ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ಮಹತ್ವದ ಸಂಗತಿಯೆಂದರೆ ಬುದ್ಧಿವಂತಿಕೆ, ವಿವೇಕವಲ್ಲ. ಮತ್ತು ಅದು ಹಾಗಾಗುವುದು ಸಾಧ್ಯವೂ ಇಲ್ಲ. ಹಾಗೆ ನೋಡಿದರೆ ಬುದ್ಧಿವಂತಿಕೆ ಅವಿವೇಕವೇ ಹೆಚ್ಚು. ಅದು ವಿವೇಕದ ಬೆಳೆಯುವಿಕೆಗೆ ಅಡ್ಡಗಾಲು ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ಬುದ್ಧಿವಂತಿಕೆ ಒಂದು ಖೊಟ್ಟಿ ನಾಣ್ಯ, ತಾನು ಸಾಚಾ ಎಂದು ತೋರಿಸಿಕೊಳ್ಳುವ ಕಪಟಿ. ಅದು ತನಗೆ ತಿಳುವಳಿಕೆ ಇದೆ ಎಂದು ತೋರಿಸಿಕೊಳ್ಳುತ್ತದೆ ಅಷ್ಟೇ. ವಾಸ್ತವದಲ್ಲಿ ಬುದ್ಧಿವಂತಿಕೆಗೆ ಏನೂ ಗೊತ್ತಿಲ್ಲ. ಇದು ಲಕ್ಷಾಂತರ ಜನರನ್ನು ಮೋಸ ಮಾಡುತ್ತಲೇ ಇದೆ. ಇದು ಬಹಳ ಸೂಕ್ಷ್ಮ, ನೀವು ಜಾಣರಾಗಿರದೇ ಇದ್ದರೆ ಇದು ನಿಮಗೆ ಗೊತ್ತೇ ಆಗುವುದಿಲ್ಲ. ಮತ್ತು ನಮ್ಮ ಬಾಲ್ಯದಿಂದಲೂ ನಾವು ಕಂಡಿಷನ್ಡ್ ಆಗಿರುವುದರಿಂದ ಇದು ನಮ್ಮ ಆಳದಲ್ಲಿ ಬೇರೂರಿದೆ.
ಬುದ್ಧಿವಂತರಾಗುವುದೆಂದರೆ ಮಾಹಿತಿಗಳನ್ನು ಸಂಗ್ರಹಿಸುತ್ತ ಹೋಗುವುದು. ಇದು ನಿಮ್ಮನ್ನು ಬದಲಾಯಿಸುವುದಿಲ್ಲ, ನೀವು ಹಾಗೇ ಉಳಿದುಕೊಂಡುಬಿಡುತ್ತೀರಿ, ನೀವು ಸಂಗ್ರಹಿಸಿದ ಮಾಹಿತಿಯ ಕಣಜ ದೊಡ್ಡದಾಗುತ್ತ ಹೋಗುತ್ತದೆ ಅಷ್ಟೇ. ಆದರೆ ವಿವೇಕ ನಿಮ್ಮನ್ನು ಬದಲಾಯಿಸುತ್ತದೆ. ಇದು ನಿಮ್ಮ ಒಳಗಿನ ಅಸ್ತಿತ್ವವನ್ನು ಹೊಸದಾಗಿಸುತ್ತದೆ. ಇದು ನೋಡುವಿಕೆಯ, ತಿಳಿಯುವಿಕೆಯ, ಇರುವಿಕೆಯ ಹೊಸ ಕ್ವಾಲಿಟಿಯನ್ನು ಸೃಷ್ಟಿ ಮಾಡುತ್ತದೆ. ಹಾಗಾಗಿ ಮನುಷ್ಯ ಬುದ್ಧಿವಂತನಾಗದೆಯೂ ವಿವೇಕಿಯಾಗಿರುವ ಅವಕಾಶ ಸಾಧ್ಯ. ಮತ್ತು ಹಾಗೆಯೇ ಅತಿಯಾದ ಮಾಹಿತಿಯ ಮನುಷ್ಯನೂ ವಿವೇಕಿಯಾಗಿರದ ಸಾಧ್ಯತೆ ಉಂಟು.
ಜಗತ್ತಿನಲ್ಲಿ ಬಹುತೇಕ ಹೀಗಾಗಿರುವುದೇ ಹೆಚ್ಚು : ಜನ ಹೆಚ್ಚು ಅಕ್ಷರಸ್ತರಾಗಿದ್ದಾರೆ, ಹೆಚ್ಚು ಪರೀಕ್ಷೆ ಪಾಸು ಮಾಡಿದ್ದಾರೆ ಆದರೆ ವಿವೇಕದ ವಿಷಯದಲ್ಲಿ ಹೀಗೆ ಹೇಳಲಿಕ್ಕಾಗುವುದಿಲ್ಲ. ಈಗ ಸಾರ್ವತ್ರಿಕ ಶಿಕ್ಷಣ ಎಲ್ಲರಿಗೂ ಲಭ್ಯವಿದೆ, ಆದ್ದರಿಂದ ಎಲ್ಲರೂ ಬುದ್ಧಿವಂತರಾಗಿದ್ದಾರೆ ಆದರೆ ಇವರಿಗೆಲ್ಲ ವಿವೇಕ ದಕ್ಕದೇ ಹೋಗಿದೆ. ಕಾಗದದ ಪುಟಗಳಲ್ಲಿ ಎಲ್ಲ ಬುದ್ಧಿವಂತಿಕೆ ಲಭ್ಯವಿರುವಾಗ ವಿವೇಕ ಯಾರಿಗೆ ತಾನೇ ಬೇಕು? ವಿವೇಕವನ್ನು ಗಳಿಸಿಕೊಳ್ಳಲು, ಸಮಯ ಬೇಕು, ಸಾಮರ್ಥ್ಯ ಬೇಕು , ಸಾಧನೆ ಬೇಕು, ಸಮರ್ಪಣೆ ಬೇಕು.
ಪ್ರವಾಸಿ ವಿದ್ವಾಂಸನೊಬ್ಬ ಊರಿನಲ್ಲಿ ಜ್ಞಾನಿಯೆಂದು ಹೆಸರಾಗಿದ್ದ ಮುಲ್ಲಾ ನಸ್ರುದ್ದೀನ್ ನನ್ನು ಊಟಕ್ಕೆಂದು ಉಪಹಾರ ಗೃಹಕ್ಕೆ ಆಹ್ವಾನಿಸಿದ. ಪ್ರವಾಸಿ ವಿದ್ವಾಂಸ ನಸ್ರುದ್ದೀನ್ ನನ್ನು ವಿಚಾರಿಸಿ ಅವನಿಗೆ ಪ್ರಿಯವಾದ ಕುರಿಯ ಕಬಾಬ್ ಆರ್ಡರ್ ಮಾಡಿದ. ಹೊಟೇಲಿನವ ಒಂದು ದೊಡ್ಡ ಮತ್ತು ಒಂದು ಚಿಕ್ಕ ಕಬಾಬ್ ನ ಪೀಸ್ ಗಳ ತಟ್ಟೆಯನ್ನು ಮುಲ್ಲಾ ನಸ್ರುದ್ದೀನ್ ನ ಮುಂದೆ ತಂದಿಟ್ಟ. ಅವನು ತಟ್ಟೆ ಇಟ್ಟದ್ದೇ ತಡ ನಸ್ರುದ್ದೀನ್ ಗಬಕ್ಕನೇ ದೊಡ್ಡ ಕಬಾಬ್ ಪೀಸ್ ಎತ್ತಿಕೊಂಡು ತನ್ನ ತಟ್ಟೆಯಲ್ಲಿ ಹಾಕಿಕೊಂಡ. ಇದನ್ನು ನೋಡಿ ಪ್ರವಾಸಿ ವಿದ್ವಾಂಸನಿಗೆ ಆಶ್ಚರ್ಯ ಮತ್ತು ಕಸಿವಿಸಿ ಆಯ್ತು.
“ ನಸ್ರುದ್ದೀನ್ ನಿನ್ನ ಈ ವರ್ತನೆ ಊಟದ ಶಿಷ್ಟಾಚಾರ ಅಷ್ಟೇ ಅಲ್ಲ ನೈತಿಕವಾಗಿ ಮತ್ತು ಧಾರ್ಮಿಕವಾಗಿ ಕೂಡ ಸರಿ ಅಲ್ಲ”
ಪ್ರವಾಸಿ ವಿದ್ವಾಂಸ ಈ ವಿಷಯವಾಗಿ ನಸ್ರುದ್ದೀನ್ ನ ಎದುರು ಒಂದು ದೀರ್ಘ ಪ್ರವಚನವನ್ನೇ ಮಾಡಿದ.
ವಿದ್ವಾಂಸನ ಮಾತು ಮುಗಿದ ನಂತರ ನಸ್ರುದ್ದೀನ್ ಪ್ರಶ್ನೆ ಮಾಡಿದ.
“ ಹಾಗಾದರೆ ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ? “
“ ನಾನು ಕಬಾಬ್ ನ ಚಿಕ್ಕ ಪೀಸ್ ತೊಗೊತಾ ಇದ್ದೆ “
ಪ್ರವಾಸಿ ವಿದ್ವಾಂಸ ಉತ್ತರಿಸಿದ.
“ ನನಗೆ ಮೊದಲೇ ಗೊತ್ತಿತ್ತು ನೀವು ಚಿಕ್ಕ ಕಬಾಬ್ ಪೀಸ್ ತೊಗೋತೀರಿ ಅಂತ . ತಗೊಳ್ಳಿ ಮತ್ತೆ ಸುಮ್ನೇ ಯಾಕೆ ಚರ್ಚೆ “ ಎನ್ನುತ್ತ ನಸ್ರುದ್ದೀನ್ ತಟ್ಟೆಯಲ್ಲಿದ್ದ ಚಿಕ್ಕ ಕಬಾಬ್ ಪೀಸ್ ತೆಗೆದು ವಿದ್ವಾಂಸನ ತಟ್ಟೆಯಲ್ಲಿಟ್ಟ.

