ಪ್ರತಿಯೊಬ್ಬರೂ ಪಾಲಿಸಲೇ ಬೇಕಾದಂಥ ಅತ್ಯಂತ ಮುಖ್ಯವಾದ ಕರ್ತವ್ಯವೆಂದರೆ ಖುಶಿಯಾಗಿರುವುದು ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ಒಂದಿಲ್ಲೊಂದು ದಿನ
ನಮ್ಮ ಆತ್ಮ
ಹಿಮ ಬಾತುಕೋಳಿಯಂತೆ
ಈ ಬೇಸಿಗೆ ಶಿಬಿರವನ್ನು
ಬಿಟ್ಟು ಹೋಗುವುದು ನಿಶ್ಚಿತವಾಗಿರುವಾಗ,
ಪ್ರೇಮದ ಆಟವನ್ನು ನಾವು
ಹೊರಗೆ ನಿಂತು ನೋಡುವುದಾದರೂ
ಯಾತಕ್ಕೆ?
ನಮ್ಮ ಹೃದಯ
ಚತುರ ಸಿಂಹದಂತೆ ನಿಧಾನವಾಗಿ
ಹೆಜ್ಜೆ ಹಾಕುತ್ತ
ಹುಡುಕಾಡುತ್ತಿರುವಾಗ
ಮತ್ತು
ಒಂದಿಲ್ಲೊಂದು ದಿನ
ದಿವ್ಯ ಪ್ರಾರ್ಥನೆಯೊಂದು
ಬೇಟೆಯಂತೆ ಹತ್ತಿರವೇ
ನುಸುಳಿ ಹೋಗುವುದು ನಿಶ್ಚಿತವಿರುವಾಗ
ಖುಶಿಯ ಪರಿಧಿಯಿಂದ
ನಾವು ಹೊರಗೆ ಉಳಿಯುವುದಾದರೂ
ಯಾತಕ್ಕೆ?
~ ಹಾಫಿಜ್
ಖುಶಿಯಾಗಿರುವುದನ್ನ ನಿಮ್ಮ ಧರ್ಮವಾಗಿಸಿಕೊಳ್ಳಿ. ನೀವು ಖುಶಿಯಾಗಿರದಿದ್ದರೆ, ಏನೋ ಒಂದು ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದೀರ ಮತ್ತು ನಿಮ್ಮಲ್ಲಿ ತೀವ್ರವಾದ ಬದಲಾವಣೆಯ ಅವಶ್ಯಕತೆಯಿದೆ. ಏನು ಬದಲಾಗಬೇಕು ಎನ್ನುವುದನ್ನ ಆ ಖುಶಿಯೇ ನಿರ್ಧರಿಸಲಿ.
ನಾನು ಭೋಗವಾದಿ ಮತ್ತು ಮಾನವ ಜನಾಂಗಕ್ಕೆ ಸೇರಿದವನು ಎಂದು ಗುರುತಿಸಿಕೊಳ್ಳಲು ಇರುವ ಏಕೈಕ ಮಾನದಂಡವೆಂದರೆ ಖುಶಿಯಾಗಿರುವುದು. ಖುಶಿ, ನಿಮ್ಮ ಬದುಕಿನಲ್ಲಿ ಎಲ್ಲ ಸರಿಯಾಗಿದೆ ಎನ್ನುವುದರ ಸುಳಿವು ನೀಡುತ್ತದೆ. ನೀವು ಖುಶಿಯಾಗಿಲ್ಲದಿರುವುದು ಏನೋ ಒಂದು ನಿಮ್ಮ ಬದುಕಿನಲ್ಲಿ ಸರಿಯಿಲ್ಲ ಮತ್ತು ಯಾವುದೋ ಒಂದು ಅಥವಾ ಕೆಲವು ಬದಲಾವಣೆಗಳ ಅವಶ್ಯಕತೆ ಇದೆ ಎನ್ನುವುದರ ಸೂಚನೆ.
ಒಂದು ದಿನ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ ಹಣ್ಣುಗಳು ತುಂಬಿದ್ದವು. ಝೆನ್ ಕಲಿಯುತ್ತಿದ್ದ ಶಿಷ್ಯರೆಲ್ಲ ಅತ್ಯಂತ ಶಿಸ್ತಿನಿಂದ, ಗಂಭೀರವಾಗಿ ಮಾವಿನ ಹಣ್ಣುಗಳನ್ನ ಕಿತ್ತು ಬಾಕ್ಸ್ ಗೆ ತುಂಬಿ ಪ್ಯಾಕ್ ಮಾಡತೊಡಗಿದರು.
ಕೊನೆಗೆ ಮಾಸ್ಟರ್ ರೋಶಿ ಸ್ವತಃ ತಾವೇ ಮರ ಏರಿ, ಹಣ್ಣು ಕಿತ್ತು ಎಲ್ಲ ಶಿಷ್ಯರ ಮೇಲೆ ಎಸೆಯುತ್ತ, ಜೋರಾಗಿ ಕೇಕೆ ಹಾಕಿ ಕೂಗಾಡಲು ಶುರು ಮಾಡುವ ತನಕ, ಶಿಷ್ಯರಿಗೆ, ತಾವು ಪೂರ್ತಿ ಝೆನ್ ಮರೆತದ್ದು, ಮರೆತೇ ಹೋಗಿತ್ತು.

