ಆಧುನಿಕ ಮೈಂಡ್ ತರ್ಕಪ್ರೇಮಿಯಾಗಿದೆ ( rational) ; ಅದು ತರ್ಕದ ಜಾಲದೊಳಗೆ ಸಿಕ್ಕಿಹಾಕಿಕೊಂಡಿದೆ. ತರ್ಕಕ್ಕೆ, ಸರ್ವಾಧಿಕಾರದ, ನಿರಂಕುಶತ್ವದ ಗುಣ ಇರುವುದರಿಂದ ಅದು ಸಾಕಷ್ಟು ಶೋಷಣೆಗೆ ಕಾರಣವಾಗಬಹುದು. ಒಮ್ಮೆ ತರ್ಕ ನಿಮ್ಮನ್ನು ತನ್ನ ಹತೋಟಿಗೆ ತೆಗೆದುಕೊಂಡಿತೆಂದರೆ ಸಾಕಷ್ಟು ವಿನಾಶಕ್ಕೆ ಕಾರಣವಾಗುತ್ತದೆ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
‘ತರ್ಕ’
ದಯವಿಟ್ಟು ಜಾಗ ಖಾಲಿ ಮಾಡು
ನಿನಗಿಲ್ಲಿ ಜಾಗ ಇಲ್ಲವೇ ಇಲ್ಲ.
ಉಹೂಂ, ನೀನು ಒಂದೇ ಒಂದು ಕೊದಲಿನಷ್ಟು
ಸೂಕ್ಷ್ಮವಾಗುತ್ತೇನೆಂದರೂ
ನಾನು ಒಪ್ಪುವುದಿಲ್ಲ.
ಮುಂಜಾನೆ ಆಗುತ್ತದೆ ನಿಜ
ಆದರೆ
ನಿನ್ನ ಕೈಯಲ್ಲಿರುವ
ಮೇಣದ ಬತ್ತಿಯನ್ನು ನೋಡಿ
ಸೂರ್ಯ
ಬಿದ್ದು ಬಿದ್ದು ನಗುತ್ತಾನೆ.
ನನಗೆ ಅಪಮಾನವಾಗುತ್ತದೆ.
– ರೂಮಿ
ತರ್ಕ, ಥೇಟ್ ಅಡಾಲ್ಫ್ ಹಿಟ್ಲರ್ ಅಥವಾ ಜೋಸೆಫ್ ಸ್ಟಾಲಿನ್ ಹಾಗೆ ; ಅದು ತನಗೆ ವಿರುದ್ಧವಾಗಿರುವುದನ್ನು ಬದುಕಲು ಬಿಡುವುದಿಲ್ಲ. ಆದರೆ ಭಾವನೆಗಳು, ಸಂವೇದನೆಗಳು ಇದಕ್ಕೆ ವಿರುದ್ಧ. ಪ್ರೇಮ, ಧ್ಯಾನ ತರ್ಕಕ್ಕೆ ವಿರುದ್ಧವಾಗಿ ಇರುವಂಥವು. ಧರ್ಮ, ಕಾರಣಕ್ಕೆ (reason) ವಿರುದ್ಧ. ಆದ್ದರಿಂದ reason ಸುಮ್ಮನೇ ವಿನಾಶಕ್ಕೆ ಮುಂದಾಗುತ್ತದೆ. ಆಗ ಥಟ್ಟನೇ ನಿಮಗೆ ಬದುಕು ಅರ್ಥಹೀನ ಅನಿಸತೊಡಗುತ್ತದೆ ಏಕೆಂದರೆ ಎಲ್ಲ ಅರ್ಥಗಳು ತರ್ಕಹೀನ (irrational).
ಆದ್ದರಿಂದ ನೀವು ಮೊದಲು ‘ಕಾರಣ’ ದ ಮಾತು ಕೇಳಿ, ನಂತರ ನೀವು ನಿಮ್ಮ ಬದುಕಿಗೆ ಅರ್ಥ ನೀಡುವ ಎಲ್ಲವನ್ನು ನಾಶ ಮಾಡುತ್ತ ಹೋಗುತ್ತೀರಿ. ವಿನಾಶದ ನಂತರ ನೀವು ವಿಜಯೋತ್ಸವವನ್ನು ಆಚರಿಸುತ್ತಿರುವಾಗ ನಿಮ್ಮನ್ನು ಖಾಲೀತನ ಕಾಡಲು ಶುರು ಮಾಡುತ್ತದೆ. ಈಗ ನಿಮ್ಮ ಕೈಯಲ್ಲಿ ತರ್ಕ ಬಿಟ್ಟು ಬೇರೇನೂ ಉಳಿದಿಲ್ಲ. ಮತ್ತು ಈಗ ನೀವು ಈ ಲಾಜಿಕ್ ತೆಗೆದುಕೊಂಡು ಏನು ಮಾಡುತ್ತೀರಿ? ಅದನ್ನು ತಿನ್ನಲಾಗುವುದಿಲ್ಲ, ಕುಡಿಯಲಾಗುವುಗಿಲ್ಲ. ಅದನ್ನು ಪ್ರೀತಿಸಲಾಗುವುದಿಲ್ಲ, ಬದುಕಲಾಗುವುದಿಲ್ಲ. ಇದು ಶುದ್ಧ ವ್ಯರ್ಥ ಸಂಗತಿ.
ನೀವು ಅತಿ ಬುದ್ಧಿವಂತರಾಗುವತ್ತ ಮುಂದುವರೆಯುತ್ತಿದ್ದರೆ ಬದುಕು ಕಠಿಣವಾಗುತ್ತ ಹೋಗುತ್ತದೆ. ಏಕೆಂದರೆ ಬದುಕು ಸರಳ, non intellectual. ಮಾನವತೆಯ ಇಡೀ ಸಮಸ್ಯೆಯೇ metaphysics. ಬದುಕು ಗುಲಾಬಿಯಷ್ಟೇ ಸರಳವಾದದ್ದು, ಗುಲಾಬಿಯ ಬಗ್ಗೆ ಯಾವ ಸಂಕೀರ್ಣತೆಯೂ ಇಲ್ಲ ಆದರೂ ಅದು ನಿಗೂಢ. ಗುಲಾಬಿಯ ಬಗ್ಗೆ ಯಾವ ಸಂಕೀರ್ಣತೆ ಇಲ್ಲದಿರುವಾಗಲೂ ನಮಗೆ ಅದನ್ನು ನಮ್ಮ ಬುದ್ಧಿಯ ಮೂಲಕ ಅರಿಯುವುದು ಸಾಧ್ಯವಾಗುತ್ತಿಲ್ಲ. ನೀವು ಗುಲಾಬಿಯನ್ನು ಪ್ರೇಮಿಸಬಹುದು, ಅದರ ಪರಿಮಳವನ್ನು ಆಸ್ವಾದಿಸಬಹುದು, ಅದನ್ನು ಸ್ಪರ್ಶ ಮಾಡಬಹುದು, ಅದನ್ನು ಅನುಭವಿಸಬಹುದು, ಸ್ವತಃ ನೀವೇ ಗುಲಾಬಿಯಾಗಬಹುದು. ಆದರೆ ನೀವು ಗುಲಾಬಿಯ ವಿಚ್ಛೇದನ ( dissecting) ಶುರು ಮಾಡಿದಿರಾದರೆ, ನಿಮ್ಮ ಕೈಯಲ್ಲಿ ಉಳಿಯುವುದು ಜೀವಂತಿಕೆಯಿಲ್ಲದ ಸಂಗತಿ ಮಾತ್ರ.
ಸಾವಿನ ಹಾಸಿಗೆಯಲ್ಲಿದ್ದ ಪ್ರಬಲ ರಿಪಬ್ಲಿಕನ್ ಬೆಂಬಲಿಗ ನಸ್ರುದ್ದೀನ್, ತಾನು ಡೆಮಾಕ್ರೇಟ್ ಪಾರ್ಟಿಗೆ ಪಕ್ಷಾಂತರ ಮಾಡುತ್ತಿರುವುದಾಗಿ ಘೋಷಿಸಿದ.
“ ಯಾಕೆ ನಸ್ರುದ್ದೀನ್, ನೀನು ಜೀವನವಿಡೀ ರಿಪಬ್ಲಿಕನ್ ಆಗಿದ್ದೋನು ಈಗ ಸಾಯುವ ಸಮಯದಲ್ಲಿ ಡೆಮಾಕ್ರೇಟ್ ಆಗುತ್ತಿದ್ದೀ, ಏನು ಕಾರಣ ? “
ನಸ್ರುದ್ದೀನ್ ನ ರಿಪಬ್ಲಿಕನ್ ಬೆಂಬಲಿಗ ಪ್ರಶ್ನೆ ಮಾಡಿದ.
“ ನಾಳೆ ನಾನು ಸತ್ತರೆ, ಈ ಭೂಮಿಯ ಮೇಲೆ ಒಬ್ಬ ಡೆಮಾಕ್ರೇಟ್ ಕಡಿಮೆಯಾಗುತ್ತಾನೆ, ಆ ಕಾರಣಕ್ಕಾಗಿ. “
ನಸ್ರುದ್ದೀನ್ ತನ್ನ ಪಕ್ಷಾಂತರಕ್ಕೆ ಸಮಜಾಯಿಷಿ ಹೇಳಿದ.

