ಇದು ಧ್ಯಾನಿಯ ಕೆಲಸ : ಮೂಲ ತಂತನ್ನು ಗುರುತಿಸುವುದು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಜಗತ್ತು ನಿರಂತರ ಹರಿವಿನಲ್ಲಿ ಇದೆ, ನದಿಯಂತೆ. ಅದು ಹರಿಯುತ್ತಲೇ ಇರುತ್ತದೆ, ಆದರೆ ಈ ಹರಿವು, ಈ ಬದಲಾವಣೆಯ ಹಿಂದೆ ಈ ಎಲ್ಲವನ್ನೂ ಒಂದಾಗಿ ಇಡುವ ಎಳೆ, ತಂತು ಇರಲೇ ಬೇಕು. ಬದಲಾಗದೇ ಇರುವುದನ್ನು ಉಳಿಸಿಕೊಂಡು ಬದಲಾವಣೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಬದಲಾಗದಿರುವ ಸಂಗತಿಯನ್ನು ಒಪ್ಪಿಸಿಕೊಂಡೇ ಬದಲಾವಣೆ ಮುಂದುವರೆಯುತ್ತದೆ, ಇಲ್ಲವಾದರೆ ವಿಭಜನೆಯನ್ನು ತಪ್ಪಿಸುವುದು ಸಾಧ್ಯವಿಲ್ಲ.
ಬದುಕು ಹಾರದಂತೆ : ಹೂವುಗಳ ಮೂಲಕ ಹಾಯ್ದು ಹೋಗುತ್ತಿರುವ ದಾರದ ಎಳೆಯನ್ನು ನೀವು ಗಮನಿಸುವುದಿಲ್ಲ. ಆದರೆ ಅಲ್ಲಿ ದಾರದ ಎಳೆ ಇದೆ, ಹೂವುಗಳನ್ನ ಒಂದು ಮಾಡುತ್ತ. ದಾರ ಇರದೇ ಹೋಗುತ್ತಿದ್ದರೆ, ಹೂವುಗಳು ಚೆಲ್ಲಾಪಿಲ್ಲಿಯಾಗುತ್ತಿದ್ದವು ; ಅಲ್ಲಿ ಹೂವುಗಳ ರಾಶಿ ಇರಬಹುದಾಗಿತ್ತೇ ಹೊರತು ಹೂವಿನ ಮಾಲೆಯಲ್ಲ. ಹಾಗೆಯೇ ಅಸ್ತಿತ್ವ ಕೂಡ ಸಂಗತಿಗಳ ರಾಶಿಯಲ್ಲ ಅದು ಒಂದು ನಿರ್ದಿಷ್ಟ ರೀತಿಯಲ್ಲಿ ಪೋಣಿಸಿದ ಒಂದು ಹೆಣಿಗೆ. ಸಂಗತಿಗಳು ಬದಲಾಗುತ್ತಿವೆ ನಿಜ ಆದರೆ ಯಾವುದೋ ಒಂದು ಬದಲಾಗದಿರುವ ಸಂಗತಿ ಈ ಎಲ್ಲದರ ಹಿಂದೆ ಇರುವ cosmic law. ಈ ಕಾಸ್ಮಿಕ್ ಲಾ ನ ಸದಾಶಿವ ಎನ್ನಬಹುದು, ಶಾಶ್ವತ, ಸನಾತನ ದೈವ, ಕಾಲಾತೀತ ದೈವ, ಎಂದೂ ಬದಲಾಗದ ದೈವ ಎನ್ನಬಹುದು. ಮತ್ತು ಧ್ಯಾನಿಯ ಕೆಲಸವೇ ಇದರ ಹಿಂದೆ ಇರುವ ಎಳೆಯನ್ನು ಗುರುತಿಸುವುದು.
ಕೇವಲ ಎರಡು ಥರದ ಜನರಿರುತ್ತಾರೆ. ಒಂದು ಬಗೆಯವರು ಹೂವಿನ ಚೆಲುವಿಗೆ ಮಾರು ಹೋಗಿ, ಅವುಗಳನ್ನು ಪೋಣಿಸಿರುವ ದಾರದ ಎಳೆಯನ್ನು ಮರೆತುಬಿಡುತ್ತಾರೆ. ಅವರು ಅಂಥ ಮಹತ್ವದ್ದೇನಲ್ಲದ ಬದುಕನ್ನ ಬಾಳುತ್ತಾರೆ. ಏಕೆಂದರೆ ಅವರು ಮಾಡುವುದೆಲ್ಲವೂ ನಾಶವಾಗಿಬಿಡುತ್ತದೆ. ಇಂದು ಅವರು ಸಿದ್ಧಮಾಡಿದ್ದು ನಾಳೆ ಎನ್ನುವಷ್ಟರಲ್ಲಿ ನಾಶವಾಗಿಬಿಟ್ಟಿರುತ್ತದೆ. ಇವರು ಮರಳಿನ ಕೋಟೆಗಳನ್ನು ಕಟ್ಟುತ್ತಾರೆ ಅಥವಾ ಕಾಗದದ ದೋಣಿಯನ್ನು ಹರಿಬಿಡುತ್ತಾರೆ.
ಎರಡನೇಯ ರೀತಿಯ ಜನ, ಅಸ್ತಿತ್ವದ ಹಿಂದಿನ ಎಳೆಯನ್ನು ಹುಡುಕಲು ಮುಂದಾಗುತ್ತಾರೆ ಮತ್ತು ತಮ್ಮ ಇಡೀ ಬದುಕನ್ನು ಸ್ವೀಕರಿಸುವಿಕೆಗೆ, ಸಹಿಸುವಿಕೆಗೆ ಮುಡಿಪಾಗಿಡುತ್ತಾರೆ.

