ನಾವು ನಮ್ಮ ಪ್ರೇಮದ ಬೇರುಗಳಿಂದ ಹೊರತಾಗಿಬಿಟ್ಟಿದ್ದೇವೆ. ಜನ, ಪ್ರೇಮರಹಿತ ಬದುಕನ್ನು ಬದುಕುತ್ತಿದ್ದಾರೆ, ಹೇಗೋ ಬದುಕನ್ನ ಜಗ್ಗಾಡುತ್ತ. ಹಾಗಾದರೆ ಏನು ಮಾಡುವುದು? ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ಯಾವ ದಿಕ್ಕಾದರೂ ಸರಿ
ಅಂಥ ವ್ಯತ್ಯಾಸವೆನೂ ಆಗದು.
ನಿಮ್ಮ ಗುರಿ ಏನಾದರೂ ಇರಲಿ,
ಆದರೆ ಪ್ರತೀ ಪ್ರಯಾಣ
ನಿಮ್ಮ ಆಂತರ್ಯದ ಪ್ರಯಾಣವಾಗುವುದನ್ನ
ಖಚಿತಪಡಿಸಿಕೊಳ್ಳಿ ದಯಮಾಡಿ.
ನೀವು ನಿಮ್ಮ ಅಂತರಂಗವನ್ನು ಪ್ರವೇಶಿಸಿದಾಗ
ಇಡೀ ಜಗತ್ತನ್ನೇ ಎದುರುಗೊಳ್ಳುತ್ತೀರಿ
ಮತ್ತು ಜಗತ್ತಿನಾಚೆಗೂ ಹೆಜ್ಜೆ ಹಾಕುತ್ತೀರಿ.
~ ಶಮ್ಸ್ ತಬ್ರೀಝಿ
ಮೊನ್ನೆ ಜೀನ್ ಪಾಲ್ ಸಾರ್ತ್ರೆ ಬರೆದ ಸಾಲೊಂದನ್ನ ಓದುತ್ತಿದ್ದೆ. ಸಾರ್ತ್ರೆ ಬರೀತಾರೆ, “ಒಂದು ಮಗು ರೈಲಿನಲ್ಲಿ ನಿದ್ದೆ ಹೋಗಿದೆ. ಟಿಕೇಟ್ ಕಲೆಕ್ಟರ್ ಮಗುವನ್ನು ಎಬ್ಬಿಸಿ ಟಿಕೇಟ್ ಕೇಳ್ತಾನೆ. ಮಗುವಿನ ಹತ್ತಿರ ಟಿಕೇಟ್ ಇಲ್ಲ, ಮತ್ತು ಟಿಕೇಟ್ ಕೊಳ್ಳಲು ಹಣವೂ ಇಲ್ಲ. ಬದುಕು ಥೇಟ್ ಈ ಮಗುವಿನ ಸ್ಥಿತಿಯಂತೆ”.
ಮಗುವಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ, ತಾನು ಯಾಕೆ ರೈಲಿನಲ್ಲಿದ್ದೇನೆ ಮತ್ತು ತಾನು ತಲುಪಬೇಕಾದ ಜಾಗ ಯಾವುದು ಎನ್ನುವುದೂ ಗೊತ್ತಿಲ್ಲ. ಕೊನೆಪಕ್ಷ ಮಗುವಿಗೆ ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಅವಕಾಶವೂ ಇಲ್ಲ. ಏಕೆಂದರೆ ಈ ರೈಲನ್ನು ಹತ್ತಬೇಕು ಎನ್ನುವ ನಿರ್ಧಾರವೂ ಅದರದಲ್ಲ.
ಆಧುನಿಕ ಮೈಂಡ್ ಗೆ ಇಂಥ ಪರಿಸ್ಥಿತಿ ಹೆಚ್ಚು ಹೆಚ್ಚು ಕಾಮನ್ ಆಗಿದೆ, ಏಕೆಂದರೆ ನಾವು ಹೇಗೂ ನಮ್ಮ ಬೇರಿನಿಂದ ಹೊರತಾಗಿಬಿಟ್ಟಿದ್ದೇವೆ ಮತ್ತು ಅರ್ಥವನ್ನು ಮಿಸ್ ಮಾಡಿಕೊಂಡು ಬಿಟ್ಟಿದ್ದೇವೆ. ಯಾಕೆ? ನಾನು ಎಲ್ಲಿಗೆ ಹೊರಟಿದ್ದೇನೆ? ಎಲ್ಲರೂ ಈ ಪ್ರಶ್ನೆ ಕೇಳುತ್ತಿದ್ದಾರೆ. ನಿಮಗೆ ಗೊತ್ತಿಲ್ಲ ನೀವು ರೈಲನ್ನು ಹತ್ತಿರುವ ಕಾರಣ. ನಿಮ್ಮ ಬಳಿ ರೈಲಿನ ಟಿಕೇಟ್ ಇಲ್ಲ ಮತ್ತು ಟಿಕೇಟ್ ಕೊಂಡುಕೊಳ್ಳಲು ಹಣವೂ ಇಲ್ಲ ಹಾಗು ನಿಮಗೆ ರೈಲಿನಿಂದ ಹೊರಗೆ ಬರುವ ಅವಕಾಶವೂ ಇಲ್ಲ. ಎಲ್ಲವೂ ಅಸ್ತವ್ಯಸ್ತ, ಎಲ್ಲವೂ ಹುಚ್ಚಾಟ.
ಯಾಕೆ ಹೀಗಾಗುತ್ತಿದೆಯೆಂದರೆ ನಾವು ನಮ್ಮ ಪ್ರೇಮದ ಬೇರುಗಳಿಂದ ಹೊರತಾಗಿಬಿಟ್ಟಿದ್ದೇವೆ. ಜನ, ಪ್ರೇಮರಹಿತ ಬದುಕನ್ನು ಬದುಕುತ್ತಿದ್ದಾರೆ, ಹೇಗೋ ಬದುಕನ್ನ ಜಗ್ಗಾಡುತ್ತ. ಹಾಗಾದರೆ ಏನು ಮಾಡುವುದು?
ನನಗೆ ಗೊತ್ತು, ಪ್ರತಿಯೊಬ್ಬರೂ ಒಮ್ಮಿಲ್ಲ ಒಮ್ಮೆ ರೈಲಿನಲ್ಲಿ ಮಲಗಿರುವ ಮಗುವಿನ ಪರಿಸ್ಥಿತಿಯನ್ನು ಅನುಭವಿಸುತ್ತಾರೆ. ಆದರೂ ಬದುಕು ವಿಫಲವಲ್ಲ, ಏಕೆಂದರೆ ಈ ದೊಡ್ಡ ರೈಲಿನಲ್ಲಿ ಲಕ್ಷಗಟ್ಟಲೇ ಜನ ಗಾಢ ನಿದ್ದೆಯಲ್ಲಿದ್ದರೂ , ಯಾವಾಗಲೂ ಕೆಲವರಾದರೂ ಎಚ್ಚರವಾಗಿರುತ್ತಾರೆ. ಮಗು, ನಿದ್ದೆ ಮಾಡದಿರುವ, ಗೊರಕೆ ಹೊಡೆಯದಿರುವವರನ್ನು ಹುಡುಕಬಹುದು, ಪ್ರಜ್ಞಾಪೂರ್ವಕವಾಕವಾಗಿ ಈ ರೈಲನ್ನು ಹತ್ತಿರುವ ವ್ಯಕ್ತಿಯನ್ನು, ತಾನು ಎಲ್ಲಿಗೆ ಹೋಗುತ್ತಿರುವೆ ಎನ್ನುವುದು ಗೊತ್ತಿರುವ ವ್ಯಕ್ತಿಯನ್ನು ಮಗು ಹುಡುಕಿ, ಅವನ ಸಾಂಗತ್ಯದಲ್ಲಿ ತಾನೂ ಈ ಕುರಿತು ಪ್ರಜ್ಞೆಯನ್ನು ಗಳಿಸುವ ಅವಕಾಶವನ್ನು ಪಡೆಯಬಹುದು.
ಒಮ್ಮೆ ಮುಲ್ಲಾ ನಸ್ರುದ್ದೀನ, ರೈಲು ಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಗೆ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ, ಚೀಲಗಳಲ್ಲಿ ತನ್ನ ಟಿಕೇಟ್ ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ.
“ ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ? “
“ ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟ ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿ ಬಿಡುತ್ತದಲ್ಲ “
ಮುಲ್ಲಾ ಉತ್ತರಿಸಿದ.

