“ಇದು ಮತ್ತು ಅದು” ಅಲ್ಲದ ಸ್ಥಿತಿಯಲ್ಲಿ ಮಾತ್ರ ಒಬ್ಬರು ಶಾಶ್ವತವಾಗಿ ನೆಲೆಗೊಳ್ಳಬಹುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.
ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.
ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.
~ ಲಾವೋತ್ಸೇ
ಈ ಸ್ಥಿತಿಗೆ ಮೌನ ಮತ್ತು ನೆಮ್ಮದಿಯ ಕ್ವಾಲಿಟಿ ಇದೆ. ಖಂಡಿತ ಮೊದಮೊದಲು ಇದು ರುಚಿಹೀನ ಅನಿಸಬಹುದು ಏಕೆಂದರೆ ಇಲ್ಲಿ ನೋವು ಮತ್ತು ನಲಿವು ಎರಡೂ ಇಲ್ಲ. ಆದರೆ ಈ ಎಲ್ಲ ನೋವು – ನಲಿವುಗಳು ಕೇವಲ ಎಕ್ಸೈಟಮೆಂಟ್ ಮಾತ್ರ. ಯಾವ ಎಕ್ಸೈಟಮೆಂಟ್ ನಿಮಗೆ ಇಷ್ಟವಾಗುತ್ತದೆಯೋ ಅದನ್ನು ನೀವು ನಲಿವು ಎಂದು ಕರೆಯುತ್ತೀರಾದರೆ, ಯಾವುದು ನಿಮಗೆ ಇಷ್ಟವಾಗುವುದಿಲ್ಲವೋ ಅದು ನಿಮಗೆ ನೋವು. ಕೆಲವೊಮ್ಮೆ ನೀವು ಒಂದು ಎಕ್ಸೈಟಮೆಂಟ್ ನ ಇಷ್ಟಪಡಲು ಶುರು ಮಾಡುತ್ತೀರಿ ಅದು ನಿಮಗೆ ಸುಖ ಆಗಬಹುದು. ಮತ್ತು ಒಮ್ಮೊಮ್ಮೆ ನೀವು ಇಷ್ಟಪಡುವ ಎಕ್ಸೈಟಮೆಂಟ್ ನಿಮಗೆ ದುಃಖವಾಗಿ ಪರಿಣಮಿಸಬಹುದು. ನೀವು ಇಷ್ಟಪಡುವುದೇ ಒಮ್ಮೆ ನಿಮಗೆ ಸುಖವಾದರೆ ಇನ್ನೊಮ್ಮೆ ನೋವು. ಎಲ್ಲ ನಿರ್ಭರವಾಗಿರುವುದು ನಿಮ್ಮ ಲೈಕ್ ಮತ್ತು ಡಿಸ್ ಲೈಕ್ ಗಳ ಮೇಲೆ.
ನೋವು ಮತ್ತು ನಲಿವಿನ ಜಾಗಗಳ ನಡುವೆ ರಿಲ್ಯಾಕ್ಸ್ ಆಗಿ. ಅದು ಪ್ರಶಾಂತತೆಯ ಅತ್ಯಂತ ಸಹಜ ಜಾಗ. ಒಮ್ಮೆ ನೀವು ಈ ಈ ಜಾಗದಲ್ಲಿ ಇರಲು ಶುರು ಮಾಡಿದರೆ, ಈ ಜಾಗವನ್ನು ಫೀಲ್ ಮಾಡಿಕೊಳ್ಳಲು ಶುರು ಮಾಡಿದರೆ, ನಿಮಗೆ ಇದರ ರುಚಿಯ ಪರಿಚಯವಾಗುವುದು. ಇದನ್ನೇ ನಾನು “ತಾವೋ ರುಚಿ” ಎನ್ನುವುದು. ಇದು ಥೇಟ್ ವೈನ್ ನ ಹಾಗೆ. ಮೊದಮೊದಲು ಕಹಿ ಅನಿಸುತ್ತದೆ. ಈ ಕುಡಿಯುವುಕೆಯನ್ನ ಕಲಿಯಬೇಕು. ಒಮ್ಮೆ ನಿಮಗೆ ಸಹಜವಾಗಿಬಿಟ್ಟರೆ ಇದು ಮೌನ ಮತ್ತು ನೆಮ್ಮದಿಯ ಅದ್ಭುತ ನಶೆ. ಆಮೇಲೆ ನೀವು ಮೌನ ಮತ್ತು ನೆಮ್ಮದಿಯಲ್ಲಿ ಮತ್ತರಾಗಿಬಿಡುತ್ತೀರ. ಈ ರುಚಿ ಮೊದಮೊದಲು ಕಹಿ ಅನಿಸುತ್ತದೆ ಏಕೆಂದರೆ, ನಿಮ್ಮ ನಾಲಿಗೆ ಇನ್ನೂ ನೋವು ನಲಿವುಗಳ ಒಡನಾಟ ಬಿಟ್ಟುಕೊಟ್ಟಿಲ್ಲ.
ಮುಲ್ಲಾ ನಸ್ರುದ್ದೀನ್ ಮೇಲಿಂದ ಮೇಲೆ ತನ್ನ ಕತ್ತೆಯನ್ನ ಕಳೆದುಕೊಳ್ಳುತ್ತಿದ್ದ. ಒಮ್ಮೆ ಹೀಗೆ ತನ್ನ ಕಳೆದುಕೊಂಡ ಕತ್ತೆಯನ್ನ ಹುಡುಕುತ್ತ ಮುಲ್ಲಾ ಹಾಡುತ್ತ, ಕುಣಿಯುತ್ತ ಭಗವಂತನಿಗೆ ಧನ್ಯವಾದ ಹೇಳುತ್ತ ಒಂದು ಊರಿನ ರಸ್ತೆಯ ಮೂಲಕ ಹಾಯ್ದು ಹೋಗುತ್ತಿದ್ದ.
ಮುಲ್ಲಾ ಇಷ್ಟು ಖುಶಿಯಾಗಿದ್ದನ್ನ ಕಂಡ ಒಬ್ಬ ದಾರಿಹೋಕ ಪ್ರಶ್ನೆ ಮಾಡಿದ.
“ ಯಾಕೆ ನಸ್ರುದ್ದೀನ್ ಇಷ್ಟು ಖುಶಿಯಾಗಿದ್ದೀಯ ? ಯಾರೋ ಹೇಳಿದರು ನಿನ್ನ ನೆಚ್ಚಿನ ಕತ್ತೆ ಕಾಣೆಯಾಗಿದೆಯೆಂದು, ಆದರೂ ನೀನು ಖುಶಿಯಾಗಿದ್ದೀಯಲ್ಲ, ಕತ್ತೆ ಸಿಕ್ತಾ? “
“ ಇನ್ನೂ ಸಿಕ್ಕಿಲ್ಲ ಗೆಳೆಯ ಆದರೆ ಖುಶಿಯ ವಿಷಯ ಏನು ಗೊತ್ತಾ, ಆ ಕತ್ತೆ ಕಳೆದು ಹೋದಾಗ ಅದೃಷ್ಟವಶಾತ್ ನಾನು ಆ ಕತ್ತೆಯ ಮೇಲೆ ಕೂತಿರಲಿಲ್ಲ, ಹಾಗೇನಾದರೂ ಕೂತಿದ್ದರೆ ನಾನೂ ಕಳೆದು ಹೋಗಿ ಬಿಡುತ್ತಿದ್ದೆ “
ಮುಲ್ಲಾ ತನ್ನ ಖುಶಿಯ ಕಾರಣ ವಿವರಿಸಿದ.
ನಸ್ರುದ್ದೀನ್ ಗೆ ಕತ್ತೆ ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಏಕೆಂದರೆ ಅವನಿಗೆ ಖುಶಿಯಿಂದ ಬದುಕುವ ಕಲೆ ಗೊತ್ತು.

