ಮೊದಲಿನಿಂದಲೂ ನಿಮಗೆ “ಧೈರ್ಯವಾಗಿರಿ” ಎನ್ನುವ ಅಹಂಕಾರಿಕ ಮಾತುಗಳನ್ನೇ ಕಲಿಸಲಾಗಿದೆ. ಎಂಥ ಮೂರ್ಖತನ ಇದು ! ಒಬ್ಬ ಜಾಣ ಮನುಷ್ಯ ಭಯವನ್ನು ಹೇಗೆ ಅವಾಯ್ಡ್ ಮಾಡಬಲ್ಲ ? ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ಪ್ರತಿಯೊಬ್ಬರೂ ಭಯಗ್ರಸ್ತರಾಗಿದ್ದಾರೆ – ಆಗಿರಲೇ ಬೇಕು. ಬದುಕೇ ಹಾಗೆ, ಭಯ ನಮ್ಮ ಭಾಗವಾಗಿರಲೇ ಬೇಕು. ಭಯರಹಿತ ಜನ ಭಯರಹಿತರಾಗಿರುವುದು ಅವರು ಧೈರ್ಯಶಾಲಿಗಳು ಎಂದಲ್ಲ, ಏಕೆಂದರೆ ಧೈರ್ಯಶಾಲಿಗಳು ಕೇವಲ ತಮ್ಮ ಭಯವನ್ನು ಅದುಮಿಟ್ಟುಕೊಂಡಿದ್ದಾರೆ ; ನಿಜದಲ್ಲಿ ಅವರು ಭಯರಹಿತರಲ್ಲ.
ಒಬ್ಬ ವ್ಯಕ್ತಿ ಭಯರಹಿತರಾಗುವುದು ತಮ್ಮ ಭಯಗಳನ್ನು ಒಪ್ಪಿಕೊಂಡಾಗ ಮಾತ್ರ. ಧೈರ್ಯದ ಪ್ರಶ್ನೆಯಲ್ಲ. ಇದು ಬದುಕಿನ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಮತ್ತು ಭಯ, ಸ್ವಾಭಾವಿಕ, ಸಹಜ ಎನ್ನುವುದನ್ನ ಅರಿತುಕೊಳ್ಳುವುದು. ಒಪ್ಪಿಕೊಂಡರೆ OK. ಆದರೆ ಸಮಸ್ಯೆ ಹುಟ್ಟಿಕೊಳ್ಳುವುದೇ, ನೀವು ಅವುಗಳನ್ನು ನಿರಾಕರಿಸಲು ತೀರ್ಮಾನಿಸಿದಾಗ. ಮೊದಲಿನಿಂದಲೂ ನಿಮಗೆ “ಧೈರ್ಯವಾಗಿರಿ” ಎನ್ನುವ ಅಹಂಕಾರಿಕ ಮಾತುಗಳನ್ನೇ ಕಲಿಸಲಾಗಿದೆ. ಎಂಥ ಮೂರ್ಖತನ ಇದು ! ಒಬ್ಬ ಜಾಣ ಮನುಷ್ಯ ಭಯವನ್ನು ಹೇಗೆ ಅವೊಯಿಡ್ ಮಾಡಬಲ್ಲ ?
ಬಸ್ ಡ್ರೈವರ್ ಹಾರ್ನ್ ಮಾಡುತ್ತಿರುವಾಗಲೂ ನೀವು ಬೆಚ್ಚದೇ, ರಸ್ತೆಯ ಮಧ್ಯೆ ನಿಂತಿರುವಿರಿ. ಅಥವಾ ಗೂಳಿ ನಿಮ್ಮತ್ತ ನುಗ್ಗಿ ಬರುತ್ತಿರುವಾಗಲೂ ನೀವು ಕದಲದೇ ಅದಕ್ಕೆ ಎದುರಾಗಿ ನಿಂತಿರುವಿರಿ – ಇದು ಅಪ್ಪಟ ಮೂರ್ಖತನ. ಒಬ್ಬ ಜಾಣ ಮುನುಷ್ಯ ಇಂಥ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪಕ್ಕ ಸರಿಯಲೇ ಬೇಕು. ಭಯ ಬಹಳ ಸ್ವಾಭಾವಿಕ.
ಬದುಕಿನಲ್ಲಿ ಭಯಗಳು ಇರುವುದೇ ಇಲ್ಲ ಎಂದೇನಲ್ಲ. ನಿಮಗೆ ಗೊತ್ತಾಗುತ್ತದೆ ತೊಂಭತ್ತು ಪ್ರತಿಶತ ಭಯಗಳು ಕೇವಲ ಕಾಲ್ಪನಿಕ, ಮತ್ತು ಹತ್ತು ಪ್ರತಿಶತ ಮಾತ್ರ ವಾಸ್ತವಿಕ, ಆದ್ದರಿಂದ ಅವುಗಳನ್ನ ಒಪ್ಪಿಕೊಳ್ಳಲೇ ಬೇಕು. ಆದ್ದರಿಂದ ನೀವು ರೆಸ್ಪಾನ್ಸಿವ್ ಆಗಿ, ಸಂವೇದನಾಶೀಲರಾಗಿ, ಜಾಗೃತರಾಗಿ, ಇಷ್ಟು ಸಾಕು. ಆಗ ನಿಮಗೇ ಗೊತ್ತಾಗುತ್ತದೆ, ನೀವು ನಿಮ್ಮ ಭಯಗಳನ್ನು ಹೇಗೆ ಗೆಲುವಿನ ಮೆಟ್ಟಲುಗಳಾಗಿಸಿಕೊಳ್ಳಬಹುದೆಂದು.
ಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು.
“ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ “
ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ ಅಮ್ಮನ ಮಾತು ಕೇಳುವಂತೆ ಆದೇಶ ಮಾಡಿದ. ಆಮೇಲೆ ತನ್ನ ಮುಖವನ್ನು ಭಯಂಕರವಾಗಿ ಕಿವಿಚಿ, ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ಆ ಮಗನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ಅವನು ಎಷ್ಟು ಭೀಕರವಾಗಿ ಕಾಣಿಸುತ್ತಿದ್ದನೆಂದರೆ ತಾಯಿ ಹೆದರಿ ಮೂರ್ಛೆ ಹೋಗಿಬಿಟ್ಟಳು. ಮುಲ್ಲಾ ಕೋಣೆಯಿಂದ ಹೊರಗೆ ಓಡಿ ಹೋಗಿಬಿಟ್ಟ.
ತಾಯಿ ಮೂರ್ಛೆಯಿಂದ ಹೊರಗೆ ಬಂದ ಮೇಲೆ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು, “ ನಿಮಗೆ ನನ್ನ ಮಗನಲ್ಲಿ ಹೆದರಿಕೆ ತುಂಬುವಂತೆ ಕೇಳಿಕೊಂಡಿದ್ದೆ ನನ್ನಲ್ಲಲ್ಲ “
ತಾಯಿಯ ಮಾತಿಗೆ ಮುಲ್ಲಾ ಉತ್ತರಿಸತೊಡಗಿದ “ ಅಮ್ಮಾ ಒಮ್ಮೆ ಭಯವನ್ನು ಹುಟ್ಟಿಸಿದ ಮೇಲೆ ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಭಯಕ್ಕೆ ವಿಶೇಷ ಪ್ರೀತಿ ಪಾತ್ರರು ಯಾರೂ ಇಲ್ಲ. ನೀವು ನೋಡಲಿಲ್ಲ ಅನಿಸತ್ತೆ ನಾನೂ ಕೋಣೆ ಬಿಟ್ಟು ಓಡಿ ಹೊಗಿದ್ದೆ “

