ನಿದ್ರೆ ದಿವ್ಯವಾದದ್ದು. ಬೇರೆ ಯಾವ ಸಮಯಕ್ಕಿಂತಲೂ ನಿದ್ರೆ ದಿವ್ಯವಾದದ್ದು. ಯಾರಾದರೂ ಧ್ಯಾನ ಮಾಡುತ್ತ ನಿದ್ರೆ ಹೋದರೆ, ಧ್ಯಾನ ಅವರ ಸುಪ್ತಪ್ರಜ್ಞೆಯ ಪದರಗಳನ್ನು ಪ್ರವೇಶಿಸಿ ಅಲ್ಲಿ ರಿಂಗಣಿಸುತ್ತಿರುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಅವನು
ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು ನೋಡಿಕೊಂಡಾಗ ಮಾತ್ರ
ಹಾಸಿಗೆಯಲ್ಲಿ
ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ
ಚಿಟ್ಟೆಯೋ?
ಶುರುವಾಯ್ತು ಗೊಂದಲ
ಮತ್ತೆ ಜುವಾಂಗ್-ತ್ಸೆ ಗೆ.
ಯಾವತ್ತಾದರೂ ಗಮನಿಸಿದ್ದೀರಾ? ನಿದ್ರೆಗೆ ಜಾರುವ ಮುನ್ನದ ನಿಮ್ಮ ಕೊನೆಯ ಆಲೋಚನೆ, ನಿದ್ದೆಯಿಂದೆದ್ದ ಮೇಲಿನ ಮೊದಲ ಆಲೋಚನೆ, ಒಂದೇ ಆಗಿರುತ್ತದೆ. ನಿದ್ದೆಗೆ ಜಾರುವ ಮುನ್ನದ ಕೊನೆಯ ಆಲೋಚನೆ, ಅತ್ಯಂತ ಕೊನೆಯ ಆಲೋಚನೆಯನ್ನು ಗಮನಿಸಿ. ನಿದ್ದೆ ಯ ಗಡಿಯ ಮೇಲೆ ನಿಂತಿರುವಾಗಿನ ನಿಮ್ಮ ಕೊನೆಯ ಥಾಟ್, ನಿದ್ದೆಯಿಂದೇಳುವಾಗಿನ ಮೊದಲ ಥಾಟ್ ಎರಡೂ ಒಂದೇ ಆಗಿರುತ್ತದೆ.
ಆದ್ದರಿಂದಲೇ ಎಲ್ಲ ಧರ್ಮಗಳು ನಿದ್ದೆಗೆ ಜಾರುವ ಮುನ್ನ
ಪ್ರಾರ್ಥನೆ ಮಾಡಲು ಒತ್ತಾಯಿಸುತ್ತವೆ. ಆಗ ನಿಮ್ಮ ಕೊನೆಯ ಥಾಟ್ ಪ್ರಾರ್ಥನೆಯ ರೂಪದಲ್ಲಿ ನಿಮ್ಮ ಹೃದಯದಾಳಕ್ಕೆ ಇಳಿಯುತ್ತದೆ. ಪ್ರಾರ್ಥನೆ, ಇಡೀ ರಾತ್ರಿ ಪರಿಮಳದಂತೆ ನಿಮ್ಮ ಸುತ್ತ ಇರುತ್ತದೆ, ನಿಮ್ಮ ಅಂತರಂಗವನ್ನು ತುಂಬಿಕೊಳ್ಳುತ್ತದೆ ಮತ್ತು ಮುಂಜಾನೆ ನೀವು ನಿದ್ದೆಯಿಂದೆದ್ದಾಗ ನಿಮ್ಮನ್ನು ತನ್ನ ಎಲ್ಲ ಘಮದೊಂದಿಗೆ ಸ್ವಾಗತಿಸುತ್ತದೆ.
ಹೀಗೆ ಎಂಟು ಗಂಟೆಗಳ ನಿದ್ರೆಯನ್ನು ಧ್ಯಾನದಂತೆ ಉಪಯೋಗಿಸಬಹುದು. ಈಗೆಲ್ಲ ಜನರ ಬಳಿ ಬಹಳಷ್ಟು ಸಮಯ ಇರುವುದಿಲ್ಲ ಆದರೆ ನಿದ್ರೆಯ ಈ ಎಂಟು ಗಂಟೆಯನ್ನು ಧ್ಯಾನದಂತೆ ಬಳಸಬಹುದಾಗಿದೆ. ನನ್ನ ಅಪ್ರೋಚ್ ಏನೆಂದರೆ ನಾವು ಪ್ರತಿಯೊಂದನ್ನು ಬಳಸಬಹುದು, ಬಳಸಬೇಕು ಕೂಡ – ನಿದ್ರೆಯನ್ನೂ.
ಎಲ್ಲರೂ ಬುದ್ಧರೇ, ಕೆಲವರು ನಿದ್ದೆಯಲ್ಲಿರುವ ಬುದ್ಧರಾದರೆ, ಕೆಲವರು ಜಾಗೃತ ಬುದ್ಧರು. ನಿದ್ರೆ ಮತ್ತು ಎಚ್ಚರಿಕೆಯ ನಡುವೆ ಯಾವ ದಾರಿಯೂ ಇಲ್ಲ. ಪ್ರತಿ ದಿನ ಮುಂಜಾನೆ ನೀವು ನಿದ್ದೆಯಿಂದ ಎದ್ದಾಗ ಯಾವತ್ತಾದರೂ ವಿಚಾರ ಮಾಡಿದ್ದೀರಾ, ನಿದ್ದೆ ಎಲ್ಲಿ ಮುಗಿಯಿತು ಮತ್ತು ಎಚ್ಚರಿಕೆ ಎಲ್ಲಿಂದ ಶುರುವಾಯಿತು? ನಿದ್ದೆ ಮತ್ತು ಎಚ್ಚರಿಕೆಯ ನಡುವಿನ ಅಂತರ, ಇಲ್ಲವೇ ಇಲ್ಲದಷ್ಟು ಸೂಕ್ಷ್ಮ. ಯಾವುದು ಸಾಮಾನ್ಯ ಜಗತ್ತಿನಲ್ಲಿ ಸತ್ಯವೋ ಅದು ಆತ್ಯಂತಿಕ ಅನುಭವದಲ್ಲಿಯೂ ಸತ್ಯ.
ನೀವು ನಿದ್ದೆಯಲ್ಲಿರುವ ಬುದ್ಧರು. ನಿದ್ದೆಯಲ್ಲಿರುವ ಬುದ್ಧನನ್ನು ಬೋಧಿಸತ್ವ ಎನ್ನುತ್ತಾರೆ. ಅವನು ಬುದ್ಧನ ತಿರುಳಿನಂತೆ, ಬೀಜದ ಸ್ಥಿತಿಯಲ್ಲಿರುವ ಬುದ್ಧನಂತೆ. ಈ ಬೀಜ ಮಣ್ಣಿನಲ್ಲಿ ಮಾಯವಾಗಲಿ, ಅದರ ಮೇಲೆ ಮಳೆ ಸುರಿಯಲಿ, ಬೀಜ ಮೊಳಕೆಯೊಡೆದು ಸಸಿಯಾಗಿ, ಗಿಡವಾಗಿ, ಆ ಗಿಡದಲ್ಲಿ ಹೂವು ಅರಳಲಿ. ಬೋಧಿಸತ್ವ ಹೀಗೆ ಬುದ್ಧನಾಗುವಂತೆ, ನೀವು ನಿದ್ದೆಯಲ್ಲಿರುವ ಬುದ್ಧರು, ಎಚ್ಚರದ ಬುದ್ಧರಾಗಲಿದ್ದೀರಿ. ಯಾವ ವ್ಯತ್ಯಾಸವೂ ಇಲ್ಲ, ಎಲ್ಲರೂ ಬುದ್ಧರೇ, ಕೆಲವರು ನಿದ್ದೆಯಲ್ಲಿದ್ದಾರೆ ಕೆಲವರು ಎಚ್ಚರವಾಗಿದ್ದಾರಷ್ಟೇ.
*********************************

