ಕಣ್ಣುಗಳನ್ನ ನಂಬಿ ( Believe in the Eyes ) : ಓಶೋ 365 #Day 134


ನಿಮಗೆ ಅನುಭವವಾಗದ ಹೊರತು ಯಾವುದನ್ನೂ ನಂಬಬೇಡಿ. ಇಡೀ ಜಗತ್ತೇ ಅದು ಹಾಗೆ ಎಂದು ಹೇಳುತ್ತಿರುವಾಗಲೂ, ಯಾವ ಪೂರ್ವಾಗ್ರಹವನ್ನೂ ಹೊಂದಬೇಡಿ, ಸ್ವತಃ ನೀವು ಆ ಅನುಭವದಲ್ಲಿ ಒಳಗೊಳ್ಳದ ಹೊರತು ಯಾವುದನ್ನೂ ನಂಬಬೇಡಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ



“ಹೇಗಿದ್ದೀರಿ ನೀವು”ಎನ್ನುವ ಪ್ರಶ್ನೆಗೆ
ನನ್ನ ಹತ್ತಿರ ಇವೆ
ಸಾವಿರ ಸುಳ್ಳು ಉತ್ತರಗಳು.

“ದೇವರು ಎಂದರೇನು” ಎನ್ನುವ ಪ್ರಶ್ನೆಗೆ ಕೂಡ
ನನ್ನ ಬಳಿ ಇವೆ
ಸಾವಿರ ಸುಳ್ಳು ಉತ್ತರಗಳು.

ಹಾಗೆಲ್ಲ ಮಾತುಗಳಲ್ಲಿ
ಉತ್ತರ ಹೇಳಬಹುದಾದರೆ,

ಸೂರ್ಯ, ಸಾಗರ
ಈ ಪುಟ್ಟ ಬಾಯಿಯ ಮೂಲಕ
ಹಾಯ್ದು ಹೊರಗೆ ಬರಬಹುದಾದರೆ,

ಓಹ್ !
ಯಾರಾದರೂ ನಕ್ಕುಬಿಡಿ !
ಇನ್ನೂ ಜೋರಾಗಿ  !

– ಹಾಫಿಜ್

ಭಾರತದ ಅತ್ಯಂತ ದೊಡ್ಡ ಅನುಭಾವಿ ಕಬೀರ ಹೇಳುತ್ತಾನೆ “ ಎಂದೂ ನಂಬದಿರಿ ಕಿವಿಗಳನ್ನು, ಕಂಡದ್ದು ಮಾತ್ರ ನಿಮ್ಮ ನಂಬಿಕೆಯ ಪಾತ್ರವಾಗಲಿ. ನೀವು ಕೇಳಿರುವುದೆಲ್ಲ ಮಿಥ್ಯೆ, ಕಂಡದ್ದು ಮಾತ್ರ ನಿಜ”.

ಕಬೀರನ ಈ ಮಾತು ನಿರಂತರವಾಗಿ ನಿಮ್ಮ ನೆನಪಿನ ಭಾಗವಾಗಿರಲಿ, ಏಕೆಂದರೆ ನಾವು ಮನುಷ್ಯರು ಮತ್ತು ಸುಳ್ಳುಗಳನ್ನು ಹರಡುವುದರಲ್ಲಿ ಸಿದ್ಧಹಸ್ತರು. ನಾವು ಈ ಹುಚ್ಚು ಜಗತ್ತಿನ ಭಾಗ ಮತ್ತು, ಈ ಹುಚ್ಚು ಪ್ರತೀ ಮನುಷ್ಯನಲ್ಲಿಯೂ ಇದೆ. ಅದು ನಿಮ್ಮ ಮೇಲೆ ಅಧಿಕಾರ ಸಾಧಿಸಲು ಅವಕಾಶ ಮಾಡಿಕೊಡಬೇಡಿ. ಇದನ್ನು ಪ್ರತಿಯೊಬ್ಬರೂ ನಿರಂತರವಾಗಿ ನೆನಪಿನಲ್ಲಿಡಬೇಕು. ಇದು ಕಠಿಣ ಏಕೆಂದರೆ, ಪೂರ್ವಾಗ್ರಹಗಳು ಬಹಳ ಆಪ್ತ ಮತ್ತು ಸುಲಭ ; ಅವುಗಳಿಗಾಗಿ ನೀವು ಯಾವ ಖರ್ಚೂ ಮಾಡಬೇಕಿಲ್ಲ. ಸತ್ಯ ದುಬಾರಿ, ಅಮೂಲ್ಯ; ಅದಕ್ಕಾಗಿ ನೀವು ಬಹಳ ಹೆಚ್ಚು ಖರ್ಚು ಮಾಡಬೇಕು. ಅದಕ್ಕಾಗಿ ನೀವು ನಿಮ್ಮ ಇಡೀ ಬದುಕನ್ನ ಪಣ ಇಡಬೇಕು; ಆಗ ನೀವು ಅದಕ್ಕೆ ಹತ್ತಿರವಾಗಬಹುದು.ಆದರೆ ಸತ್ಯದಿಂದ ಮಾತ್ರ ನಿಮ್ಮ ಬಿಡುಗಡೆ ಸಾಧ್ಯ.

ಬೇರೆ ಜನರನ್ನು ನೋಡುವಾಗ, ಅವರ ಮೈಂಡ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನ ಗಮನಿಸುವಾಗ, ಅಂಥದೇ ಮೈಂಡ್ ನಿಮ್ಮೊಳಗೂ ಇದೆ ಎನ್ನುವುದು ಸದಾ ನಿಮ್ಮ ನೆನಪಿನಲ್ಲಿರಲಿ. ಆದ್ದರಿಂದ ಅದರ ಮಾತು ಕೇಳಬೇಡಿ ; ಅದು ವಾದ ಮಾಡಬಹುದು, ಅದು ನಿಮ್ಮನ್ನು ಒಪ್ಪಿಸಲು ಪ್ರಯತ್ನಿಸಬಹುದು, ಅದಕ್ಕೆ ಹೇಳಿ, “ನನ್ನ ಜವಾಬ್ದಾರಿ ನನಗಿರಲಿ. ನಾನು ಇನ್ನೂ ಜೀವಂತವಾಗಿದ್ದೇನೆ. ಅವಶ್ಯಕವಾದದ್ದನ್ನು ನಾನೇ ಎದುರಿಸುತ್ತೇನೆ”.

ಒಮ್ಮೆ ರಾಜಬೀದಿಯಲ್ಲಿ ನಸ್ರುದ್ದೀನ್ ತಾನು ದೇವರು ಎಂದು ಹೇಳಿಕೊಳ್ಳುತ್ತ ತಿರುಗಾಡ್ತಾ ಇರ್ತಾನೆ.

ರಾಜನ ಸೇವಕರು ಅವನನ್ನ ಬಂಧಿಸಿ ರಾಜನ ಎದುರು ಹಾಜರು ಮಾಡ್ತಾರೆ.

“ ಕಳೆದ ವಾರ ಒಬ್ಬ ತಾನು ಪ್ರವಾದಿ ಅಂತ ಹೇಳ್ಕೊಂಡು ಓಡಾಡ್ತಿದ್ದ, ಅವನಿಗೆ ೧೦ ವರ್ಷ ಕಠಿಣ ಸಜೆ ಕೊಟ್ಟಿದೀನಿ ಗೊತ್ತಾ ನಿನಗೆ? “

ರಾಜ, ನಸ್ರುದ್ದೀನ್ ನ ಪ್ರಶ್ನೆ ಮಾಡ್ತಾನೆ.

“ ರಾಜ, ನೀವು ಅವನಿಗೆ ಶಿಕ್ಷೆ ಕೊಟ್ಚಿದ್ದು ಸರಿಯಾಗಿದೆ, ನಾನು ಯಾರನ್ನೂ ಪ್ರವಾದಿ ಅಂತ ಅಪೊಯಿಂಟ್ ಮಾಡಿಲ್ಲ. “

ನಸ್ರುದ್ದೀನ್ ಗಂಭೀರವಾಗಿ ರಾಜನಿಗೆ ಉತ್ತರಿಸಿದ.

******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.