ಬದುಕಿನ ಎಲ್ಲವನ್ನೂ ವಿವರಿಸಬೇಕಾಗಿಲ್ಲ.
ಯಾವುದನ್ನೂ ಯಾರಿಗೂ ವಿವರಿಸಬೇಕಾದ ಜವಾಬ್ದಾರಿ ನಮಗಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಬಹಳಷ್ಟು ಸಮಸ್ಯೆಗಳು
ಶುರುವಾಗೋದೇ
ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ
ಮತ್ತು ಕೆಲವು
ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ.
ಶಬ್ದಗಳನ್ನು
ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ.
ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ
ನಾವು ಕಲಿತಿರುವ ಭಾಷೆ
ಕಳೆದುಕೊಳ್ಳುತ್ತದೆ ತನ್ನ ಅಸ್ತಿತ್ವವನ್ನು.
ಯಾವುದನ್ನ ಶಬ್ದಗಳ ಮೂಲಕ
ಹೇಳಲಾಗುವುದಿಲ್ಲವೋ
ಅವನ್ನೆಲ್ಲ ಅರ್ಥಮಾಡಿಕೊಳ್ಳಲಾಗುತ್ತದೆ
ಮೌನದ ಮೂಲಕ.
~ ಶಮ್ಸ್ ತಬ್ರೀಝಿ
ಎಲ್ಲ ಆಳವಾದ ಸಂಗತಿಗಳು ವಿವರಿಸಲು ಅಸಾಧ್ಯವಾದಂಥವು. ನೀವು ಯಾವುದನ್ನ ವಿವರಿಸಬಲ್ಲಿರೋ ಅದು ಕೇವಲ ಮೇಲು ಮೇಲಿನದು. ಕೆಲವು ಸಂಗತಿಗಳನ್ನು ವಿವರಿಸುವುದು ಸಾಧ್ಯವಾಗುವುದೇ ಇಲ್ಲ.
ನೀವು ಯಾರೊಂದಿಗಾದರೂ ಪ್ರೇಮದಲ್ಲಿರುವಿರಾದರೆ, ನೀವು ಆ ಪ್ರೇಮದಲ್ಲಿ ತೊಡಗಿಸಿಕೊಂಡಿರುವುದು ಹೇಗೆ ಎಂದು ಹೇಗೆ ವಿವರಿಸುತ್ತೀರಿ? ಅವರ ಮುಖ, ಅವರ ಮೂಗು, ಅವರ ದನಿ, ಇವೇ ಮುಂತಾದ ಎಲ್ಲ ಕಾರಣಗಳೂ ಮೂರ್ಖತನದವು ಎನ್ನುವುದು ನಿಮಗೇ ಗೊತ್ತಾಗುತ್ತದೆ. ಹೇಳಬಹುದಾದ ಎಲ್ಲ ಕಾರಣಗಳೂ ಮೂರ್ಖ ಕಾರಣಗಳೇ, ನಿಜವಾದ ಕಾರಣವನ್ನು ಹೇಳುವುದು ಸಾಧ್ಯವಿಲ್ಲ, ಹೇಳಲಾಗದೇ ಇರುವಂಥದು ಏನೋ ಇದೆ ಆ ವ್ಯಕ್ತಿಯಲ್ಲಿ. ಹೇಳಬಹುದಾದ ಎಲ್ಲ ಕಾರಣಗಳು ನೀವು ಪ್ರೀತಿಸುತ್ತಿರುವುದರ ಕಾರಣಗಳಲ್ಲಿ ಸೇರಿವೆ ನಿಜ ಆದರೆ, ಹೇಳಲಾಗದ ಕಾರಣ ಇದೆಯಲ್ಲ ಅದು ಎಲ್ಲಕ್ಕಿಂತ ಮುಖ್ಯವಾದದ್ದು, ಬೇರೆಲ್ಲ ಕಾರಣಗಳನ್ನು ಸೇರಿಸಿಯೂ.
ಒಬ್ಬ ಪ್ರಸಿದ್ಧ ಕಲಾವಿದನ ಬಳಿ ಯುವ ಕಲಾವಿದನೊಬ್ಬ ಕಲಿಯಲು ಬರುತ್ತಿದ್ದ. ಆ ಯುವ ಕಲಾವಿದನಿಗೆ ಕಲೆ ಅಭಿಜಾತವಾಗಿ ಒಲಿದಿತ್ತು. ಅವನ ಅಪ್ರತಿಮ ಕಲಾ ಪ್ರತಿಭೆ ಕಂಡು ಗುರುವಿಗೆ ಅಸಾಧ್ಯ ಹೊಟ್ಚೆಕಿಚ್ಚು. ಏನಾದರೊಂದು ನೆಪ ಹುಡುಕಿ ಆ ಯುವ ಕಲಾವಿದನ ಮೇಲೆ ಹರಿ ಹಾಯುತ್ತಿದ್ದ, ಚಿತ್ರ ಬರಿಯಲಿಕ್ಕಲ್ಲ, ಮನೆಗೆ ಸುಣ್ಣ ಹಚ್ಚುವುದಕ್ಕೆ ಲಾಯಕ್ಕು ನೀನು ಎಂದು ಮಾತು ಮಾತಿಗೆ ಎಲ್ಲರ ಮುಂದೆ ಅಪಮಾನ ಮಾಡುತ್ತಿದ್ದ. ಕ್ರಮೇಣ ಆ ಯುವ ಕಲಾವಿದನ ಆತ್ಮವಿಶ್ವಾಸ ಕಡಿಮೆಯಾಗತೊಡಗಿತು.
ಒಂದು ದಿನ ಗೋಲ್ಡ್ ಫಿಶ್ ಪೇಂಟ್ ಮಾಡುವ ಕೆಲಸ ಯುವಕನ ಪಾಲಿಗೆ ಬಂತು. ಆತ ಕಣ್ಣು ಮುಚ್ಚಿ ತನ್ನ ದೊಡ್ಡಪ್ಪನ ಮನೆಯಲ್ಲಿದ್ದ ಗೋಲ್ಡ್ ಫಿಶ್ ಧ್ಯಾನಿಸುತ್ತ ಚಿತ್ರ ಬರೆದು ಮುಗಿಸಿದ.
ಆ ಚಿತ್ರ ನೋಡುತ್ತಿದ್ದಂತೆಯೇ ಕೆಂಡಾಮಂಡಲನಾದ ಗುರು “ಹೀಗಾ ಚಿತ್ರ ಬರೆಯೋದು? “ ಎಂದು ಶಿಷ್ಯನನ್ನು ಹಿಯಾಳಿಸುತ್ತ, ಆ ಚಿತ್ರವನ್ನು ಮುದುಡಿ ಮಾಡಿ ಅಲ್ಲೇ ಇದ್ದ ನೀರಿನ ಕೊಳಕ್ಕೆ ಎಸೆದ.
ಅಲ್ಲಿದ್ದ ಎಲ್ಲರೂ ನೋಡ ನೋಡುತ್ತಿದ್ದಂತೆಯೇ, ಆ ಮೀನಿನ ಚಿತ್ರ ನೀರಿಗೆ ಇಳಿದು ಈಸತೊಡಗಿತು.

