ಆತ್ಮಸಂಗಾತಕ್ಕೆ ನೀನಿದ್ದೀಯೆ: ಅಕ್ಕ ಮಹಾದೇವಿ #34

ದೇಹಕ್ಕೆ ಬರುವ ಕಷ್ಟ ಎದುರಿಸಲು ಸಿದ್ಧ, ದೇಹಕ್ಕೆ ಸವಲತ್ತು ಬೇಕೆನ್ನುವ ಆಸೆಯಿಲ್ಲ, ನನ್ನ ಮನಸ್ಸು ಒಪ್ಪಿದ ಇಷ್ಟದೈವದ ಸಂಗಾತ ಸಾಕು, ಆತ್ಮಸಂಗಾತವೊಂದೇ ಸಾಕು  ಅನ್ನುವ ಸಮಾಧಾನ ಇಲ್ಲಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು

ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು

ಚೆನ್ನಮಲ್ಲಿಕಾರ್ಜುನಯ್ಯಾ
ಆತ್ಮಸಂಗಾತಕ್ಕೆ ನೀನೆನಗುಂಟು [೪೧೩]

[ತೃಷೆ=ಬಾಯಾರಿಕೆ; ಅಂಗಶೀತ=ದೇಹಕ್ಕೆ ಆಗುವ ಚಳಿ; ಶಯನ=ಮಲಗುವುದು]

ಹಸಿವಾದರೆ ಭಿಕ್ಷಾನ್ನವಿದೆ, ಬಾಯಾರಿಕೆಯಾದರೆ ಕೆರೆ, ಹಳ್ಳ, ಬಾವಿ ಇವೆ. ಮೈಗೆ ಚಳಿಯಾದರೆ ಜನ ಬೀಸಾಡಿದ ಅರಿವೆ ಇವೆ. ಮಲಗುವುದಕ್ಕೆ ಹಾಳು ದೇಗುಲಗಳು ಇವೆ. ಆತ್ಮಸಂಗಾತಕ್ಕೆ ನೀನು ನನಗಾಗಿ ಇದ್ದೀಯೆ.

ದೇಹದ ಸುಖ, ಸೌಕರ್ಯಗಳನ್ನು ಪೂರ್ತಿಯಾಗಿ ತಿರಸ್ಕಾರ ಮಾಡಿ, ಮನಸು ಒಪ್ಪಿದ ರೀತಿಯಲ್ಲೇ ಬದುಕುವ ಹಟ, ವಿಶ್ವಾಸ ಈ ಮಾತಿನಲ್ಲಿ ಕೇಳುತ್ತದೆ. ʻಆತ್ಮಸಂಗಾತʼವೆಂಬ ಮಾತು ತನಗೆ ಮಾತ್ರ ಸಂಗಾತಿಯಾಗಿರುವವನು, ನಾನು ಎಂಥ ಪರಿಸ್ಥಿತಿಯಲ್ಲಿದ್ದರೂ ನನ್ನ ಪೊರೆಯುವವನು ಎಂಬ ನಂಬಿಕೆಯೂ ಹೌದು, ನನ್ನ ಆತ್ಮದ ಸಂಗಾತಿ ಎಂಬ ಎಂಬ ವಿಶ್ವಾಸವೂ ಹೌದು. ವಚನಕಾರರು ಕಾಯವನ್ನು ಮುಖ್ಯವೆಂದು ಪರಿಗಣಿಸಿದ್ದರು. ಈ ಮಾತು ಅದಕ್ಕೆ ವಿರುದ್ಧವೇನೂ ಆಗದು ಅನಿಸುತ್ತದೆ. ದೇಹಕ್ಕೆ ಬರುವ ಕಷ್ಟ ಎದುರಿಸಲು ಸಿದ್ಧ, ದೇಹಕ್ಕೆ ಸವಲತ್ತು ಬೇಕೆನ್ನುವ ಆಸೆಯಿಲ್ಲ, ನನ್ನ ಮನಸ್ಸು ಒಪ್ಪಿದ ಇಷ್ಟದೈವದ ಸಂಗಾತ ಸಾಕು, ಆತ್ಮಸಂಗಾತವೊಂದೇ ಸಾಕು  ಅನ್ನುವ ಸಮಾಧಾನ ಇಲ್ಲಿದೆ.

ಭಿಕ್ಷೆ ಬೇಡಲು ಒಡೆದ ಮಡಕೆಯ ಚೂರೂ ಮನೆಯಲ್ಲಿಲ್ಲದ ಹಾಗೆ ಮಾಡು, ನಾನು ದೀನನೆಂದು ಹುಲ್ಲು ಕಡ್ಡಿ ಹಿಡಿದು ನಡೆದಾಡುವ ಹಾಗೆ ಮಾಡು, ಬೇಡಿದರೆ ಮುಂದೆ ಹೋಗು ಅನ್ನುವ ಹಾಗೆ ಮಾಡುʼ ಎಂದು ಹೇಳುವ ಬಸವವಚನವನ್ನೂ ನೋಡಿ [೧.೪೫೭]. ಸಫರಿಂಗ್‌ [ಇದಕ್ಕೆ ಸಮನಾದ ಅರ್ಥ ಕೊಡುವ ಪದ ಹುಡುಕುವುದು ಕಷ್ಟ]  ಮೂಲಕವೇ ಸಾಕ್ಷಾತ್ಕಾರ ಅನ್ನುವ ಧೋರಣೆ ಇರುವ ಹಾಗೆಯೇ ಉಪವಾಸ, ದೇಹ ದಂಡನೆ ಇತ್ಯಾದಿಗಳು ಫಲವಿಲ್ಲದ ಕೆಲಸಗಳು ಅನ್ನುವ ಮಾತೂ ವಚನಗಳಲ್ಲಿ ಮುಖ್ಯವಾಗಿ ಅಲ್ಲಮನಲ್ಲಿ ಎದುರಾಗುತ್ತದೆ. ತಪವೆಂಬುದು ತಗಹು, ನೇಮವೆಂಬುದು ಬಂಧನ, (೨.೧೨೩೭) ಎಂಬ ಅಲ್ಲಮ ವಚನ ನೋಡಿ. ಹಾಗೆಯೇ ಉಗುಳ ನುಂಗಿ, ಹಸಿವ ಕಳೆದು/ತೆವರ ಮಲಗಿ ನಿದ್ರೆಗೆಯ್ದು/ನೋಡಿ ನೋಡಿ ಸುಖಂಬಡೆದೆನಯ್ಯಾ/ ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ ಎಂಬ ಇನ್ನೊಂದು ಅಲ್ಲಮ ವಚನ (೨.೩೬೮) ಅಕ್ಕನ ಈ ವಚನದ ಧೋರಣೆಯನ್ನೇ ಹೇಳುವಂತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.