ಥಿಂಕಿಗ್, ಅರ್ಥೈಸುವಿಕೆಯ ಚಟ ಅಲ್ಲದೇ ಬೇರೇನೂ ಅಲ್ಲ. ಯಾವಾಗ ಥಿಂಕಿಂಗ್ ಮಾಯವಾಗುತ್ತದೆಯೋ ಆಗ ಬುದ್ಧಿ – ಮನಸ್ಸಿನ ( mind) ಕೊಳ, ಯಾವ ಸದ್ದು ಗದ್ದಲ, ಯಾವ ಅಲೆಗಳಿಲ್ಲದೇ ಪ್ರಶಾಂತವಾಗಿರುವುದು. ಅಂಥ ಕೊಳದಲ್ಲಿ ಮಾತ್ರ ಚಂದ್ರ ಪರಿಪೂರ್ಣವಾಗಿ ಪ್ರತಿಫಲಿಸುತ್ತಾನೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ನದಿಯ ಒಳಗಿರುವ ಚಂದ್ರ
ಕೇವಲ ಪ್ರತಿಬಿಂಬವಲ್ಲ.
ನದಿಯ ತಳದಿಂದಲೇ ಚಂದ್ರ ಸಂಭಾಷಣೆ.
ನಾನು ಈ ನದಿಯೊಂದಿಗೆ
ಸತತವಾಗಿ ಮಾತನಾಡುತ್ತ
ಪ್ರಯಾಣ ಮಾಡುತ್ತಿದ್ದೇನೆ.
ಯಾವುದು ಮೇಲಿದೆಯೋ
ನದಿಯ ಹೊರಗಿರುವಂತೆ ಕಾಣುತ್ತಿದೆಯೋ
ಆ ಎಲ್ಲವೂ ಮನೆ ಮಾಡಿಕೊಂಡಿರುವುದು
ನದಿಯ ಒಳಗೆ.
ನೀವೂ ಒಂದಾಗಿ
ಇಲ್ಲಿ ಅಥವಾ ಅಲ್ಲಿ ನಿಮಗಿಷ್ಟವಾದಂತೆ.
ಇದು ನದಿಗಳ ನದಿ
ಮತ್ತು ನಿರಂತರ ಸಂಭಾಷಣೆಯ
ಅಪರೂಪದ ಮೌನ.
~ ರೂಮಿ
ಥಿಂಕಿಂಗ್ ಎನ್ನುವುದು ಕೊಳದಲ್ಲಿ ಅಲೆಗಳನ್ನು ಹುಟ್ಟುಹಾಕಿದಂತೆ ಮತ್ತು ಈ ಅಲೆಗಳ ಕಾರಣವಾಗಿಯೇ ಚಂದಿರ, ಕೊಳದಲ್ಲಿ ಸ್ಪಷ್ಟವಾಗಿ ಪ್ರತಿಫಲನಗೊಳ್ಳುವುದಿಲ್ಲ, ಅಲೆಗಳು ಚಂದ್ರನ ಪ್ರತಿಫಲನವನ್ನು ಕೆಡಿಸಿಬಿಡುತ್ತವೆ. ಭಗವಂತ ಎಲ್ಲರಲ್ಲೂ ಪ್ರತಿಫಲನಗೊಳ್ಳುತ್ತಾನೆ, ನಾವು ಭಗವಂತನನ್ನು ಕನ್ನಡಿಯ ಹಾಗೆ ನಮ್ಮ ಮೂಲಕ ಪ್ರತಿಫಲಿಸುತ್ತೇವೆ. ಆದರೆ ನಮ್ಮ ಮೈಂಡ್ ಥಾಟ್ ಗಳಿಂದ, ಅಲೆಗಳಿಂದ, ಮೋಡಗಳಿಂದ ತುಂಬಿಕೊಂಡಿವೆ. ಆದರೆ ಅವು ನಾವು ಕಾಣುತ್ತಿರುವ ಹಾಗೆ, ಅನುಭವಿಸುತ್ತಿರುವ ಹಾಗೆ ಇಲ್ಲ. ನಮ್ಮ ಮೈಂಡ್ ಅವುಗಳ ಮೇಲೆ ತನ್ನ ಸ್ವಂತ ಥಾಟ್ ಗಳನ್ನ ಹೇರಿದೆ ಮತ್ತು ಅವುಗಳ ಅರ್ಥೈಸುವಿಕೆಯಲ್ಲಿ ತೊಡಗಿಕೊಂಡಿದೆ. ಮತ್ತು ಇಂಥ ಎಲ್ಲ ಅರ್ಥೈಸುವಿಕೆ ವಾಸ್ತವವನ್ನು ಹಾಳುಗೆಡವುತ್ತದೆ.
ವಾಸ್ತವಕ್ಕೆ ಯಾವ ಅರ್ಥೈಸುವಿಕೆಯ ಅಗತ್ಯವಿಲ್ಲ ; ಅದು ಕೇವಲ ಕನ್ನಡಿಯಂತೆ ಪ್ರತಿಫಲಿಸಬೇಕು. ಅರ್ಥೈಸುವಿಕೆಯ ಯಾವ ಅಗತ್ಯವೂ ಇಲ್ಲ, ಅರ್ಥೈಸುವಿಕೆಯಲ್ಲಿ ತೊಡಗಿಕೊಳ್ಳುವವ ಮೂಲ ಸತ್ಯವನ್ನ ಮಿಸ್ ಮಾಡಿಕೊಳ್ಳುತ್ತ ಹೋಗುತ್ತಾನೆ.
ಗುಲಾಬಿಯನ್ನು ಅದು ಇರುವ ಹಾಗೆ ನೋಡಬೇಕು. ಅದನ್ನು ಅರ್ಥೈಸಲು, ವಿಚ್ಛೇದಿಸಲು ಹೋಗಬಾರದು, ಅದರ ಅರ್ಥವನ್ನು ತಿಳಿದುಕೊಳ್ಳುವ ಯಾವ ಅಗತ್ಯವೂ ಇಲ್ಲ. ಅದು ಬೇರೆ ಯಾವುದಕ್ಕೂ ರೂಪಕ ಅಲ್ಲ, ಅದು ಬೇರೆ ಏನನ್ನೂ ಹೇಳುತ್ತಿಲ್ಲ. ಅದು ಸುಮ್ಮನೇ ತನ್ನ ಹಾಗೆ ಇದೆ ಅಷ್ಟೇ. ಇದು ಅದರ ವಾಸ್ತವ. ಅದರ ಸಂಕೇತ ಅಲ್ಲ. ಸಂಕೇತವಾಗಿದ್ದರೆ ಅದನ್ನು ಅರ್ಥೈಸಬೇಕಾಗುತ್ತಿತ್ತು. ಕನಸು ಆಗಿದ್ದರೆ ಅದನ್ನು ಅರ್ಥೈಸಬೇಕಾಗುತ್ತಿತ್ತು ಅದರೆ ತತ್ವಜ್ಞಾನಿಗಳು ಸತ್ಯವನ್ನೇ ಅರ್ಥೈಸುವ ತಪ್ಪು ಕೆಲಸಕ್ಕೆ ಇಳಿದುಬಿಡುತ್ತಾರೆ. ಕನಸು, ಸಾಂಕೇತಿಕ, ಅದು ಬೇರೆ ಏನನ್ನೋ ಹೇಳುತ್ತಿದೆ. ಆದರೆ ಗುಲಾಬಿ, ಗುಲಾಬಿಯೇ ಹೊರತು ಬೇರೆ ಏನೂ ಅಲ್ಲ, ಅದು ಬೇರೆ ಏನನ್ನೂ ಸಂಕೇತಿಸುತ್ತಿಲ್ಲ. ಅದು ಸ್ವಯಂ ಪ್ರಮಾಣ.
*********************************

