ಸಂಶಯ ಎಂದರೆ ನೀವು ಇನ್ನೂ ಯಾವ ನಿರ್ಧಾರ ಮಾಡಿಲ್ಲ ; ಮತ್ತು ನೀವು ಮುಕ್ತ ಮನಸ್ಸಿನಿಂದ ಕೇಳಿ ತಿಳಿದುಕೊಳ್ಳಲು ಸಿದ್ಧರಾಗಿರುವಿರಿ. ಎಲ್ಲ ಶುರುವಾತಿಗೆ ಸಂಶಯ ಅತ್ಯುತ್ತಮ ಪ್ರಾರಂಭಿಕ ಹಂತ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರು ಅವರು
ನನ್ನ ಆಟ ಕೆಡಿಸುತ್ತಿರುವವರು?
ನಾನು ಬಲಕ್ಕೆ ಬಿಟ್ಟ ಬಾಣ
ಎಡಕ್ಕೆ ಹೇಗೆ ಬಂತು?
ಜಿಂಕೆಯ ಬೆನ್ನುಹತ್ತಿದವನ
ಹಂದಿ ಯಾಕೆ ಅಟ್ಟಿಸಿಕೊಂಡು ಬಂತು?
ಅಂಗಡಿಗೆ ಹೊರಟವನ ಕಾಲುಗಳನ್ನ
ಜೈಲಿನತ್ತ ಹೊರಳಿಸಿದವರು ಯಾರು?
ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ
ನಾನೇ ಜಾರಿ ಬಿದ್ದದ್ದು ಹೇಗೆ?
ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ.
ಅದಕ್ಕೇ, ನಮ್ಮ ಬೇಕುಗಳ ಬಗ್ಗೆ
ನಮಗೆ ಪುಟ್ಟ ಸಂಶಯ ಇರಲೇಬೇಕು.
-ರೂಮಿ.
ಸಂಶಯ ಕೆಟ್ಟದ್ದಲ್ಲ. ನಕಾರಾತ್ಮಕತೆ ಸಂಪೂರ್ಣವಾಗಿ ವಿಭಿನ್ನ ಸಂಗತಿ. ನಕಾರಾತ್ಮಕತೆ ಎಂದರೆ ನೀವು ಈಗಾಗಲೇ ಒಂದು ಸಂಗತಿಯ ವಿರುದ್ಧ ಪೋಸಿಷನ್ ತೆಗೆದುಕೊಂಡಿರುವಿರಿ. ಸಂಶಯ ಎಂದರೆ ನೀವು ಇನ್ನೂ ಯಾವ ನಿರ್ಧಾರ ಮಾಡಿಲ್ಲ ; ಮತ್ತು ನೀವು ಮುಕ್ತ ಮನಸ್ಸಿನಿಂದ ಕೇಳಿ ತಿಳಿದುಕೊಳ್ಳಲು ಸಿದ್ಧರಾಗಿರುವಿರಿ. ಎಲ್ಲ ಶುರುವಾತಿಗೆ ಸಂಶಯ ಅತ್ಯುತ್ತಮ ಪ್ರಾರಂಭಿಕ ಹಂತ.
ಸಂಶಯ ಎಂದರೆ ಒಂದು ಹುಡುಕಾಟ, ಒಂದು ಪ್ರಶ್ನೆ. ನಕಾರಾತ್ಮಕತೆ ಎಂದರೆ ನೀವು ಈಗಾಗಲೇ ಸಂಗತಿಯ ಬಗ್ಗೆ ಪೂರ್ವಾಗ್ರಹ ಹೊಂದಿದ್ದೀರಿ, ಅಪನಂಬಿಕೆ ನಿಮ್ಮ ಮನಸ್ಸಿನಲ್ಲಿದೆ. ನೀವು ಈಗಾಗಲೇ ನಿರ್ಧಾರ ಮಾಡಿಬಿಟ್ಟಿದ್ದೀರಿ. ನಿಮ್ಮ ಪೂರ್ವಾಗ್ರಹವನ್ನು ಸರಿ ಎಂದು ಪ್ರೂವ್ ಮಾಡಬೇಕಾಗಿರುವುದಷ್ಟೇ ನೀವು ಈಗ ಮಾಡಬೇಕಾಗಿರುವ ಕೆಲಸ.
ಸಂಶಯ ಅಧ್ಯಾತ್ಮಿಕ ಸಂಗತಿಯಾದರೆ, ನಕಾರಾತ್ಮಕತೆ ಒಂದು ಕಾಯಿಲೆ.
ಒಂಜು ದಿನ ನಸ್ರುದ್ದೀನ್ ಡಾಕ್ಟರ್ ಬಳಿ ತನ್ನ ತೊಂದರೆ ಹೇಳಿಕೊಂಡ.
“ ಡಾಕ್ಟರ್ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವು “
“ ಸರಿಯಾಗಿ, ವಿವರವಾಗಿ ಹೇಳು “ ಡಾಕ್ಟರ್ ನಸ್ರುದ್ದೀನ್ ಮೇಲೆ ರೇಗಿದರು.
ನಸ್ರುದ್ದೀನ್ ತನ್ನ ತೋರು ಬೆರಳನಿಂದ ಹಣೆ, ಮೂಗು, ಕತ್ತು, ಎದೆ, ಮೂಣಕಾಲು ಮುಟ್ಟಿ ತೋರಿಸಿದ, “ಎಲ್ಲಿ ಮುಟ್ಟಿದರೂ ನೋವಾಗುತ್ತದೆ ಡಾಕ್ಟರ್ “
ಡಾಕ್ಟರ್ ಗೆ ಸಂಶಯ ಬಂದು ನಸ್ರುದ್ದೀನ್ ನ ತೋರು ಬೆರಳಿನ ಎಕ್ಸರೇ ಮಾಡಿದರು, ಅವನ ತೋರು ಬೆರಳು ಫ್ರ್ಯಾಕ್ಚರ್ ಆಗಿತ್ತು.
************************

