ನಿಮ್ಮ ಅಸ್ತಿತ್ವಕ್ಕೆ ಪ್ರಚಂಡ ಸ್ವಾತಂತ್ರ್ಯವಿದೆ ಮತ್ತು ಯಾವುದೇ ಗಡಿಗಳಿಲ್ಲ. ಎಲ್ಲ ಗಡಿಗಳೂ ಮಿಥ್ಯೆ. ಆದ್ದರಿಂದಲೇ ನಾವು ಪ್ರೇಮದಲ್ಲಿ ಪೂರ್ಣಗೊಳ್ಳುವುದು ಮತ್ತು ಆರೋಗ್ಯಪೂರ್ಣರಾಗುವುದು. ಏಕೆಂದರೆ ಪ್ರೇಮ ಎಲ್ಲ ಗಡಿಗಳನ್ನು, ಎಲ್ಲ ಹಣೆಪಟ್ಟಿಗಳನ್ನ ಅಳಿಸಿಹಾಕಿ ಬಿಡುತ್ತದೆ ; ಅದು ನಿಮ್ಮನ್ನು ವರ್ಗೀಕರಿಸಲು ಹೋಗುವುದಿಲ್ಲ. ಅದು ನಿಮ್ಮನ್ನು ಸ್ವೀಕರಿಸುತ್ತದೆ, ನೀವು ಯಾರೇ ಆಗಿರಲಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮ ಇಲ್ಲದ ಬದುಕಿನ ಅಸ್ತಿತ್ವವನ್ನು
ಊಹಿಸುವುದೂ ಅಸಾಧ್ಯ.
ಹಾಗಾದರೆ ಯಾವ ರೀತಿಯ ಪ್ರೇಮ
ಬದುಕಿನ ಸಾರ್ಥಕತೆಗೆ ಕಾರಣ?
ಅಧ್ಯಾತ್ಮದ ಅಲೌಕಿಕತೆಯೆ ?
ಅಥವಾ ಲೌಕಿಕದ ಬಣ್ಣ, ರುಚಿ, ವಾಸನೆಗಳೆ?
ದೈವಿಕದ ತಾದಾತ್ಮ್ಯವೆ?
ಅಥವಾ
ಯಾಂತ್ರಿಕ ಬದುಕಿನ ಬೇಕು ಬೇಡಗಳೆ?
ಪಶ್ಚಿಮದ ಶಿಸ್ತೋ ಅಥವಾ
ಪೂರ್ವದ ಅಂತಃಕರಣವೋ ?
ಹೀಗೆ ಪ್ರೇಮವನ್ನು ಭಾಗ ಮಾಡಲು ಹೋದರೆ
ಭಾಗ ಮಾಡುವುದು ಮುಗಿಯುವುದೇ ಇಲ್ಲ.
ಪ್ರೇಮಕ್ಕೆ ಯಾವ ಹಣೆಪಟ್ಟಿಯಿಲ್ಲ
ಹಾಗೆಯೇ ಪ್ರೇಮದ ಬಗ್ಗೆ ಸಾಧ್ಯವಾಗುವುದಿಲ್ಲ
ಯಾವ ವ್ಯಾಖ್ಯಾನವೂ .
ಪ್ರೇಮ,
ಬದುಕಿನ ಬಾಯಾರಿಕೆಯನ್ನು
ತಣಿಸುವ ನೀರಾದರೆ,
ಪ್ರೇಮಿ, ಬದುಕಿನ ಬೆಂಕಿಯನ್ನು
ಜೀವಂತವಾಗಿಡುವ ಆತ್ಮ.
ಬೆಂಕಿ ನೀರನ್ನು ಪ್ರೇಮಿಸತೊಡಗಿದ
ಮೊದಲ ಕ್ಷಣದಲ್ಲೇ
ಬ್ರಹ್ಮಾಂಡ, ಮೈ ಮುರಿಯುವುದು
ಹೊಸ ಹುರುಪಿನಿಂದ.
~ ಶಮ್ಸ್
ನಿಜದಲ್ಲಿ ಯಾರಿಗೂ ಅನಾರೋಗ್ಯ ಇಲ್ಲ. ಹಾಗೆ ನೋಡಿದರೆ ಸಮಾಜಕ್ಕೆ ಕಾಯಿಲೆ ಇದೆ, ವೈಯಕ್ತಿಕ ಜನ ಕೇವಲ ಬಲಿಪಶುಗಳು ಮಾತ್ರ. ಸಮಾಜಕ್ಕೆ ಥೆರಪಿ ಬೇಕು; ವೈಯಕ್ತಿಕ ಜನರಿಗೆ ಕೇವಲ ಪ್ರೇಮ ಮಾತ್ರ ಸಾಕು. ಸಮಾಜ, ಅನಾರೋಗ್ಯದಿಂದ ಬಳಲುತ್ತಿದೆ, ಅದನ್ನು ಆಸ್ಪತ್ರೆಗೆ ಸೇರಿಸಲೇ ಬೇಕಾಗಿದೆ.
ಈ ಎಲ್ಲದರಿಂದಾಗಿ ವೈಯಕ್ತಿಕ ಜನ ಕಷ್ಟಪಡುತ್ತಿದ್ದಾರೆ ಏಕೆಂದರೆ ಸಮಾಜಕ್ಕೆ ಶಿಕ್ಷೆಕೊಡುವುದು ಸಾಧ್ಯವಿಲ್ಲ ; ಅದು ಅಗೋಚರವಾಗಿಯೇ ಉಳಿದುಕೊಳ್ಳುತ್ತದೆ. ನೀವು ಶಿಕ್ಷಿಸಲು, ಗುಣಪಡಿಸಲು ಸಮಾಜವನ್ನು ಹಿಡಿಯಲು ಹೋದಾಗ, ಕೈಗೆ ಸಿಗುವುದು ವೈಯಕ್ತಿಕ ಜನ ಮಾತ್ರ, ಆದ್ದರಿಂದ ಅವರು ಸಮಾಜದ ಪರವಾಗಿ ಜವಾಬ್ದಾರಿ ಹೊರಬೇಕಾಗಿದೆ, ಮತ್ತು ಬಲಿಪಶುಗಳಂತೆ ಕಷ್ಟಗಳನ್ನು ಅನುಭವಿಸಬೇಕಾಗಿದೆ. ಅವರಿಗೆ ತಿಳುವಳಿಕೆ ಬೇಕು, ಥೆರಪಿ ಅಲ್ಲ; ಪ್ರೇಮ ಬೇಕು, ಚಿಕಿತ್ಸೆ ಅಲ್ಲ. ಸಮಾಜ ಅವರಿಗೆ ತಿಳುವಳಿಕೆ ನೀಡುವಲ್ಲಿ, ಪ್ರೇಮ ನೀಡುವಲ್ಲಿ ವಿಫಲವಾಗಿದೆ. ಸಮಾಜ ಅವರಿಗೆ ಬೇಡಿಗಳನ್ನು ಕೊಟ್ಟಿದೆ, ಜೈಲುಗಳನ್ನು ಕೊಟ್ಟಿದೆ. ಸಮಾಜ ಅವರನ್ನು ಉಸಿರಾಡದಂಥ ಜಾಗದಲ್ಲಿ ಒತ್ತಾಯಪೂರ್ವಕವಾಗಿ ತುರುಕಿದೆ, “ಇದು ನೀನು, ಇದು ನಿನ್ನ ಐಡೆಂಟಿಟಿ” ಎಂದು ವರ್ಗೀಕರಿಸಿ ಹಣೆಪಟ್ಟಿ ಹಚ್ಚಿದೆ.
ಸ್ವಾತಂತ್ರ್ಯವೇ ನೀವು ಮತ್ತು ನಿಮಗೆ ಯಾವ ಐಡೆಂಟಿಟಿಯೂ ಇಲ್ಲ. ನಿಮಗೆ ಹಣೆಪಟ್ಟಿ ಹಚ್ಚುವುದು ಸಾಧ್ಯವಿಲ್ಲ ಮತ್ತು ಸುಂದರ ಸಂಗತಿ ಎಂದರೆ ನೀವು ಯಾರೆಂದು ಹೇಳುವುದು ನಿಮಗೂ ಸಾಧ್ಯವಿಲ್ಲ. ನೀವು ಯಾವತ್ತೂ making ನಲ್ಲಿಯೇ ಇರುವವರು. ನೀವು ಯಾರೆಂದು ನಿರ್ಧರಿಸಿಕೊಳ್ಳುವ ಮೊದಲೇ ನೀವು ಮುಂದುವರೆದು ಬಿಟ್ಟಿರುತ್ತೀರಿ. ಪ್ರತೀ ಕ್ಷಣವೂ ಏನಾಗಬೇಕು? , ಆಗಬೇಕೋ ಬೇಡವೋ ಎನ್ನುವುದನ್ನ ನಿರ್ಧರಿಸುತ್ತಿದ್ದೀರಿ. ಪ್ರತೀ ಕ್ಷಣ ಅಲ್ಲೊಂದು ಹೊಸತಾದ ನಿರ್ಧಾರವಿದೆ, ಬದುಕಿನ ಹೊಸ ಅವಕಾಶವಿದೆ. ಒಂದು ಕ್ಷಣದಲ್ಲಿಯೇ ಪಾಪಿ ಸಂತನಾಗಬಲ್ಲ ಮತ್ತು ಸಂತ ಪಾಪಿಯಾಗಬಲ್ಲ. ಒಂದು ಕ್ಷಣದಲ್ಲಿಯೇ ಆರೋಗ್ಯವಂತ ರೋಗಿಯಾಗಬಲ್ಲ ಮತ್ತು ರೋಗಿ ಆರೋಗ್ಯವಂತನಾಗಬಲ್ಲ. ಕೇವಲ ಒಂದು ಬದಲಾದ ನಿರ್ಧಾರ, ಕೇವಲ ಒಂದು ಬದಲಾದ ಒಳನೋಟ, ಬದಲಾದ ಒಂದು ದೃಷ್ಟಿಕೋನ, ಎಲ್ಲವನ್ನೂ ಬದಲಾಯಿಸಿ ಬಿಡುತ್ತದೆ.

