ನೀವು ಯಾಕೆ ಇಲ್ಲಿ ಇರುವಿರಿ ಎನ್ನುವ ಮೂಲ ಸಮಸ್ಯೆ, ನೀವು ನಿಮ್ಮ ಅಸ್ತಿತ್ವದ ತಿರುಳನ್ನು ತಲುಪಿದಾಗ ಮಾತ್ರ ಮಾಯವಾಗುತ್ತದೆ, ಅದಕ್ಕಿಂತ ಮೊದಲು ಖಂಡಿತ ಅಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನ ಸೃಷ್ಟಿಯಲ್ಲಿ
ಮನುಷ್ಯನ ಸ್ಥಾನ ಅನನ್ಯ.
“ ನನ್ನ ಚೇತನವನ್ನೇ
ಮನುಷ್ಯನಿಗಾಗಿ ಧಾರೆ ಎರೆದಿದ್ದೆನೆ “
ಎನ್ನುತ್ತಾನೆ ಭಗವಂತ.
ಭೂಮಿಯ ಮೇಲೆ ಭಗವಂತನ ರಾಯಭಾರಿಗಳನ್ನಾಗಿ
ನಮ್ಮನ್ನು (ಯಾವ ವಿನಾಯತಿಯೂ ಇಲ್ಲದೆ)
ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಆದರೆ
ಯಾವತ್ತಾದರೂ ನಾವು
ಭಗವಂತನ ಪ್ರತಿನಿಧಿಗಳ ಹಾಗೆ ವರ್ತಿಸಿದ್ದೀವಾ?
ನೆನಪಿರಲಿ
ನಮ್ಮೊಳಗಿನ ದಿವ್ಯ ಚೇತನವನ್ನು ಕಂಡುಕೊಳ್ಳುವುದು
ಮತ್ತು ಅದನ್ನು ಜೀವಿಸುವುದು
ಮಾತ್ರ
ಭಗವಂತನಿಗೆ ನಾವು ಸಲ್ಲಿಸಬಹುದಾದ
ನಿಜವಾದ ಕೃತಜ್ಞತೆ.
~ ಶಮ್ಸ್ ತಬ್ರೀಝಿ
ನೀವು ಆಳವಾಗಿ ಧ್ಯಾನಿಸದೇ ಹೋದರೆ, ತಿಳುವಳಿಕೆ ಖಂಡಿತವಾಗಿ ಹುಟ್ಟಿಕೊಳ್ಳುವುದಿಲ್ಲ. ಇದನ್ನು ನಿಮಗೆ ಯಾರೂ ಕೊಡುವುದು ಸಾಧ್ಯವಾಗುವುದಿಲ್ಲ; ನೀವೇ ಇದನ್ನು ಗಳಿಸಿಕೊಳ್ಳಬೇಕು. ಆಗ ಮಾತ್ರ ಎಲ್ಲ ಸಮಸ್ಯೆಗಳ ಪರಿಹಾರ ಸಾಧ್ಯ.
ನೀವು ಯಾಕೆ ಇಲ್ಲಿ ಇರುವಿರಿ ಎನ್ನುವ ಮೂಲ ಸಮಸ್ಯೆ, ನೀವು ನಿಮ್ಮ ಅಸ್ತಿತ್ವದ ತಿರುಳನ್ನು ತಲುಪಿದಾಗ ಮಾತ್ರ ಮಾಯವಾಗುತ್ತದೆ, ಅದಕ್ಕಿಂತ ಮೊದಲು ಖಂಡಿತ ಅಲ್ಲ. ಆ ತಿರುಳನ್ನು ತಲುಪಿದಾಗ ನಿಮಗೆ ಗೊತ್ತಾಗುತ್ತದೆ, ನೀವು ಸದಾ ಇಲ್ಲೇ ಇರುವಿರಿ ಎನ್ನುವುದು. ನೀವು ಈ ಇಡೀ ಸಮಸ್ತದ ಭಾಗ ಮಾತ್ರ. ನದಿ, ಸಮುದ್ರವನ್ನು ಸೇರುತ್ತದೆ ಮತ್ತು ಸಮುದ್ರದ ನೀರು ಆವಿಯಾಗಿ ಮೋಡಗಳಾಗುತ್ತವೆ. ಮೋಡ ಮಳೆಯಾಗಿ, ಮಳೆ ನದಿ ಸೇರಿ, ಮತ್ತೆ ನದಿ ಸಮುದ್ರವನ್ನು ಸೇರುತ್ತದೆ, ಮತ್ತೆ ಸಮುದ್ರದ ನೀರು ಮೋಡವಾಗುತ್ತದೆ…. ಇದು ಹೀಗೊಂದು ಚಕ್ರ. ನೀವು ಇಲ್ಲಿ ಅನೇಕ ಬಾರಿ ಇರುವಿರಿ, ಮುಂದೆಯೂ ಅನೇಕ ಬಾರಿ ಇರಲಿರುವಿರಿ. ಅಸ್ತಿತ್ವಕ್ಕೆ ಯಾವ ಶುರುವಾತು ಯಾವ ಕೊನೆ ಇಲ್ಲ, ಇದು ಸನಾತನ.
ಇದನ್ನ ನಾನು ನಿಮಗೆ ಹೇಳಬಹುದು ಆದರೆ ಇದು ನಿಮ್ಮಲ್ಲಿ ತಿಳುವಳಿಕೆಯನ್ನ ಹುಟ್ಟಿಸುವುದಿಲ್ಲ. ಯಾವಾಗ ನೀವು ನಿಮ್ಮ ಒಳಗಿನ ಆಳವನ್ನು ತಲುಪಿ, ಅಂತರಾಳದ ಗುಡಿಯ ಬಾಗಿಲನ್ನು ತೆರೆದು ಒಳಗೆ ಪ್ರವೇಶ ಮಾಡುತ್ತೀರೋ , ಆಗ ಥಟ್ಟನೇ ನಿಮಗೆ ಅರಿವಾಗುತ್ತದೆ, ನೀವು ಯಾವತ್ತೂ ಇಲ್ಲಿಯೇ ಇರುವಿರಿ ಎನ್ನುವುದು.
ದೇವಸ್ಥಾನದಲ್ಲಿ ಕಸಗುಡಿಸುತ್ತಿದ್ದ ಝೆನ್ ಮಾಸ್ಟರ್ ನನ್ನು ಸನ್ಯಾಸಿ ಪ್ರಶ್ನಿಸಿದ.
ಸನ್ಯಾಸಿ : ಮಾಸ್ಟರ್, ನಿಮ್ಮಂಥ ಮಹಾಜ್ಞಾನಿ ಕಸಗುಡಿಸುವಂಥ ತುಚ್ಛ ಕೆಲಸದಲ್ಲಿ ಸಮಯ ವ್ಯರ್ಥ ಮಾಡೋದು ಸರಿಯೇ?
ಮಾಸ್ಟರ್ : ಏನು ಮಾಡೋದು? ಹೊರಗಿಂದ ಕಸ ಬಂದಿತ್ತು ಅದಕ್ಕೇ ಸ್ವಚ್ಛ ಮಾಡುತ್ತಿದ್ದೆ.
ಸನ್ಯಾಸಿ : ಇದು ಅತ್ಯಂತ ಸ್ವಚ್ಛ ದೇವಾಲಯ, ಇಲ್ಲೆಲ್ಲಿದೆ ಕಸ ಮಾಸ್ಟರ್,
ಮಾಸ್ಟರ್ : ಆಹ್! ನೋಡು ಮತ್ತಷ್ಟು ಕಸ.

