ದಾರಿ ಸಿದ್ಧಪಡಿಸುವುದು ( Preparing the way ): ಓಶೋ 365 #Day 127

 ಜ್ಞಾನೋದಯ ಯಾವಾಗ ಆಗಬೇಕೋ ಆವಾಗಲೇ ಆಗುತ್ತದೆ, ನೀವು ಮಾಡುವುದು ಏನೂ ಇಲ್ಲ. ಆದರೆ ನೀವು ಏನಾದರೂ ಮಾಡುವುದಿದ್ದರೆ ಅದು ಈ ಜ್ಞಾನೋದಯಕ್ಕೆ ದಾರಿಯನ್ನು ಸಿದ್ಧಪಡಿಸುವುದು ಮಾತ್ರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸೊಸಾನ್ ನ ಈ ಮಾತು ದ್ವಂದ್ವ ಅಲ್ಲ.
ಅವಸರ ಮತ್ತು ವೇಗ ಕಾರಣವಾಗಿ ನೀವು
ನಿಮ್ಮ ಎದುರಿಗಿನ ಸತ್ಯವನ್ನು
ನೀವು ಕಾಣದೇ ಹೋಗುವಿರಿ.

ನನ್ನ ಭೇಟಿ ಮಾಡುವ ಜನರದ್ದು ಒಂದೇ ಪ್ರಶ್ನೆ.
“ಜ್ಞಾನೋದಯ ಯಾವಾಗ ನಮಗೆ ಸಾಧ್ಯ? ಯಾವಾಗ?”

ನನ್ನ ಉತ್ತರ….. “ಈಗ”

ಅವರು ನಂಬುವುದಿಲ್ಲ. ಆದರೆ ನನ್ನ ನಂಬಿ.
ಜ್ಞಾನೋದಯ ನಿಮಗೆ ಸಾಧ್ಯವಾಗುವುದಾದರೆ
ಅದು ‘ಈಗ’
ತಪ್ಪಿದರೆ ಇನ್ನೊಂದು ‘ಈಗ’
ಅದೂ ತಪ್ಪಿದರೆ ಮತ್ತೊಂದು ‘ಈಗ’
ಯಾವಾಗಲೂ ‘ಈಗ’ ಮಾತ್ರ”
ಜ್ಞಾನೋದಯಕ್ಕೆ
ಬೇರೆ ಯಾವ ಸಮಯವೂ ಸಾಧ್ಯವಿಲ್ಲ.

ಹೌದು ನೀವು ಕಾಯುತ್ತ ಕುಳಿತರೂ,
ಅವಸರ ಮಾಡಿದರೂ, ಸಾಧ್ಯವಿಲ್ಲ.
ಜ್ಞಾನೋದಯ ಸಾಧ್ಯವಾಗುವುದಾದರೆ
ಅದು ‘ಈಗ’ ಮತ್ತು ‘ಇಲ್ಲಿ’ ಮಾತ್ರ.

ಹೇಗೆ ಕಾಲ ಮತ್ತು ದೇಶ ಎರಡು ಪದಗಳಲ್ಲವೋ
ಹಾಗೆಯೇ, ‘ಈಗ ಮತ್ತು ಇಲ್ಲಿ (Now & Here)’
ಎರಡೂ ಬೇರೆ ಬೇರೆ ಪದಗಳಲ್ಲ.

~ Hsin Hsin Ming

ಜ್ಞಾನೋದಯವನ್ನು ಒತ್ತಾಯಪೂರ್ವಕವಾಗಿ ಸಾಧ್ಯಮಾಡಿಕೊಳ್ಳುವದಕ್ಕಾಗುವುದಿಲ್ಲ. ಇದು ಕಾರಣ-ಪರಿಣಾಮಗಳ ( cause & effect) ಪರಿಧಿಯಿಂದ ಹೊರಗೆ. ನೀವು ಮಾಡಬಹುದಾದದ್ದು ಏನೆಂದರೆ ಜ್ಞಾನೋದಯದ ದಾರಿಯನ್ನು ಸಿದ್ಧ ಮಾಡಿಕೊಳ್ಳುವುದು ಮಾತ್ರ. ಆದರೆ ಜ್ಞಾನೋದಯ ಯಾವಾಗ ಆಗಬೇಕೋ ಆವಾಗಲೇ ಆಗುತ್ತದೆ. ಆದರೆ ನೀವು ಜ್ಞಾನೋದಯಕ್ಕೆ ಸಿದ್ಧರಾಗಿರದೇ ಹೋದರೆ ಅದು ನಿಮ್ಮನ್ನು ಬೈಪಾಸ್ ಮಾಡಿಬಿಡಬಹುದು ಮತ್ತು ಅದು ಸಂಭವಿಸಿದಾಗ ನೀವು ಅದನ್ನು ಗುರುತಿಸದೇ ಹೋಗಬಹುದು.

ಬಹಳಷ್ಟು ಜನ ತಮ್ಮ ಸ್ವಾಭಾವಿಕ ಬದುಕಿನ ದಾರಿಯಲ್ಲಿ ಸಟೋರಿ, ಸಮಾಧಿ, ಜ್ಞಾನೋದಯದ ಮೊದಲ ಹೊಳಹುಗಳ ಹತ್ತಿರ ಬರುತ್ತಾರೆ, ಆದರೆ ಅವರು ಅದಕ್ಕೆ ಸಿದ್ಧರಾಗಿಲ್ಲವಾದ್ದರಿಂದ, ಅವರಿಗೆ ಅದನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಇದು ಹೇಗೆಂದರೆ ಅತ್ಯಮೂಲ್ಯ ವಜ್ರವನ್ನು ಅದರ ಬಗ್ಗೆ ಗೊತ್ತೇ ಇಲ್ಲದವನ ಕೈಯಲ್ಲಿ ಕೊಟ್ಟಂತೆ. ಅವನು ಅದನ್ನು ಸಾಧಾರಣ ಕಲ್ಲು ಎಂದು ತಿಳಿದುಕೊಂಡುಬಿಡಬಹುದು. ಏಕೆಂದರೆ ಅವನಿಗೆ ಅದನ್ನು ವಜ್ರ ಎಂದು ಗುರುತಿಸುವ ಯಾವ ತಿಳುವಳಿಕೆಯೂ ಇಲ್ಲ.

ಆದ್ದರಿಂದ ವಜ್ರವನ್ನು ಗುರುತಿಸಬಲ್ಲ ಅಕ್ಕಸಾಲಿಗನ ತಿಳುವಳಿಕೆಯನ್ನು ಸಂಪಾದಿಸಬೇಕು. ಆದರೆ ಜ್ಞಾನೋದಯವನ್ನು ಪ್ರಯತ್ನದಿಂದ ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಅದು ಯಾವಾಗ ಸಂಭವಿಸಬೇಕೋ ಆಗಲೇ ಸಂಭವಿಸುತ್ತದೆ. ಆದರೆ ಅದು ಸಂಭವಿಸಿದಾಗ ಮಾತ್ರ ಅದನ್ನು ಗುರುತಿಸಲು ನಾವು ತಯಾರಾಗಿರಬೇಕು ಅಷ್ಟೇ. ನೀವು ಧ್ಯಾನವನ್ನು ನಿಲ್ಲಿಸಿದರೆ, ನಿಮ್ಮ ಜ್ಞಾನೋದಯದ ತಯಾರಿಯೂ ಕಾಣೆಯಾಗಿಬಿಡುತ್ತದೆ. ಧ್ಯಾನವನ್ನು ಮುಂದುವರೆಸಿ ಆಗ ಮಾತ್ರ ನೀವು ಜ್ಞಾನೋದಯಕ್ಕೆ ಸಿದ್ಧರಾಗುವಿರಿ, ಆಗ ಮಾತ್ರ ನಿಮ್ಮ ಅಣು ಅಣುವೂ ಮಿಡಿಯುತ್ತದೆ, ಮತ್ತು ಜ್ಞಾನೋದಯ ನಿಮ್ಮ ಹತ್ತಿರ ಬಂದಾಗ ಅದನ್ನು ಗುರುತಿಸಲು ಸಿದ್ಧರಾಗಿರುವಿರಿ.

ವಯಸ್ಸಾಗಿದ್ದ ಝೆನ್ ಮಾಸ್ಟರ್ ತೀರಿಕೊಂಡಿದ್ದ. ಅವನ ಕೆಲವು ಶಿಷ್ಯರು ಮಾಸ್ಟರ್ ನ ಅವಗುಣಗಳ ಬಗ್ಗೆ , ಅವನಿಗೆ ಹೆಂಗಸರ ಚಟ ಇತ್ತು, ಕುಡಿಯುತ್ತಿದ್ದ, ಸೇದುತ್ತಿದ್ದ ಹೀಗೆಲ್ಲ ಗಾಸಿಪ್ ಮಾಡುತ್ತಿದ್ದರು.

ಒಂದು ದಿನ ತುಂಬಾ ಜ್ಞಾನಿ ಎಂದು ಖ್ಯಾತಳಾಗಿದ್ದ ಒಬ್ಬಳು ಝೆನ್ ಮಾಸ್ಟರ್ ಆ ಆಶ್ರಮಕ್ಕೆ ಬಂದಳು. ಅವಳೆದುರು ಶಿಷ್ಯರು ತೀರಿಹೋಗಿದ್ದ ತಮ್ಮ ಮಾಸ್ಟರ್ ನ ಅವಗುಣಗಳನ್ನು ಬಣ್ಣಿಸಿ ಹೇಳಿದರು.

“ ಹೌದಾ? ಆದರೆ ಅವನಿಗೆ ಜ್ಞಾನೋದಯವಾಗಿದ್ದು ನಿಮಗೆ ಗೊತ್ತಾ? “ ಆಕೆ ಶಿಷ್ಯರನ್ನು ಕೇಳಿದಳು.

“ ಇಲ್ಲ, ಗೊತ್ತಿಲ್ಲ. ನಿಮಗೆ ಹೇಗೆ ಗೊತ್ತು? “ ಶಿಷ್ಯರು ಅವಳನ್ನು ಪ್ರಶ್ನೆ ಮಾಡಿದರು.

“ನಿಮ್ಮ ನಡುವೆ ಅವನು ಬದುಕಿದ್ದ ಎಂದರೆ ಬೇರೆ ಯಾವ ಸಾಧ್ಯತೆಯನ್ನೂ ನನಗೆ ಊಹಿಸಲಿಕ್ಕೆ ಆಗದು” ಆಕೆ ಉತ್ತರಿಸಿದಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.