ಆರಾಧನೆಯ ಮನೋಭಾವ ನಮ್ಮ ಅಂತರಾಳದಲ್ಲಿ ಅನುಭವಿಸುವಂಥದು. ನಿಜವಾಗಿಯೂ ಆರಾಧನೆ ಎಂದರೇನು ಎನ್ನುವುದನ್ನ ಜನ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬೆರಗು ಕಳೆದುಕೊಂಡವರು
ಧರ್ಮಕ್ಕೆ ಶರಣಾಗುತ್ತಾರೆ.
ಸ್ವಂತದ ಬಗ್ಗೆ ನಂಬಿಕೆಯಿಲ್ಲದವರು
ಅಧಿಕಾರವನ್ನು ಆಶ್ರಯಿಸುತ್ತಾರೆ.
ಆದ್ದರಿಂದಲೇ ಸಂತ
ಜನರಿಗೆ ಗೊಂದಲವಾಗದಿರಲೆಂದು
ಒಂದು ಹೆಜ್ಜೆ ಹಿಂದೆ ನಿಲ್ಲುತ್ತಾನೆ.
ಅವನು ಕಲಿಸುವ ರೀತಿ ಹೇಗೆಂದರೆ
ಜನರಿಗೆ
ಕಲಿಯುವ ಪ್ರಮೇಯವೇ ಇರುವುದಿಲ್ಲ.
~ ಲಾವೋತ್ಸೇ
ಆರಾಧನೆ ಎನ್ನುವುದು, ಯಾವ ಲೆಕ್ಕಾಚಾರವಿಲ್ಲದೆ, ಯಾವ ಕಪಟವಿಲ್ಲದೆ, ಯಾವ ವಿಶ್ಲೇಷಣೆಯಿಲ್ಲದೆ, ತುಂಬು ಬೆರಗಿನಲ್ಲಿ, ಮಗುವಿನ ಹೃದಯದಿಂದ ಸತ್ಯವನ್ನು ಅಪ್ರೋಚ್ ಮಾಡುವುದು. ಇದು ನಿಮ್ಮನ್ನು ಸುತ್ತುವರೆದಿರುವ ರಹಸ್ಯ ಭಾವ, ಇಲ್ಲಿ ಸಂಗತಿಗಳು ತಾವು ಕಾಣಿಸುವ ಹಾಗೆ ಇರುವುದಿಲ್ಲ. ಇದು, ಬಹಿರಂಗ ಕಾಣುವಿಕೆ ಕೇವಲ ಮೇಲ್ಮೈ, ಒಳಗೆ ಇರುವುದು ಮಾತ್ರ ಪ್ರಚಂಡ ಮಹತ್ವದ್ದು ಎನ್ನುವುದನ್ನ ತಿಳಿದುಕೊಳ್ಳುವುದು.
ಯಾವಾಗ ಮಗು ಚಿಟ್ಟೆಯ ಹಿಂದೆ ಓಡಾಡುತ್ತದೆಯೋ ಆಗ ಅದು ಆರಾಧನಾ ಭಾವದಲ್ಲಿರುತ್ತದೆ. ಅಥವಾ ಮಗು ಯಾವಾಗ ತನ್ನ ಹಾದಿಯಲ್ಲಿ ಸಾಧಾರಣ ಹುಲ್ಲಿನ ಹೂವನ್ನು ಕಂಡು ಬೆರಗಿನಲ್ಲಿ ನೋಡುತ್ತ ನಿಲ್ಲುತ್ತದೆಯೋ ಅದು ಆರಾಧನಾ ಭಾವ. ಅಥವಾ ತನ್ನ ಹಾದಿಯಲ್ಲಿ ಹಾವು ಕಂಡು ಬೆಚ್ಚಿ ಬೀಳುವ ಮಗುವಿನ ಎನರ್ಜಿಯಲ್ಲಿ ಕಾಣುವುದು ಆರಾಧನಾ ಭಾವ. ಪ್ರತಿಯೊಂದು ಕ್ಷಣವೂ ಬೆರಗು ಹುಟ್ಟಿಸುವಂಥದು. ಮಗು ಯಾವುದನ್ನೂ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವುದಿಲ್ಲ ; ಇದು ಆರಾಧನೆಯ ಮನೋಭಾವ.
ಯಾವುದನ್ನೂ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಬೇಡಿ. ಒಮ್ಮೆ ನೀವು ಸಂಗತಿಗಳನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಲು ಶುರು ಮಾಡಿದಿರೆಂದರೆ, ನಿಂತ ನೀರಾಗುತ್ತೀರಿ. ನಿಮ್ಮೊಳಗಿನ ಮಗು ಕಾಣೆಯಾಗುತ್ತದೆ, ನಿಮ್ಮ ಬೆರಗು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ, ಯಾವಾಗ ಹೃದಯದಲ್ಲಿ ಬೆರಗು ಇರುವುದುಲ್ಲವೋ ಆಗ ಆರಾಧಾನಾ ಭಾವವೂ ಇರುವುದಿಲ್ಲ. ಬದುಕು ಎಷ್ಟು ರಹಸ್ಯಮಯವಾಗಿದೆಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವ ಯಾವ ಉಪಾಯವೂ ಇಲ್ಲ ಎನ್ನುವ ತಿಳುವಳಿಕೆಯೇ ಆರಾಧನೆ. ಇದು ಎಲ್ಲ ತಿಳುವಳಿಕೆಯನ್ನು ಮೀರಿದ್ದು; ನಮ್ಮ ಎಲ್ಲ ಪ್ರಯತ್ನಗಳು ಇಲ್ಲಿ ವಿಫಲಗೊಳ್ಳುತ್ತವೆ. ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಪ್ರಯತ್ನ ಮಾಡಿದಂತೆಲ್ಲ ಅದು ಹೆಚ್ಚು ನಿಗೂಢವಾಗುತ್ತ ಹೋಗುತ್ತದೆ.
ಒಬ್ಬ ವಯಸ್ಸಾದ ಮನುಷ್ಯ ಸಮುದ್ರದ ದಂಡೆಯ ಮೇಲೆ ಓಡಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ನಕ್ಷತ್ರ ಮೀನುಗಳು ತೀರದಲ್ಲಿ ಚಡಪಡಿಸುವುದನ್ನ ಕಂಡ.
ದೂರದಲ್ಲಿ ಒಬ್ಬ ಹುಡುಗಿ ಒಂದೊಂದಾಗಿ ಮೀನುಗಳನ್ನು ಎತ್ತಿ ವಾಪಸ್ ಸಮುದ್ರಕ್ಕೆ ಎಸೆಯುತ್ತಿದ್ದಳು. ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತನಾದ ಮನುಷ್ಯ ಹತ್ತಿರ ಹೋಗಿ ಆ ಹುಡುಗಿಯನ್ನು ಮಾತಾಡಿಸಿದ.
“ ಹುಡುಗಿ, ಏನು ಮಾಡುತ್ತಿದಿ? “
“ ಈ ಮೀನುಗಳನ್ನು ಕಾಪಾಡುತ್ತಿದ್ದೇನೆ “ ಉತ್ತರಿಸಿದಳು ಹುಡುಗಿ. “ ನಾನು ಈ ಮೀನುಗಳನ್ನ ವಾಪಸ್ ಸಮುದ್ರಕ್ಕೆ ಬಿಡದಿದ್ದರೆ, ಅವು ಸತ್ತು ಹೋಗುತ್ತವೆ “
ಹುಚ್ಚು ಹುಡುಗಿ, ಆ ಮನುಷ್ಯ ಒಳಗೊಳಗೆ ನಕ್ಕ.
“ ಇರುವುದು ನೀನೊಬ್ಬಳೇ, ಮೀನುಗಳೋ ಸಾವಿರ ಸಾವಿರ. ಹೇಳು ಹೇಗೆ ಸಾಧ್ಯ ಈ ಕೆಲಸ ನಿನ್ನಿಂದ? “
ಹುಡುಗಿ ಬಾಗಿ ಒಂದು ಮೀನನ್ನು ಕೈಗೆತ್ತಿಕೊಂಡು ಆ ಮೀನನ್ನು ಒಮ್ಮೆ, ಆ ಮನುಷ್ಯನನ್ನು ಒಮ್ಮೆ ನೋಡಿದಳು.
“ನೋಡು ಹೀಗೆ” ಎನ್ನುತ್ತಾ
ಮೀನನ್ನು ಬೀಸಿ ಸಮುದ್ರದಲ್ಲಿ ಎಸೆದಳು.

