ಪರಿಧಿಯಲ್ಲಿ ನಾಟ್ಯವಿದ್ದರೆ, ಕೇಂದ್ರದಲ್ಲಿ ನಿಶ್ಚಲತೆ ಇರುವುದು… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಧ್ಯಾನ ಎನ್ನುವುದು ಕೇವಲ ಕಣ್ಣು ಮುಚ್ಚಿಕೊಂಡು ನಿಶ್ಚಲವಾಗಿ ಕುಳಿತುಕೊಳ್ಳುವುದಲ್ಲ. ಬೋಧಿವೃಕ್ಷದ ಕೆಳಗೆ ಬುದ್ಧ ಆಳ ಮೌನಕ್ಕಿಳಿದು ನಿಶ್ಚಲನಾಗಿ ಕುಳಿತಿದ್ದಾಗ, ಅವನ ಒಳಗೂ ಒಂದು ನಾಟ್ಯ ನಡೆಯುತ್ತಿತ್ತು, ಪ್ರಜ್ಞೆಯ ನಾಟ್ಯ. ಇದು ಹೊರಗೆ ಕಾಣುವುದಿಲ್ಲವಾದರೂ ಒಳಗೆ ನಡೆದೇ ಇರುತ್ತದೆ, ಏಕೆಂದರೆ ಯಾವುದೂ ನಿಶ್ಚಲವಾಗಿರುವುದಿಲ್ಲ. ನಿಶ್ಚಲತೆ ಎನ್ನುವುದು ಮಿಥ್ಯಾಜಗತ್ತು ; ನೈಜತೆ ಯಾವತ್ತೂ ನಿಶ್ಚಲತೆಗೆ ಸರಿ ಹೊಂದುವುದಿಲ್ಲ.
ನಮ್ಮ ಬದುಕನ್ನ ನಾವು ಅಶಾಂತವಾಗಿಸಿಕೊಳ್ಳಬಹುದು (restlessness) ಅಥವಾ ನಾಟ್ಯವಾಗಿಸಿಕೊಳ್ಳಬಹುದು, ಎಲ್ಲವೂ ನಮ್ಮ ಮೇಲೆ ಅವಲಂಬಿತವಾಗಿದೆ. ನಿಶ್ಚಲತೆ ಎನ್ನುವುದು ಸಂಗತಿಗಳ ಸಹಜ ಸ್ವಭಾವವಲ್ಲ. ಹಾಗೆಂದು ನಾವು ಅಸ್ತವ್ಯಸ್ತ ಅಶಾಂತತೆಯನ್ನು ನಮ್ಮದಾಗಿಸಿಕೊಳ್ಳಬಹುದು ಆದರೆ ಇದು ದುಸ್ಥಿತಿ, ಹುಚ್ಚುತನ. ಅಥವಾ ನಾವು ಈ ಎನರ್ಜಿಯನ್ನು ಕ್ರಿಯೇಟಿವ್ ಆಗಿ ಬಳಸಿಕೊಳ್ಳಬಹುದು, ಆಗ ಅಶಾಂತತೆ, ಅಶಾಂತತೆಯಾಗಿ ಉಳಿಯುವುದಿಲ್ಲ. ಆಗ ಅದು ಮೃದು ಮಧುರ ಆಕರ್ಷಕತೆಯನ್ನು ತನ್ನದಾಗಿಸಿಕೊಳ್ಳುತ್ತದೆ, ಹಾಡು – ನಾಟ್ಯದ ರೂಪ ತಾಳುತ್ತದೆ. ದ್ವಂದ್ವ ಏನೆಂದರೆ ಯಾವಾಗ ಡಾನ್ಸರ್ ಪೂರ್ಣವಾಗಿ ತನ್ನ ಡಾನ್ಸನಲ್ಲಿ ಒಂದಾಗಿರುತ್ತಾನೋ ಆಗ, ಅವನಲ್ಲಿ ನಿಶ್ಚಲತೆ ಮನೆ ಮಾಡಿಕೊಳ್ಳುತ್ತದೆ, ಅಸಾಧ್ಯವೊಂದು ಸಂಭವಿಸುತ್ತದೆ. ಆದರೆ ಈ ನಿಶ್ಚಲತೆ ಬೇರೆ ಯಾವ ರೀತಿಯಲ್ಲೂ ಸಾಧ್ಯವಾಗುವುದಿಲ್ಲ. ಯಾವಾಗ ಡಾನ್ಸ್ ಪೂರ್ಣವಾಗುತ್ತದೆಯೋ ಆಗ ಅಲ್ಲಿ ನಿಶ್ಚಲತೆ ನೆಲೆಗೊಳ್ಳುತ್ತದೆ.
ಈ ಇಡೀ ಡಾನ್ಸ್ ಗೆ ಒಂದು ಕೇಂದ್ರವಿದೆ. ಕೇಂದ್ರವಿಲ್ಲದೆ ಯಾವುದೂ ಸಾಧ್ಯವಿಲ್ಲ. ಪರಿಧಿಯಲ್ಲಿ ನಾಟ್ಯವಿದೆ, ಕೇಂದ್ರವನ್ನು ಕಂಡುಕೊಳ್ಳಬೇಕಾದರೆ ನಾಟ್ಯ ಪರಿಪೂರ್ಣವಾಗಿರಬೇಕು. ಆಗ ಮಾತ್ರ, ಡಾನ್ಸ್ ಗೆ ವೈರುಧ್ಯವೆಂಬಂತೆ, ಥಟ್ಟನೇ ಒಬ್ಬ ತನ್ನ ನಿಶ್ಚಲತೆಯನ್ನು, ಪ್ರಶಾಂತತೆಯನ್ನು ಕಂಡುಕೊಳ್ಳುತ್ತಾನೆ.

