಿದ.

“ ನಿನ್ನ ಜೀವನದ ಅತ್ಯಂತ ನೆಮ್ಮದಿಯ ದಿನದ ಶುಭಾಶಯ ಗೆಳೆಯ “

“ ಆದರೆ ನಸ್ರುದ್ದೀನ್ ನನ್ನ ಮದುವೆ ಇರೋದು ನಾಳೆ “
ಗೆಳೆಯ ತಬ್ಬಿಬ್ಬಾದ.

“ ಗೊತ್ತು, ಅದಕ್ಕೇ ಈ ದಿನ ಅತ್ಯಂತ ನೆಮ್ಮದಿಯ ದಿನ ಅಂತ ವಿಶ್ ಮಾಡಿದ್ದು “

ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.