ತಾವು ಸಂತೋಷದಿಂದಿರಲು ಬಯಸುವುದಾಗಿ ಜನ ಹೇಳುತ್ತಾರೆ, ಆದರೆ ನಿಜದಲ್ಲಿ ಅವರು ಹಾಗೆ ಬಯಸುವುದಿಲ್ಲ. ತಾವು ಕಳೆದು ಹೋಗಿಬಿಡಬಹುದು ಎನ್ನುವ ಭಯ ಅವರಿಗೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದುಃಖವನ್ನು
ಬಟ್ಟಲಲ್ಲಿ ಸುರಿದುಕೊಂಡು
ಚಪ್ಪರಿಸುತ್ತ ಕುಳಿತಿದ್ದ ಸಂಕಟವನ್ನು
ಅಂತಃಕರಣದಿಂದ ಮಾತಿಗೆಳೆದೆ ;
” ಹೇಗಿದೆ ದುಃಖ? ರುಚಿಯಾಗಿದೆಯಾ?”
“ಓಹ್ ! ಸಿಕ್ಕಿಹಾಕಿಕೊಂಡೆ “
ಕಿರುಚಿತು ಸಂಕಟ.
“ನನ್ನ ವ್ಯಾಪಾರಕ್ಕೆ ಕಲ್ಲು ಹಾಕಿದೆ ನೀನು,
ಮಾರಬೇಕೆಂದುಕೊಂಡಿದ್ದೆ
ನಿನ್ನ ದಯೆಯೆಂದು ಗೂತ್ತಾದ ಮೇಲೆ
ಹೇಗೆ ಮಾರಲಿ? “
– ರೂಮಿ
ಯಾವಾಗ ನಿಮಗೆ ಯಾವುದೋ ಒಂದು ಸಂಗತಿಯ ಬಗ್ಗೆ ಅರಿವಾಗುತ್ತದೆಯೋ ಆಗ ನೀವು ಆ ಸಂಗತಿಯಿಂದ ಪ್ರತ್ಯೇಕವಾಗುತ್ತೀರಿ. ನೀವು ಖುಶಿಯಾಗಿದ್ದರೆ, ನೀವು ಪ್ರತ್ಯೇಕ ಮತ್ತು ಖುಶಿ ಪ್ರತ್ಯೇಕ. ಹಾಗಾಗಿ ನಿಜವಾಗಿಯೂ ಖುಶಿಯಾಗಿರುವುದೆಂದರೆ, ನೀವು ಖುಶಿಯಿಂದಿರುವುದಲ್ಲ, ನೀವೇ ಸ್ವತಃ ಖುಶಿಯಾಗುವುದು ( becoming happiness rather than becoming happy) ನೀವು ಖುಶಿಯಲ್ಲಿ ಕರಗಿ ಹೋಗುವಿರಿ. ನೀವು ಖುಶಿಯಾಗಿರದಿದ್ದಾಗ, ನಿಮ್ಮ ಅಹಂ ಬೆಳಕಿಗೆ ಬರುತ್ತದೆ. ಆದ್ದರಿಂದಲೇ ಅಹಂಕಾರಿಗಳು ಯಾವಾಗಲೂ ಅಸಂತುಷ್ಟರಾಗಿರುತ್ತಾರೆ ಮತ್ತು ಅಸಂತುಷ್ಟ ಜನ ಯಾವಾಗಲೂ ಅಹಂಕಾರಿಗಳಾಗಿರುತ್ತಾರೆ. ಅಸಂತೋಷ ಮತ್ತು ಅಹಂಗಳ ನಡುವೆ ಒಳ ಸಂಬಂಧವಿದೆ.
ಅಹಂಕಾರಿಗಳಾಗಬೇಕಾದರೆ ನೀವು ಅಸಂತುಷ್ಟರಾಗಲೇ ಬೇಕು. ಅಸಂತೋಷ ನಿಮಗೆ ಹಿನ್ನೆಲೆಯನ್ನು ದಯಪಾಲಿಸುತ್ತದೆ ಮತ್ತು ನಿಮ್ಮ ಅಹಂ ಬಿಳಿ ಹಿನ್ನೆಲೆಯ ಮೇಲಿನ ಕಪ್ಪು ಚುಕ್ಕೆಯಂತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ನೀವು ಹೆಚ್ಚು ಖುಶಿಯಾಗಿದ್ದಾಗ, ಕಡಿಮೆ ನೀವಾಗಿರುತ್ತೀರಿ. ಆದ್ದರಿಂದಲೇ ಬಹಳಷ್ಟು ಜನ
ಖುಶಿಯಾಗಿರಲು ಬಯಸುತ್ತಾರೇನೋ ನಿಜ ಆದರೆ ಅವರು ಅದಕ್ಕೆ ಹೆದರಿಕೊಳ್ಳುತ್ತಾರೆ. ಇದು ನನ್ನ ಆಬ್ಸರ್ವೇಷನ್, ತಾವು ಸಂತೋಷದಿಂದಿರಲು ಬಯಸುವುದಾಗಿ ಜನ ಹೇಳುತ್ತಾರೆ, ಆದರೆ ನಿಜದಲ್ಲಿ ಅವರು ಹಾಗೆ ಬಯಸುವುದಿಲ್ಲ. ತಾವು ಕಳೆದು ಹೋಗಿಬಿಡಬಹುದು ಎನ್ನುವ ಭಯ ಅವರಿಗೆ. ಖುಶಿ ಮತ್ತು ಅಹಂ ಜೊತೆ ಜೊತೆಯಾಗಿರುವುದು ಸಾಧ್ಯವಿಲ್ಲ. ನೀವು ಹೆಚ್ಚು ಖುಶಿಯಲ್ಲಿರುವಾಗ, ಕಡಿಮೆ ನೀವಾಗಿರುತ್ತೀರಿ. ಮುಂದೊಂದು ಕ್ಷಣದಲ್ಲಿ ಖುಶಿ ಮಾತ್ರ ಉಳಿದುಕೊಂಡು ನೀವು ಕಾಣೆಯಾಗಿಬಿಡುತ್ತೀರ.
ನಸ್ರುದ್ದೀನ್ ದಂಪತಿಗಳ ವಿವಾಹ ವಿಚ್ಛೇದನ ಕೇಸ್ ವಹಿಸಿಕೊಂಡಿದ್ದ ವಕೀಲ, ನಸ್ರುದ್ದೀನ್ ನ ಹೆಂಡತಿಯ ಜೊತೆ ಮೊದಲ ಸುತ್ತಿನ ಮಾತುಕತೆಯ ನಂತರ ನಸ್ರುದ್ದೀನ್ ನನ್ನು ಭೇಟಿಯಾಗಿ ವಿಷಯ ತಿಳಿಸಿದ,
“ ಇಬ್ಬರಿಗೂ ಅನ್ಯಾಯವಾಗದಂತೆ ಒಂದು ಒಪ್ಪಂದಕ್ಕೆ ಬರಲು ನಿನ್ನ ಹೆಂಡತಿಯನ್ನು ಒಪ್ಪಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ “
“ ಇಬ್ಬರಿಗೂ ಅನ್ಯಾಯವಾಗದ ಹಾಗೆ ? ಹೀಗಾದರೆ ನಾನೇ ಒಪ್ಪಿಸುತ್ತಿದ್ದೆ ನನ್ನ ಹೆಂಡತಿಯನ್ನು, ನಿನಗೆ ಯಾಕೆ ಈ ಕೇಸ್ ಕೊಟ್ಟಿದ್ದು. “
ನಸ್ರುದ್ದೀನ್, ವಕೀಲನನ್ನು ತರಾಟೆಗೆ ತೆಗೆದುಕೊಂಡ.
*********************************

