ಅನ್ವೇಷಕನಾಗುವುದೆಂದರೆ ( seeker ), ಜಗತ್ತಿಗೆ ಸಂಬಂಧಿಸಿದಂತೆ ಬಹುತೇಕ ಹುಚ್ಚನಾಗುವುದು. ನೀವು ಹುಚ್ಚುತನವನ್ನು ಪ್ರವೇಶ ಮಾಡುತ್ತಿದ್ದೀರ, ಆದರೆ ಅಲ್ಲಿ ಇರುವುದರಲ್ಲಿ ಹುಚ್ಚುತನವೊಂದೇ ವಿವೇಕಯುಕ್ತ ಸಂಗತಿ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
‘ಕಾರಣ’
ಭಾಷಣ ಮಾಡುತ್ತಿತ್ತು
” ಈ ಜಗತ್ತಿನಲ್ಲಿರೋದೆ ಆರು ದಿಕ್ಕುಗಳು
ಒಂದು ಹೆಚ್ಚಲ್ಲ, ಒಂದು ಕಡಿಮೆಯಲ್ಲ”
ಪ್ರೇಮ,
ಸುಮ್ಮನಿರಲಾಗದೇ ಬಾಯಿಬಿಟ್ಟಿತು,
” ಈ ಎಲ್ಲವನ್ನೂ ಮೀರಿದ
ದಾರಿಯೊಂದಿದೆ,
ನಾನು ಬೇಕಾದಷ್ಟು ಬಾರಿ
ಆ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದೇನೆ”
‘ಕಾರಣ’ ಕ್ಕೆ
ವ್ಯಾಪಾರಕ್ಕೊಂದು ದಾರಿ ಸಿಕ್ಕಿತು
ಆ ದಿಕ್ಕಿನಲ್ಲೊಂದು ಅಂಗಡಿ ಶುರುವಾಯಿತು.
ಆದರೆ
ಪ್ರೇಮದ ವ್ಯಾಪಾರದಲ್ಲಿ
ಬಳಕೆಯಾಗುವ ಕರೆನ್ಸಿಯೇ ಬೇರೆ.
‘ಕಾರಣ’
ಅಂಗಡಿ ಮುಚ್ಚಲೇಬೇಕಾಯಿತು.
– ರೂಮಿ
ನಮ್ಮ ಕಷ್ಟ ಏನೆಂದರೆ ನಾವು ಪ್ರೇಮದ ಭಾಷೆಯನ್ನ ಮರೆತುಬಿಟ್ಟಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ, ನಾವು ನಮ್ಮನ್ನು ತರ್ಕದೊಂದಿಗೆ ಅತಿಯಾಗಿ ಗುರುತಿಸಿಕೊಂಡಿರುವುದು. ತರ್ಕ ಎನ್ನುವುದು ತಪ್ಪೇನೂ ಅಲ್ಲ ಆದರೆ ಅದಕ್ಕೆ ಏಕಸ್ವಾಮ್ಯವನ್ನು ( monopolise) ಸಾಧಿಸುವ ಪ್ರವೃತ್ತಿ ಇದೆ. ಅದು ನಿಮ್ಮ ಇಡೀ ಅಸ್ತಿತ್ವಕ್ಕೆ ಅಂಟಿಕೊಂಡು ಬಿಡುತ್ತದೆ. ಆಗ ಭಾವನೆಗಳಿಗೆ ಹಾನಿಯಾಗುತ್ತದೆ, ಅವು ಹಸಿವೆ ನೀರಡಿಕೆಗಳಿಂದ ಬಳಲುತ್ತವೆ, ನೀವು ಬಹುತೇಕ ಭಾವನೆಗಳನ್ನು ಪೂರ್ಣವಾಗಿ ಮರೆತುಬಿಡುತ್ತೀರಿ. ಆಗ ಭಾವನೆ ಬಾಡುತ್ತ ಬಾಡುತ್ತ ಹೋಗಿ ಕೊನೆಗೆ ಸತ್ತು ಹೋಗಿಬಿಡುತ್ತದೆ, ಮತ್ತು ಆ ಸತ್ತ ಭಾವನೆ ನಿಮಗೆ ಭಾರವಾಗುತ್ತದೆ, ನಿಮ್ಮ ಹೃದಯದ ಜೀವಂತಿಕೆಯನ್ನು ನಾಶಮಾಡಿಬಿಡುತ್ತದೆ.
ಆಗ ನೀವು ಬದುಕನ್ನ ಹೇಗೋ ಜಗ್ಗಾಡುತ್ತ ಮುಂದುವರೆಸುತ್ತೀರಿ. ಬದುಕು ತನ್ನ ಮಾಂತ್ರಿಕತೆ, ತನ್ನ ಚಾರ್ಮ ಕಳೆದುಕೊಳ್ಳುತ್ತದೆ, ಏಕೆಂದರೆ ಪ್ರೇಮ ಇಲ್ಲವಾದಾಗ ಬದುಕಿನಲ್ಲಿ ಮಾಂತ್ರಿಕತೆಯೂ ಮಾಯವಾಗಿ ಬಿಡುತ್ತದೆ. ಬದುಕು ತನ್ನ ಕಾವ್ಯಾತ್ಮಕತೆಯನ್ನು ಕಳೆದುಕೊಂಡು ನಿರಸ ಗದ್ಯವಾಗಿಬಿಡುತ್ತದೆ. ಹೌದು ವ್ಯಾಕರಣ ಇರುತ್ತದೆ ನಿಜ, ಆದರೆ ಅಲ್ಲಿ ಹಾಡಿಗೆ ಯಾವ ಜಾಗವೂ ಇರುವುದಿಲ್ಲ. ಆಗ ಅದು ಆತ್ಮವಿಲ್ಲದ ದೇಹದಂತೆ.
ಬದುಕಿನಲ್ಲಿ ಸಮತೋಲನವನ್ನು ಸಾಧಿಸಲು , ತರ್ಕದಿಂದ ಭಾವನೆಗಳತ್ತ ಸಾಗುವುದು ಕೇವಲ ಧೈರ್ಯಶಾಲಿಗಳಿಗೆ ಮತ್ತು ಹುಚ್ಚರಿಗೆ ಮಾತ್ರ ಸಾಧ್ಯ. ಏಕೆಂದರೆ ಈ ಸಾಹಸಕ್ಕೆ ನೀವು ತೆರುವ ಬೆಲೆ, ನಿಮ್ಮ ತರ್ಕಭರಿತ ಮೈಂಡ್, ನಿಮ್ಮ ಗಣಿತಭರಿತ ಬುದ್ಧಿ.
ಯಾವಾಗ ನೀವು ತರ್ಕವನ್ನು ಹಿಂದೆ ಹಾಕಿ ಭಾವನೆಗಳಿಗೆ ಮಣೆ ಹಾಕುತ್ತೀರೋ ಆಗ, ಕೇಂದ್ರದಲ್ಲಿದ್ದ ಗದ್ಯದ ಸ್ಥಾನವನ್ನು ಕಾವ್ಯ, ಉದ್ದೇಶದ ಸ್ಥಾನವನ್ನು ಪ್ಲೇ, ಹಣದ ಸ್ಥಾನವನ್ನು ಧ್ಯಾನ ಆಕ್ರಮಿಸಿಕೊಳ್ಳುತ್ತವೆ. ಕೇಂದ್ರದಲ್ಲಿದ್ದ ಅಧಿಕಾರಶಾಹಿಯ ಸ್ಥಾನವನ್ನು ಸರಳತೆ, ನಿರ್ಲಿಪ್ತಿ, ಕೇವಲ ಖುಶಿ , ಮತ್ತು ಬಹುತೇಕ ಹುಚ್ಚು ಆಕ್ರಮಿಸಿಕೊಳ್ಳುತ್ತವೆ.

