ಅಹಂ ( Ego ): ಓಶೋ 365 #Day 126



ನಿಮ್ಮನ್ನು ನೀವು ಒಪ್ಪಿಕೊಂಡುಬಿಟ್ಟರೆ ನೀವು ಅಹಂಕಾರಿಗಳಾಗುತ್ತೀರಿ ಎನ್ನುವ ಚಿಂತೆ ನಿಮ್ಮನ್ನು ಕಾಡುತ್ತಿದೆಯೆ? ಅಹಂ ಬಗ್ಗೆ ಮರೆತು ಬಿಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.

ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.

‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.

ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.

~ ಶಮ್ಸ್ ತಬ್ರೀಝಿ

ನಿಮ್ಮನ್ನು ನೀವು ಒಪ್ಪಿಕೊಂಡು ಬಿಡಿ, ಆಮೇಲೆ ನೋಡೋಣ ಅಹಂ ಎಂದರೆ ಏನೆಂದು ; ಮೊದಲು ಸಂಪೂರ್ಣವಾಗಿ ನಿಮ್ಮನ್ನು ನೀವು ಒಪ್ಪಿಕೊಳ್ಳಿ. ಅಹಂ ಇರಲಿ ಅಡ್ಡಿ ಇಲ್ಲ, ಅಹಂ ಅಂಥ ಮಹತ್ವದ ಸಮಸ್ಯೆ ಏನಲ್ಲ. ಮತ್ತು ಅದು ದೊಡ್ಡ ಸಮಸ್ಯೆಯಾಗಿ ಬೆಳೆದುಬಿಟ್ಟರೆ ಅದನ್ನು ಒಡೆಯುವುದು ಇನ್ನೂ ಸುಲಭ. ಇದು ಬಲೂನ್ ನ ಹಾಗೆ – ಅದು ಉಬ್ಬಿ ದೊಡ್ಡದಾಗುತ್ತಿದ್ದಂತೆ, ಅದನ್ನು ಒಂದು ಸೂಜಿಯ ಮೊನೆಯಿಂದ ಒಡೆದುಬಿಡಬಹುದು.ಅಹಂ ಇರಲಿ ಅಡ್ಡಿ ಇಲ್ಲ, ಇದಕ್ಕೆ ಪರವಾನಗಿ ಇದೆ. ಆದರೆ ಮೊದಲು ನಿಮ್ಮನ್ನು ನೀವು ಸ್ವೀಕಾರ ಮಾಡಿ, ನಂತರ ಸಂಗತಿಗಳು ಬದಲಾಗಲು ಆರಂಭಿಸುತ್ತವೆ. ಹಾಗೆ ನೋಡಿದರೆ, ಸಂಪೂರ್ಣ ಸ್ವೀಕಾರ ಎಂದರೆ ಅದು ನಿಮ್ಮ ಅಹಂ ನ್ನೂ ಒಳಗೊಂಡಂತೆ. ಮೊದಲು ನಿಮ್ಮನ್ನು ನೀವು ಪೂರ್ತಿಯಾಗಿ ಒಪ್ಪಿಕೊಳ್ಳಲು ಶುರು ಮಾಡಿ.

ಜಗತ್ತಿಗೆ ಮಹಾ ಅಹಂಕಾರಿಗಳ ಅವಶ್ಯಕತೆಯೂ ಇದೆ. ನಮಗೆ ಎಲ್ಲ ಬಗೆಯ ಜನ ಬೇಕು

ಮಾಸ್ಟರ್ ಬಾಂಕಿಯ ಪ್ರವಚನಗಳಿಗೆ ಬರೀ ಅವನ ಶಿಷ್ಯರಷ್ಟೇ ಅಲ್ಲ ಸುತ್ತಮುತ್ತಲಿನ ಊರುಗಳ ಎಲ್ಲಾ ಸ್ತರದ ಜನರೂ ಸೇರುತ್ತಿದ್ದರು.

ಬಾಂಕಿ, ತನ್ನ ಪ್ರವಚನದಲ್ಲಿ ಸಂಕೀರ್ಣ ಬೌದ್ಧ ಸೂತ್ರಗಳನ್ನು ಬಳಸುತ್ತಿರಲಿಲ್ಲ ಬದಲಾಗಿ ಸರಳವಾಗಿ ಝೆನ್ ಬಳಕೆಯನ್ನು ನೇರವಾಗಿ ಸಾಮಾನ್ಯ ಜನರಿಗೆ ಮುಟ್ಟುವಂತೆ ವಿವರಿಸುತ್ತಿದ್ದ.

ಅವನ ಸಭೆಗಳಿಗೆ ಸೇರುತ್ತಿದ್ದ ಅಪಾರ ಜನಸಂಖ್ಯೆಯನ್ನು ಕಂಡು ಆ ಊರಿನ ದೇವಸ್ಥಾನದ ಮುಖ್ಯ ಅರ್ಚಕನಿಗೆ ತಂಬಾ ಸಿಟ್ಟು ಬರುತ್ತಿತ್ತು. ಅವನ ಹತ್ತಿರ ಬರುತ್ತಿದ್ದ ಸುಮಾರು ಜನ ಈಗ ಬಾಂಕಿಯ ಪ್ರವಚನ ಕೇಳಲು ಹೋಗುತ್ತಿದ್ದರು.

ಒಂದು ದಿನ ಅರ್ಚಕ,  ಬಾಂಕಿಯ ಸಭೆಗೆ ಬಂದು ಅವನನ್ನು ವಾಗ್ವಾದಕ್ಕೆ ಆಹ್ವಾನಿಸಿದ,

“ ಬಾಂಕಿ, ಇಲ್ಲಿ ಕುಳಿತಿರುವವರಿಗೆಲ್ಲ ನೀನು ಮೋಡಿ ಮಾಡಿದ್ದೀ. ಆದ್ದರಿಂದ ಅವರು ನಿನ್ನ ಮಾತು ಕೇಳುತ್ತಾರೆ. ನಿನ್ನ ಮಾತುಗಳಿಗೆ ಅಂಥ ಶಕ್ತಿ ಇದ್ದರೆ, ನಾನು ನಿನ್ನ ಮಾತು ಕೇಳುವಂತೆ ಮಾಡು ನೋಡೋಣ “

ಬಾಂಕಿ ಪ್ರೀತಿಯಿಂದ ಅರ್ಚಕನನ್ನು ಮಾತಾಡಿಸಿದ.

ಬಾಂಕಿ : ಗುರುಗಳೇ, ಇಲ್ಲಿ ಮೇಲೆ ಬನ್ನಿ  ಸಾಧ್ಯವಾದರೆ ನಿಮ್ಮ ಪಂಥವನ್ನು ಸ್ವೀಕರಿಸುತ್ತೇನೆ

ಅರ್ಚಕ ಎಲ್ಲ  ಜನರನ್ನು ನೂಕಿಕೊಂಡು ವೇದಿಕೆಯ ಹತ್ತಿರ ಹೋದ.

ಬಾಂಕಿ : ಇಲ್ಲಿ ಮೇಲೆ ಬನ್ನಿ , ನನ್ನ ಎಡಕ್ಕೆ ಕುಳಿತುಕೊಳ್ಳಿ.

ಅರ್ಚಕ ವೇದಿಕೆಯನ್ನೇರಿ ಎಡ ಭಾಗದಲ್ಲಿ ಕುಳಿತುಕೊಂಡ.

ಬಾಂಕಿ : ಓಹ್ ! ಅಲ್ಲಿ ಬೇಡ, ನನ್ನ ಬಲಕ್ಕೆ ಕುಳಿತುಕೊಳ್ಳಿ ಮಾತಿಗೆ ಅನುಕೂಲವಾಗುವುದು.

ಅರ್ಚಕ ಎದ್ದು ಬಾಂಕಿಯ ಬಲಕ್ಕೆ ಹೋಗಿ ಕುಳಿತುಕೊಂಡ.

ಬಾಂಕಿ : ನೋಡಿ, ನೀವು ತುಂಬ ಒಳ್ಳೆಯ ಮನುಷ್ಯರ ಹಾಗೆ ಕಾಣುತ್ತೀರಿ. ನನ್ನ ಎಲ್ಲ ಮಾತುಗಳನ್ನು ನಮ್ರತೆಯಿಂದ ಪಾಲಿಸಿದಿರಿ. ಈಗ ಹೋಗಿ ಕೆಳಗೆ ಕುಳಿತು ಪ್ರವಚನ ಕೇಳಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.