ಸಂಸ್ಕೃತದಲ್ಲಿ 3 ಪದಗಳಿವೆ, ಒಂದು ಬಳಲಿಕೆಗೆ ( suffering), ಒಂದು ಖುಶಿಗೆ ( Joy) ಮತ್ತು ಇನ್ನೊಂದು ಈ ಎರಡನ್ನೂ ಮೀರಿದ ಸಂಗತಿಗೆ : ಅದು ಆನಂದ ( bliss) ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
********************
‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.
ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.
ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.
~ ಲಾವೋತ್ಸೇ
ಆನಂದ, ಬಳಲಿಕೆಯೂ ಅಲ್ಲ ಅಥವಾ so called ಖುಶಿಯೂ ಅಲ್ಲ. ಅದು ಅತ್ಯಂತ ವಿಭಿನ್ನ ಸಂಗತಿ, ಇದಕ್ಕೆ ಬಳಲಿಕೆಯ ಯಾವ ನೆನಪೂ ಇಲ್ಲ, ಖುಶಿಯ ಯಾವ ಮಿತಿಯೂ ಇಲ್ಲ. ಇದು ಸಂಪೂರ್ಣವಾಗಿ ವೈರುಧ್ಯಗಳ ಕಲುಷಿತತೆಯಿಂದ ಹೊರತಾದದ್ದು. ಇದು ಪರಿಶುದ್ಧ ಐಕ್ಯತೆ ( oneness), ಮತ್ತು ಇಲ್ಲಿ ಯಾವ ದ್ವಂದ್ವತೆ (duality) ಇಲ್ಲ.
ಆನಂದದಂಥ ಸ್ಥಿತಿಯನ್ನು ಸಾಧಾರಣವಾಗಿ ಯಾರೂ ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಇದರ ರುಚಿ ನೋಡದವರಿಗೆ ಇದನ್ನು ತಿಳಿದುಕೊಳ್ಳುವುದೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಏನನ್ನಾದರೂ ಅರ್ಥ ಮಾಡಿಕೊಳ್ಳಲು ಎರಡು ವಿರುದ್ಧಗಳು ಬೇಕೇ ಬೇಕು. ಚಿತ್ರವನ್ನು ನಾವು ಹಿನ್ನೆಲೆಯಿದ್ದಾಗ ಮಾತ್ರ ಅರ್ಥ ಮಾಡಿಕೊಳ್ಳಬಹುದು. ಹಗಲು ಇದೆಯೆಂದೇ ನಾವು ಕತ್ತಲನ್ನು ಅರ್ಥಮಾಡಿಕೊಳ್ಳುತ್ತೇವೆ, ಕೆಟ್ಟದ್ದು ಇರುವಾಗಲೇ ಒಳ್ಳೆಯದನ್ನು ಗುರುತಿಸುವುದು ಸಾಧ್ಯ, ಕುರೂಪ ಇರುವಾಗಲೇ ಚೆಲುವಿಗೂ ಒಂದು ಅರ್ಥ ಇದೆ. ಏನನ್ನಾದರೂ ವ್ಯಾಖ್ಯಾನ ಮಾಡಲು ನಮಗೆ ವೈರುಧ್ಯಗಳ ಸಹಾಯ ಬೇಕೇ ಬೇಕು.
ಆದರೆ ಆನಂದ ಎಂಥ ಸ್ಥಿತಿ ಎಂದರೆ, ಇಲ್ಲಿ ಯಾವ ವೈರುಧ್ಯಗಳಿಲ್ಲ. ಆನಂದದ ಮಹಾಸಾಗರಕ್ಕೆ ಇರುವುದು ಒಂದೇ ತೀರ. ಇದು ತರ್ಕ ಹೀನ ಏಕೆಂದರೆ, ಸಾಗರಕ್ಕೆ ಕೇವಲ ಒಂದು ತೀರ ಇರುವುದು ಹೇಗೆ ಸಾಧ್ಯ? ಹಾಗೆಯೇ ಆನಂದದ ಸ್ಥಿತಿಯೂ ತರ್ಕಹೀನ. ತರ್ಕಕ್ಕೆ ಅಂಟಿಕೊಂಡಿರುವ ಜನಕ್ಕೆ ಆನಂದದಂಥ ಸ್ಥಿತಿ ಯಾವತ್ತೂ ಸಾಧ್ಯವಿಲ್ಲ. ಆನಂದ, ಕೇವಲ ಉನ್ಮತ್ತ ಹುಚ್ಚರಿಗೆ ( crazy) ಮಾತ್ರ ಬಾಗಿಲು ತೆರೆಯುತ್ತದೆ.
ಮುಲ್ಲಾ ನಸ್ರುದ್ದೀನ್ ಕಮ್ಯುನಿಸ್ಟ್ ಆಗಿರುವ ಸುದ್ದಿ ಊರಲ್ಲೆಲ್ಲ ಹಬ್ಬಿತ್ತು. ಈ ಸುದ್ದಿಯ ಸತ್ಯಾಸತ್ಯತೆಯನ್ನ ಪರೀಕ್ಷಿಸಲು ಗೆಳೆಯನೊಬ್ಬ ನಸ್ರುದ್ದೀನ್ ನನ್ನು ಪ್ರಶ್ನೆ ಮಾಡಿದ.
ಗೆಳೆಯ : ನಸ್ರುದ್ದೀನ್ ನಿನಗೆ ಕಮ್ಯುನಿಸಂ ನ ಅರ್ಥ ಗೊತ್ತಿದೆಯಾ ?
ನಸ್ರುದ್ದೀನ್ : ಖಂಡಿತ ಗೊತ್ತು.
ಗೆಳೆಯ : ನಿನ್ನ ಹತ್ತಿರ ೨ ಕಾರು ಇದ್ದು ಇನ್ನೊಬ್ಬನ ಹತ್ತಿರ ಒಂದು ಕಾರೂ ಇಲ್ಲದೇ ಇರುವಾಗ, ನೀನು ಅವನಿಗೆ ನಿನ್ನ ಒಂದು ಕಾರು ಕೊಡಬೇಕು.
ನಸ್ರುದ್ದೀನ್ : ಮನಪೂರ್ವಕವಾಗಿ ಕೊಡಲು ನಾನು ಸಿದ್ಧ.
ಗೆಳೆಯ : ನಿನ್ನ ಹತ್ತಿರ ಎರಡು ಮನೆಗಳಿದ್ದು, ಇನ್ನೊಬ್ಬರ ಹತ್ತಿರ ಮನೆ ಇರದ ಪಕ್ಷದಲ್ಲಿ, ನೀನು ಅವರಿಗೆ ನಿನ್ನ ಒಂದು ಮನೆ ಕೊಡಬೇಕಾಗುವುದು.
ನಸ್ರುದ್ದೀನ್ : ಖಂಡಿತ ಕೊಡುತ್ತೇನೆ, ಅದು ನನ್ನ ಕರ್ತವ್ಯ.
ಗೆಳೆಯ : ಹಾಗು ನಿನ್ನ ಹತ್ತಿರ ಎರಡು ಕತ್ತೆಗಳಿದ್ದು, ಇನ್ನೊಬ್ಬನ ಹತ್ತಿರ ಒಂದು ಕತ್ತೆಯೂ ಇಲ್ಲದಿದ್ದರೆ, ನೀನು ಒಂದು ಕತ್ತೆ ಅವನಿಗೆ ಕೊಡಬೇಕು.
ನಸ್ರುದ್ದೀನ್ : ಖಂಡಿತ ಸಾಧ್ಯವಿಲ್ಲ.
ಗೆಳೆಯ : ಯಾಕೆ ನಸ್ರುದ್ದೀನ್ ಇಲ್ಲಿಯೂ ಅದೇ ತರ್ಕ ಅಲ್ಲವೆ?
ನಸ್ರುದ್ದೀನ್ : ತರ್ಕ ಒಂದೇ ಇರಬಹುದು ಆದರೆ ಪರಿಸ್ಥಿತಿ ಬೇರೆ. ನನ್ನ ಹತ್ತಿರ ಕಾರು, ಮನೆ ಇಲ್ಲ ಆದರೆ ಎರಡು ಕತ್ತೆಗಳಿರುವುದು ನಿಜ.
*******************************
ವೈರುಧ್ಯಗಳಿಲ್ಲದ್ದು ( No opposite) ಓಶೋ 365 #Day 150

