ನಿಮಗೆ ಏನನ್ನಾದರೂ ಟೀಕಿಸುವ ಪ್ರಸಂಗ ಎದುರಾದರೆ, ಮೊದಲು ಅದಕ್ಕೆ ನೀವು ಯಾವ ಸಕಾರಾತ್ಮಕ ಪರ್ಯಾಯವನ್ನು ಸೂಚಿಸಬಹುದು ಎನ್ನುವುದನ್ನ ನಿರ್ಧರಿಸಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರತೀ ಓದುಗನೂ
ವಿಶ್ಲೇಷಣೆ ಮಾಡುತ್ತಾನೆ
ಪವಿತ್ರ ಗ್ರಂಥಗಳನ್ನು
ತನ್ನ ಸಾಮರ್ಥ್ಯಕ್ಕನುಗುಣವಾಗಿ
ಪವಿತ್ರ ಗ್ರಂಥದ ಪುಟಗಳನ್ನು
ತೆರೆಯುತ್ತಿದ್ದಂತೆಯೇ,
ನಮ್ಮನ್ನು ಸ್ವಾಗತಿಸುತ್ತವೆ
ನಾಲ್ಕು ಹಂತದ ಒಳನೋಟಗಳು
ಮೊದಲನೇಯದೇ,
ಹೊರಗಿನ ಸಾಮಾನ್ಯ ಅರ್ಥ,
ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು.
ಎರಡನೇಯದು ಒಳ ಅರ್ಥ,
ಬುದ್ಧಿಗೆ ತಾಕುವಂಥದು.
ಮೂರನೇಯದು ಈ ಒಳ ಅರ್ಥದ
ಹೊಟ್ಟೆಯಲ್ಲಿರುವಂಥದು, ಕರುಳಿನಂಥದು.
ನಾಲ್ಕನೇಯದು
ಎಷ್ಟು ಆಳದಲ್ಲಿದೆಯೆಂದರೆ
ಯಾವ ಮಾತಿಗೂ ನಿಲುಕುವುದಿಲ್ಲ
ವರ್ಣಿಸಲೂ ಆಗದು.
ಯಾವುದನ್ನ
ಹೇಳಲಿಕ್ಕೆ ಆಗುವುದಿಲ್ಲವೋ
ಅದನ್ನು ಆಚರಿಸುವುದೇ ಧರ್ಮ,
ಅಂತೆಯೇ ಪ್ರೇಮಕ್ಕೆ ಧರ್ಮದ ಉಪಾಧಿ.
~ ಶಮ್ಸ್
ನಿಮ್ಮ ಟೀಕೆಗೆ ಪರ್ಯಾಯವನ್ನು ಯೋಚಿಸುವುದು ನಿಮಗೆ ಸಾಧ್ಯವಾಗುತ್ತಿಲ್ಲವೆಂದಾದರೆ, ಸ್ವಲ್ಪ ಕಾಯ್ದು ನೋಡಿ. ಈಗ ವಿಮರ್ಶೆ ಮಾಡಲು ಹೋಗಬೇಡಿ, ಇಂಥ ಸಂದರ್ಭದಲ್ಲಿ ಅದು ವ್ಯರ್ಥ. ಈ ಔಷಧಿ ಸರಿ ಅಲ್ಲ ಎನ್ನುವ ನಿಮ್ಮ ಟೀಕೆ ನಿಜವಿರಬಹುದು ಆದರೆ ಸರಿ ಔಷಧಿ ಯಾವುದು?
ವಿಮರ್ಶೆ, ಟೀಕೆ ಯಾವತ್ತೂ ಕ್ರಾಂತಿಯನ್ನು ಸಾಧ್ಯಮಾಡುವುದಿಲ್ಲ. ಧನಾತ್ಮಕ ಕಾರ್ಯಕ್ರಮದ ಭಾಗವಾಗಿ ವಿಮರ್ಶೆ ಒಳ್ಳೆಯದು. ಆದ್ದರಿಂದ ಮೊದಲು ಧನಾತ್ಮಕ ಕಾರ್ಯಕ್ರಮದ ಬಗ್ಗೆ ನಿರ್ಧಾರ ಮಾಡಿ, ನಂತರ ಈ ಸಕಾರಾತ್ಮಕ ಕಾರ್ಯಕ್ರಮದ ಮೇಲೆ ಒಂದು ದೃಷ್ಟಿಯನ್ನಿಡುತ್ತಲೇ ವಿಮರ್ಶೆ ಮಾಡಿ. ಆಗ ನಿಮ್ಮ ವಿಮರ್ಶೆಗೆ ಬೆಲೆ ಉಂಟು, ಆಗ ನೀವು ಯಾರನ್ನು ವಿಮರ್ಶೆ ಮಾಡುತ್ತಿದ್ದೀರೋ ಅವರು ಕೂಡ ನಿಮ್ಮ ವಿಮರ್ಶೆಯನ್ನು ಒಪ್ಪಿಕೊಳ್ಳುವರು. ಆಗ ನಿಮ್ಮ ಟೀಕೆಯ ಬಗ್ಗೆ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ ಏಕೆಂದರೆ, ನೀವು ನಿರಂತರವಾಗಿ ಕೆಲವು ಸಕಾರಾತ್ಮಕ ಪರ್ಯಾಯಗಳನ್ನು ನಿಮ್ಮ ಮೈಂಡ್ ನಲ್ಲಿ ಇಟ್ಟುಕೊಂಡೇ ಪರಿಹಾರಗಳನ್ನು ಸೂಚಿಸುತ್ತಿದ್ದೀರ.
ರವೀಂದ್ರನಾಥ ಠಾಕೂರರ ಒಂದು ಕವಿತೆಯನ್ನ ಮಾತ್ರ ಜಗತ್ತಿನಾದ್ಯಂತ ಎಲ್ಲ ವಿಮರ್ಶಕರು ಕಟುವಾಗಿ ಟೀಕಿಸಿದರು. ಏಕೆಂದರೆ ಆ ಪದ್ಯ ಏಕ್ದಂ ಶುರುವಾಗುತ್ತದೆ ಮತ್ತು ಏಕ್ದಂ ಮುಗಿದುಹೋಗುತ್ತದೆ; ಆ ಪದ್ಯಕ್ಕೆ ಒಂದು ಸರಿಯಾದ ಆರಂಭ ಮತ್ತು ಮುಕ್ತಾಯ ಇಲ್ಲ. ಅದು ಬೇರೆ ಯಾವುದೋ ಕವಿತೆಯ ಮಧ್ಯ ಭಾಗದಂತಿದೆ. ಕವಿತೆಯ ಆರಂಭ ಕಾಣೆಯಾಗಿದೆ ಹಾಗೆಯೇ ಮುಕ್ತಾಯವೂ.
ಒಮ್ಮೆ ರವೀಂದ್ರನಾಥರನ್ನ ಕೇಳಲಾಯಿತು,
“ಈ ನಿಮ್ಮ ಪದ್ಯ ಇಷ್ಟು ಕಠಿಣ ಟೀಕೆಗೊಳಗಾದರೂ ನೀವು ಯಾಕೆ ಸುಮ್ಮನಿದ್ದೀರಿ? ನಿಮ್ಮ ಅಭಿಪ್ರಾಯ ಏನು?”
ರವೀಂದ್ರನಾಥರು ಉತ್ತರಿಸಿದರು……
“ಈ ಕವಿತೆಯನ್ನು ಟೀಕಿಸಿದವರಿಗೆ ಬದುಕು ಎಂದರೇನು ಎನ್ನುವುದು ಗೊತ್ತಿಲ್ಲ. ಬದುಕು ಶುರುವಾಗೋದೇ ಮಧ್ಯದಿಂದ, ನನ್ನ ಕವಿತೆ ಬದುಕನ್ನ ಪ್ರತಿನಿಧಿಸುತ್ತದೆ. ಬದುಕು ಕೂಡ ಎಲ್ಲಿಂದಲೋ ಏಕ್ದಂ ಶುರುವಾಗುತ್ತದೆ, ಮತ್ತು ಏಕ್ದಂ ಮರೆಯಾಗಿಹೋಗುತ್ತದೆ, ಮುಕ್ತಾಯದ ಯಾವ ಅನುಭವವನ್ನೂ ನೀಡದೇ ಆವಿಯಾಗುತ್ತ.
*****************************

