ಭಯ ಎದುರಿಗಿರುವಾಗ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಬದಲಾಗಿ ಆ ಭಯ ನಿಮಗೆ ನೀಡುತ್ತಿರುವ ಸುಳಿವುಗಳನ್ನ ಗಮನಿಸಿ ಅರ್ಥ ಮಾಡಿಕೊಳ್ಳಿ. ಈ ಸುಳಿವಿನ ದಿಕ್ಕಿನಲ್ಲಿಯೇ ನೀವು ಮುಂದುವರೆಯಬೇಕಾಗಿರುವುದು. ಭಯ, ಒಂದು ಸವಾಲು ಮಾತ್ರ. ಅದು ನಿಮ್ಮನ್ನು “ಬಾ” ಎಂದು ಕರೆಯುತ್ತಿದೆ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಹಿಂದೆ, ನನಗೊಬ್ಬ ಶಿಷ್ಯನಿದ್ದ.
ರಾತ್ರಿಯಾಯಿತೆಂದರೆ ಸಾಕು
ಭಯ ಮತ್ತು ಆತಂಕದಿಂದ ನಡುಗುತ್ತಿದ್ದ.
ಮರುದಿನ ಬೆಳಿಗ್ಗೆ ನೋಡಿದರೆ
ದೆವ್ವವೊಂದರಿಂದ ಮಾನಭಂಗಗೊಂಡವನಂತೆ
ಬಿಳಚಿಕೊಂಡಿರುತ್ತಿದ್ದ.
ನಂತರ ನನ್ನ ಮಮತೆಗೆ
ಅವನ ಮೇಲೆ ಕರುಣೆ ಬಂತು,
ನನ್ನ ದಿವ್ಯ ಖಡ್ಗದಿಂದ
ಅವನಿಗೊಂದು ಚೂರಿ ತಯಾರಿಸಲಾಯಿತು.
ಅಮೇಲಿಂದ ನನಗೆ
ಅವನ ಮೇಲೆ ಅಭಿಮಾನ ಹೆಚ್ಚಾಗಿದೆ
ಈಗ ಅವನು ನನ್ನ ಪಟ್ಟ ಶಿಷ್ಯ.
ಈಗ ಆತ ತನ್ನ ಭಯವನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾನೆ.
ಅಷ್ಟೇ ಅಲ್ಲ, ರಾತ್ರಿಯಾಯಿತೆಂದರೆ ತಾನೇ
ಹೊರಟುಬಿಡುತ್ತಾನೆ
ಸಮಸ್ಯೆಗಳನ್ನು ಹುಡುಕಿಕೊಂಡು.
– ಹಾಫಿಜ್
ಎಲ್ಲಿಯಾದರೂ ಒಳ್ಳೆಯದು ಇದೆ ಎಂದರೆ ಅದು ಭಯಾನಕ ಕೂಡ, ಏಕೆಂದರೆ ಅದು ನಿಮಗೆ ಕೆಲವು ಒಳನೋಟಗಳನ್ನು ಸಾಧ್ಯಮಾಡುತ್ತದೆ. ಅದು ನಿಮ್ಮನ್ನು ಕೆಲವು ಬದಲಾವಣೆಯತ್ತ ಒತ್ತಾಯಪೂರ್ವಕವಾಗಿ ಮುನ್ನಡೆಸುತ್ತದೆ. ಇದು ನಿಮ್ಮನ್ನು ಯಾವ ತುದಿಗೆ ಕರೆದೊಯ್ಯುತ್ತದೆ ಎಂದರೆ, ಅಲ್ಲಿಂದೇನಾದರೂ ನೀವು ವಾಪಸ್ ಬಂದಿರಾದರೆ, ನೀವು ನಿಮ್ಮನ್ನು ಎಂದೂ ಕ್ಷಮಿಸುವುದಿಲ್ಲ. ನೀವು ಹೇಡಿ ಎಂದು ನಿಮ್ಮನ್ನು ನೀವು ಯಾವಾಗಲೂ ನೆನಪಿಸಿಕೊಳ್ಳುತ್ತೀರಿ. ನೀವು ಅಲ್ಲಿಂದ ಮುಂದುವರೆದಿರಾದರೆ, ಅದು ಅಪಾಯಕಾರಿ, ಭಯಾನಕ.
ಎಲ್ಲಿಯಾದರೂ ಭಯದ ಅನುಭವವಾಗುತ್ತಿದೆಯಾದರೆ, ನೆನಪಿರಲಿ ಯಾವತ್ತೂ ಹಿಂದೆ ಸರಿಯಬೇಡಿ, ಏಕೆಂದರೆ ಅದು ಭಯವನ್ನು ಪರಿಹರಿಸಿಕೊಳ್ಳುವ ಒಳ್ಳೆಯ ವಿಧಾನ ಅಲ್ಲ. ಧೈರ್ಯದಿಂದ ಮುಂದುವರೆಯಿರಿ. ನಿಮಗೆ ರಾತ್ರಿಯ ಕತ್ತಲಿನ ಭಯವಿದೆಯಾದರೆ, ರಾತ್ರಿಯ ಕತ್ತಲನ್ನು ಪ್ರವೇಶ ಮಾಡಿ, ಇದೊಂದೇ ಭಯವನ್ನು ಪರಿಹರಿಸಿಕೊಳ್ಳುವ ರೀತಿ. ಇದೊಂದೇ ಭಯವನ್ನು ಮೀರಿ ಹೋಗುವ ರೀತಿ. ರಾತ್ರಿಯ ಕತ್ತಲಿನೊಳಗೆ ಮನೆಯಿಂದ ಹೊರಬನ್ನಿ, ಇದಕ್ಕಿಂತ ಮುಖ್ಯವಾದದ್ದು ಬೇರೆ ಯಾವುದೂ ಇಲ್ಲ. ಅಲ್ಲಿ ಕಾಯಿರಿ, ಒಬ್ಬರೇ ಕುಳಿತುಕೊಳ್ಳಿ, ಕತ್ತಲು ತನ್ನ ಕೆಲಸ ಶುರು ಮಾಡಲಿ. ನೀವು ಭಯದಿಂದ ನಡುಗುತ್ತಿರುವಿರಾದರೆ, ಇರಲಿ ಆ ನಡುಗುವಿಕೆ, ರಾತ್ರಿಗೆ ಹೇಳಿ, “ನೀನೇನು ಮಾಡುತ್ತೀಯೋ ಮಾಡು” ಎಂದು. ಕೆಲವು ನಿಮಿಷಗಳ ನಂತರ ನಿಮಗೆ ಎಲ್ಲವೂ ಸೆಟಲ್ ಆದದ್ದು ಗೊತ್ತಾಗುತ್ತದೆ. ಆಗ ಕತ್ತಲೆ ಕತ್ತಲಲ್ಲ, ಅದು ಈಗ ಬೆಳಕಾಗಿದೆ. ಅದನ್ನು ನೀವು ಎಂಜಾಯ್ ಮಾಡುತ್ತಿದ್ದೀರ. ಅದನ್ನು ನೀವು ಮುಟ್ಟಬಹುದು- ಆ ನಯವಾದ ಮೌನವನ್ನ, ಅದರ ಅಗಾಧತೆಯನ್ನ, ಅದರ ಸಂಗೀತವನ್ನ. ಆಗ ಅದನ್ನ ನೀವು ಆನಂದಿಸುತ್ತ ಹೇಳುತ್ತೀರ, “ ಅರೇ ಎಂಥ ಮೂರ್ಖ ನಾನು, ಇಂಥ ಅಪೂರ್ವ ಅನುಭವವನ್ನ ಕಳೆದುಕೊಳ್ಳುತ್ತಿದ್ದೆನಲ್ಲ”
ಮುಲ್ಲಾ ನಸ್ರುದ್ದೀನ ನಿಗೆ ಕರಡಿಗಳೆಂದರೆ ಭಾರಿ ಭಯ. ಒಂದು ದಿನ ರಾಜ್ಯದ ಸುಲ್ತಾನ ಕರಡಿ ಬೇಟೆಗೆ ತನ್ನೊಡನೆ ಬರುವಂತೆ ನಸ್ರುದ್ದೀನ ನನ್ನು ಆಹ್ವಾನಿಸಿದ.
ತನ್ನ ಕರಡಿಗಳ ಕುರುತಾದ ಭಯವನ್ನು ಸುಲ್ತಾನನಿಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ, ನಸ್ರುದ್ದೀನ್ ಹೆದರಿಕೆಯಿಂದಲೇ ಸುಲ್ತಾನನಿಗೆ ಒಪ್ಪಿಗೆ ಕೊಟ್ಟುಬಿಟ್ಟ.
ಬೇಟೆ ಮುಗಿಸಿ ಹಿಂತಿರುಗಿದ ನಸ್ರುದ್ದೀನ ನನ್ನು ಅವನ ಗೆಳೆಯ ಪ್ರಶ್ನೆ ಮಾಡಿದ, “ ಹೇಗಿತ್ತು ಕರಡಿ ಬೇಟೆ? “
“ ಅದ್ಭುತವಾಗಿತ್ತು“ ನಸ್ರುದ್ದೀನ್ ಉತ್ತರಿಸಿದ.
“ ಹೌದಾ, ಎಷ್ಟು ಕರಡಿಗಳನ್ನು ಬೇಟೆಯಾಡಿದಿರಿ? “ ಗೆಳೆಯ ತಿರುಗಿ ಪ್ರಶ್ನೆ ಮಾಡಿದ.
“ ಒಂದೂ ಇಲ್ಲ “ ಉತ್ತರಿಸಿದ ನಸ್ರುದ್ದೀನ.
“ ಮತ್ತೆ ಯಾಕೆ ಹೇಳಿದೆ? ಬೇಟೆ ಅದ್ಭುತವಾಗಿತ್ತು ಅಂತ? “ ಗೆಳೆಯನ ಪ್ರಶ್ನೆ.
“ ಕರಡಿಗಳನ್ನು ಕಂಡರೆ ಹೆದರಿ ಸಾಯುವವನಿಗೆ ಒಂದು ಕರಡಿಯೂ ಕಾಣಿಸಲಿಲ್ಲವೆಂದರೆ , ಅದು ಅವನಿಗೆ ಅದ್ಭುತವೇ ಅಲ್ವ “ ಮುಲ್ಲಾ ನಗುತ್ತ ಉತ್ತರಿಸಿದ.
********************************

