ಜಗತ್ತನ್ನು ಬದಲಾಯಿಸುವುದು ( Changing the World ): ಓಶೋ 365 #Day 105

ನೀವೇ ಸ್ವತಃ ನಿಮ್ಮ ಜಗತ್ತು. ನಿಮ್ಮ ಮನೋಭಾವವನ್ನು (attitude) ಬದಲಾಯಿಸಿಕೊಂಡಾಗ ಮಾತ್ರ ನೀವು ಅಸ್ತಿತ್ವದಲ್ಲಿರುವ ಜಗತ್ತನ್ನೇ ನೀವು ಬದಲಾಯಿಸಿದಂತೆ. ಜಗತ್ತನ್ನು ಬದಲಾಯಿಸುವುದು ಸಾಧ್ಯವಿಲ್ಲ ಎಂದು ರಾಜಕಾರಣಿಗಳು ಶತ ಶತಮಾನಗಳಿಂದ ಹೇಳುತ್ತಲೇ ಬಂದಿದ್ದರೂ, ಅವರೆಲ್ಲ ತೀವ್ರವಾಗಿ ವಿಫಲರಾದ ರಾಜಕಾರಣಿಗಳು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಜಗತ್ತನ್ನು ಬದಲಾಯಿಸುವ ಏಕೈಕ ವಿಧಾನವೆಂದರೆ ನೀವು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದು, ಆಗ ಥಟ್ಟನೇ ನಿಮ್ಮನ್ನು ನೀವು ವಿಭಿನ್ನ ಜಗತ್ತಿನಲ್ಲಿ ಕಂಡುಕೊಳ್ಳುವಿರಿ. ನಾವೆಲ್ಲರೂ ಒಂದೇ ಜಗತ್ತಿನಲ್ಲಿ ಬದುಕುತ್ತಿಲ್ಲ ಮತ್ತು ನಾವೆಲ್ಲರೂ ಸಮಕಾಲೀನರಲ್ಲ. ಯಾರಾದರೂ ಭೂತ ಕಾಲದಲ್ಲಿ ಬದುಕುತ್ತಿದ್ದರೆ ಅವರು ಹೇಗೆ ನಿಮ್ಮ ಸಮಕಾಲೀನರಾಗುವುದು ಸಾಧ್ಯ? ಅವರು ನಿಮ್ಮ ಪಕ್ಕದಲ್ಲಿಯೇ ಕುಳಿತಿದ್ದರೂ ಭೂತ ಕಾಲದ ಬಗ್ಗೆ ಆಲೋಚನೆ ಮಾಡುತ್ತಿರಬಹುದು ; ಆಗ ಅವರು ನಿಮ್ಮ ಸಮಕಾಲೀನರಲ್ಲ. ನಿಮ್ಮ ಬಳಿ ಕುಳಿತಿರುವ ಇನ್ನೊಬ್ಬರು ಭವಿಷ್ಯದ ಬಗ್ಗೆ ಯೋಚಿಸುತ್ತಿರಬಹುದು, ಅವರೂ ನಿಮ್ಮ ಸಮಕಾಲೀನರಲ್ಲ. ಯಾವಾಗ ಇಬ್ಬರು ಸಧ್ಯದಲ್ಲಿ ( now & here ) ಬದುಕುವಾಗ, ಅವರು ಅವರಾಗಿರುವುದಿಲ್ಲ ಬದಲಾಗಿ ದೈವವಾಗಿರುತ್ತಾರೆ. ಇಬ್ಬರು ದೈವದಲ್ಲಿ ಒಂದಾದಾಗ ಮಾತ್ರ ಒಂದೇ ಜಗತ್ತಿನಲ್ಲಿ ಬದುಕುವುದು ಸಾಧ್ಯವಾಗುತ್ತದೆ.

ನೀವು ನಿಮ್ಮ ಸಂಗಾತಿಯೊಂದಿಗೆ ಅನೇಕ ವರ್ಷಗಳಿಂದ ಬದುಕುತ್ತಿರಬಹುದು ಆದರೆ ನೀವು ನಿಮ್ಮ ಜಗತ್ತಿನಲ್ಲಿ ಬದುಕುತ್ತಿದ್ದೀರಿ ಮತ್ತು ಅವಳು ತನ್ನ ಜಗತ್ತಿನಲ್ಲಿ. ಆದ್ದರಿಂದಲೇ ಎರಡು ಜಗತ್ತುಗಳ ನಡುವೆ ನಿರಂತರ ಘರ್ಷಣೆ. ನಿಧಾನವಾಗಿ ಈ ಘರ್ಷಣೆಯನ್ನು ತಪ್ಪಿಸುವುದನ್ನು ಇಬ್ಬರೂ ಕಲಿಯುತ್ತಾರೆ. ಇಂಥ ಬದುಕನ್ನೇ ನಾವು leaving together ( ಸಹ ಬಾಳ್ವೆ ) ಎನ್ನುವುದು : ಘರ್ಷಣೆಯನ್ನು ತಪ್ಪಿಸಲು ಹೆಣಗಾಡುವುದು. ಇದನ್ನೇ ನಾವು ಫ್ಯಾಮಿಲಿ ಎನ್ನುವುದು, ಸಮಾಜ ಎನ್ನುವುದು, ಹ್ಯೂಮ್ಯಾನಿಟಿ ಎನ್ನುವುದು. ಈ ಎಲ್ಲವೂ ಬೋಗಸ್. ಇಬ್ಬರೂ ದೈವದಲ್ಲಿ ಒಂದಾಗದ ಹೊರತು, ನೀವು ಇನ್ನೊಬ್ಬ ಗಂಡಿನೊಂದಿಗೆ ಅಥವಾ  ಹೆಣ್ಣಿನೊಂದಿಗೆ ನಿಜವಾಗಿಯೂ ಸಹಬಾಳ್ವೆ ಮಾಡುವುದು ಸಾಧ್ಯವಿಲ್ಲ. ಬೇರೆ ಯಾವ ಪ್ರೇಮ, ಬೇರೆ ಯಾವ ಫ್ಯಾಮಿಲಿ, ಬೇರೆ ಯಾವ ಸಮಾಜ ಸಾಧ್ಯವಿಲ್ಲ.

ನಸ್ರುದ್ದೀನ್ ನ ಹೆಂಡತಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂದಿತ್ತು.

“ ನಸ್ರುದ್ದೀನ್ ಗೆ ಕುದುರೆ ರೇಸ್ ಬಿಟ್ಟರೆ ಬೇರೆ ಬದುಕೇ ಇಲ್ಲ, ನಿಂತಾಗ, ಕೂತಾಗ, ನಿದ್ದೆಯಲ್ಲೂ ಕುದುರೆ ರೇಸ್ ವಿಚಾರ ಮಾತನಾಡುತ್ತಾನೆ. ಅವನಿಗೆ ನಮ್ಮ ಮದುವೆಯ ಆ್ಯನಿವರ್ಸರಿ ದಿನ ಕೂಡ ಗೊತ್ತಿಲ್ಲ. ಇಂಥ ಮನುಷ್ಯನೊಂದಿಗೆ ಬದುಕುವುದು ಕಷ್ಟ. ತಾವು ದಯವಿಟ್ಟು ನನಗೆ ನಸ್ರುದ್ದೀನ್ ನಿಂದ ವಿಚ್ಛೇದನ ಕೊಡಿಸಬೇಕು ಮಹಾಸ್ವಾಮಿ “

ನಸ್ರುದ್ದೀನ್ ನ ಹೆಂಡತಿ ತನ್ನ ಅಹವಾಲನ್ನು ನ್ಯಾಯಾಧೀಶರ ಎದುರು ಪ್ರಬಲವಾಗಿ ಮಂಡಿಸಿದಳು.

“ ನನ್ನ ಹೆಂಡತಿ ಸುಳ್ಳು ಹೇಳುತ್ತಿದ್ದಾಳೆ ಮಹಾಸ್ವಾಮಿ, ನನಗೆ ನಮ್ಮ ಆ್ಯನಿವರ್ಸರಿ ದಿನ ಗೊತ್ತು, ಆ ದಿನ ಕೆಂಟಕಿ ಡರ್ಬೀ ರೇಸ್ ನಲ್ಲಿ ಡಾರ್ಕ್ ಸ್ಟಾರ್ ಕುದುರೆ ಚಾಂಪಿಯನ್ ಆಗಿತ್ತು. ಅದನ್ನು ಹ್ಯಾಗೆ ಮರೆಯೋಕಾಗತ್ತೆ ? “

ನಸ್ರುದ್ದೀನ್ ತನ್ನ ಸಾಚಾತನವನ್ನು ದಾಖಲು ಮಾಡಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.