ಶರಣಾಗತಿ ( Surrender ): ಓಶೋ 365 #Day 162



ಆಳದಲ್ಲಿ ನೀವು ಸಂಪೂರ್ಣ ಶರಣಾಗತಿಯ ಸ್ಥಿತಿಗೆ ಮರಳಲು ಬಯಸುತ್ತೀರಿ, ಅಲ್ಲಿ ನಿಮ್ಮ ಎಲ್ಲ ಚಿಂತೆಗಳು ಕರಗಿ ಹೋಗುತ್ತವೆ ಮತ್ತು ನೀವು ಪ್ರಶಾಂತತೆಯಲ್ಲಿ ನೆಲೆಯಾಗುತ್ತೀರಿ. ಆದರೆ ನಿಮಗೆ ಭಯ ; ಪ್ರತಿಯೊಬ್ಬರೂ ಸಂಪೂರ್ಣ ಶರಣಾಗತಿಯ ಕುರಿತಾದ ಭಯದಿಂದ ನರಳುತ್ತಿದ್ದಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

********************

ಭಗವಂತ
ಸಜೀವ ನನ್ನ ಚರ್ಮ ಸುಲಿದರೂ
ನಾನು ತುಟಿ ಬಿಚ್ಚುವುದಿಲ್ಲ.
ಈ ನೋವು ನನ್ನದಲ್ಲ
ಅವನದು,
ಅವನೊಬ್ಬನೇ ನಮ್ಮ ಗೆಳೆಯ
ಬೇರೆಯವರೇಲ್ಲ ವೈರಿಗಳು.
ಗೆಳೆಯರು, ಗೆಳೆಯರ ಬಗ್ಗೆ
ವೈರಿಗಳಿಗೆ ಹೇಳುವುದಿಲ್ಲ
ದೂರು.

– ರೂಮಿ.

ಸಾಮಾನ್ಯವಾಗಿ ನಾವು ನಮ್ಮನ್ನು, ನಮ್ಮ ಬಳಿ ಏನೂ ಇರದ ಸಾಧಾರಣ ಜನ ಎಂದುಕೊಂಡಿರುತ್ತೇವೆ, ಶರಣಾಗಿಸುವಂಥದು ನಮ್ಮ ಬಳಿ ಏನಿದೆ? ಕೇವಲ ಒಂದು ಬೋಗಸ್ ಅಹಂ, ನಾವು ‘ಅವರು’ (somebody) ಎನ್ನುವ  ಒಂದು ಐಡಿಯಾ. ಇದು ಕಾಲ್ಪನಿಕ. ಯಾವಾಗ ನೀವು ಕಾಲ್ಪನಿಕವನ್ನು ಶರಣಾಗಿಸುತ್ತೀರೋ ಆಗ ನೀವು ನೈಜವಾಗುತ್ತೀರಿ. ಯಾವಾಗ ನೀವು ನಿಮ್ಮ ಬಳಿ ನಿಜವಾಗಿ ಇರದುದನ್ನು ಸರೆಂಡರ್ ಮಾಡುತ್ತೀರೋ, ಆಗ ನೀವು ನಿಜವಾಗಿ ಇರುವಂತೆ ಆಗುತ್ತೀರಿ. ಆದರೆ ನಾವು ಅಂಟಿಕೊಳ್ಳುತ್ತೇವೆ ಏಕೆಂದರೆ ನಮ್ಮ ಇಡೀ ಬದುಕಿನಲ್ಲಿ ನಮಗೆ ಸ್ವತಂತ್ರರಾಗಿರಬೇಕೆಂದು ತರಬೇತಿ ನೀಡಲಾಗಿದೆ. ನಮ್ಮ ಇಡೀ ಬದುಕಿನುದ್ದಕ್ಕೂ ಬದುಕೆನ್ನುವುದು ಬದುಕುಳಿಯುವದಕ್ಕಾಗಿ ನಾವು ಮಾಡುವ ಸಂಘರ್ಷ ಎನ್ನುವುದನ್ನು ನಮ್ಮ ತಲೆಯಲ್ಲಿ ತುಂಬಲಾಗಿದೆ, ಈ ದಾರಿಯಲ್ಲಿ ನಮಗೆ ತರಬೇತಿ ನೀಡಲಾಗಿದೆ.

ನೀವು ಶರಣಾಗಲು ಶುರು ಮಾಡಿದಾಗ ಮಾತ್ರ ಬದುಕು ನಿಮಗೆ ಅರ್ಥವಾಗುತ್ತ ಹೋಗುತ್ತದೆ. ಆಗ ನೀವು ಸಂಘರ್ಷವನ್ನು ನಿಲ್ಲಿಸಿ ಬದುಕನ್ನು ಆನಂದಿಸಲು ಶುರು ಮಾಡುತ್ತೀರಿ.  ಆದರೆ ಪಾಶ್ಚಿಮಾತ್ಯರಲ್ಲಿ ಅಹಂ ನ ಪರಿಕಲ್ಪನೆ ಬಹಳ ಶಕ್ತಿಶಾಲಿಯಾಗಿದೆ ಮತ್ತು ಪ್ರತಿಯೊಬ್ಬರು ಏನೋ ಒಂದನ್ನು ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ. ಜನ ಪ್ರಕೃತಿಯನ್ನೂ ಗೆಲ್ಲುವ ಮಾತನಾಡುತ್ತಿದ್ದಾರೆ ; ಅತ್ಯಂತ ಮೂರ್ಖತನ ಇದು! ನಾವು ಪ್ರಕೃತಿಯ ಭಾಗವಾಗಿರುವುದರಿಂದ ಅದನ್ನು ಗೆಲ್ಲುವುದು ಹೇಗೆ ಸಾಧ್ಯ? ಅದನ್ನು ನಾವು ನಾಶ ಮಾಡಬಹುದೇ ಹೊರತು ಗೆಲ್ಲುವುದು ಅಸಾಧ್ಯ. ಆದ್ದರಿಂದಲೇ ಇಡೀ ಪ್ರಕೃತಿ ವಿನಾಶದತ್ತ ಸಾಗಿದೆ ಮತ್ತು ಪರಿಸರ ಡಿಸ್ಟರ್ಬ್ಡ ಆಗಿದೆ.

ಗೆಲ್ಲುವಂಥದು ಏನೂ ಇಲ್ಲ. ಬದಲಾಗಿ ನಾವು ಪ್ರಕೃತಿಯ ಜೊತೆ, ಪ್ರಕೃತಿಯಲ್ಲಿ ಸಾಗಬೇಕಿದೆ, ಪ್ರಕೃತಿಯ ಸಹಜತೆಯನ್ನು ಕಾಯ್ದುಕೊಳ್ಳಬೇಕಿದೆ.

ಶರಣಾಗತಿ ಎಂದರೆ ಏನು? ಅದು ಹೇಗೆ ಸಾಧ್ಯವಾಗುತ್ತದೆ?  ಅಹಂ ಎನ್ನುವುದು ಮಿಥ್ಯೆ ಎಂದು ಅರ್ಥಮಾಡಿಕೊಳ್ಳುವುದೇ ಶರಣಾಗತಿ.  ಈ ತಿಳುವಳಿಕೆ ಪಕ್ಕಾ ಆದಾಗಲೇ ಅಹಂ ಆವಿಯಾಗಿಬಿಡುತ್ತದೆ, ಆಮೇಲೆ ಅದು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ, ಆಗಲೇ ಶರಣಾಗತಿ ಸಂಪೂರ್ಣ. ಶರಣಾಗತಿ ನಿಮ್ಮಿಂದ ಸಾಧ್ಯವಾಗಿಲ್ಲ, ಅದು ತನ್ನಿಂದ ತಾನೇ ಸಂಭವಿಸಿದೆ. ಆಗ ಮಾತ್ರ ಅದು ನಿಜವಾದದ್ದು, ಸಾಚಾ ಆದದ್ದು. ಆಗ ಆ ಶರಣಾಗತಿಗೆ ಅದ್ಭುತ ಸೌಂದರ್ಯ ಮತ್ತು ಅಪಾರ ಸಾಮರ್ಥ್ಯ ಲಭ್ಯವಾಗುತ್ತದೆ. ಏಕೆಂದರೆ ಈಗ ನೀವು ಸಮಸ್ತದ ವಾಹಕವಾಗಿ ರೂಪಗೊಂಡಿದ್ದೀರಿ. ಈಗ ನೀವು ಭಾಗ ಅಲ್ಲ, ಇಡೀ ಸಮಸ್ತವನ್ನು ಪ್ರತಿನಿಧಿಸುತ್ತಿದ್ದೀರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.