ಪ್ರೇಮ ಉನ್ಮತ್ತವಾದದ್ದು, ಮತ್ತು ಅದನ್ನು ಒಗ್ಗಿಸಿಕೊಳ್ಳಲು ಪ್ರಯತ್ನಿಸಿದ ಕ್ಷಣದಲ್ಲಿಯೇ ಅದು ನಾಶವಾಗಿಬಿಡುತ್ತದೆ. ಪ್ರೇಮ, ಸ್ವಾತಂತ್ರ್ಯದ, ಉನ್ಮತತ್ತೆಯ, ಸಹಜತೆಯ ಚಂಡಮಾರುತ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಉಪದೇಶ ಮಾಡುವ ಗುರುಗಳು,
ತಂತ್ರಗಳನ್ನು ಕಲಿಸಲು
ಶುರು ಮಾಡುತ್ತಿದ್ದಂತೆಯೇ
ನಾವು ದೂರ ಹೋಗಿ ನಿಲ್ಲುವುದು
ಜಾಣತನ.
ಕೆಲ ದೇವರುಗಳಿಗೆ ಸಂಯಮ ಕಡಿಮೆ.
ಸಿಟ್ಟು ಬಂದರೆ ಚಪ್ಪಲಿ ತೆಗೆದು
ಆ ಗುರುವಿನತ್ತ ಎಸೆದುಬಿಡುತ್ತಾರೆ.
– ಹಾಫಿಜ್
ಪ್ರೇಮವನ್ನು ಮ್ಯಾನೇಜ್ ಮಾಡುವುದು ಮತ್ತು ನಿಯಂತ್ರಿಸುವುದು ಸಾಧ್ಯವಿಲ್ಲ. ಅದನ್ನು ನಿಯಂತ್ರಣಕ್ಕೆ ಒಳಪಡಿಸಿದಾಗಲೆಲ್ಲ ಅದು ಸತ್ತು ಹೋಗಿದೆ. ಪ್ರೇಮ ತನ್ನ ಜೀವಂತಿಕೆಯನ್ನು ಕಳೆದುಕೊಂಡಿರುವಾಗ ಮಾತ್ರ ಅದನ್ನು ನೀವು ಕಂಟ್ರೋಲ್ ಮಾಡಬಹುದು. ಪ್ರೇಮ ಜೀವಂತವಾಗಿದೆಯೆಂದರೆ ಅದು ನಿಮ್ಮನ್ನು ನಿಯಂತ್ರಿಸುತ್ತದೆ. ನೀವು ಸುಮ್ಮನೇ ಪ್ರೇಮದಲ್ಲಿ ಕಳೆದುಹೋಗುತ್ತೀರ, ಏಕೆಂದರೆ ಪ್ರೇಮ ಅಷ್ಟು ದೊಡ್ಡದಾದದ್ದು, ಅಷ್ಟು ಅಪಾರವಾದದ್ದು, ಪ್ರಾಥಮಿಕವಾದದ್ದು, ಮೂಲಭೂತವಾದದ್ದು.
ದೇವರೂ ಥೇಟ್ ಪ್ರೇಮದ ಹಾಗೆಯೇ. ಪ್ರೇಮ ನಿಮಗೆ ಒದಗಿಬರುವ ರೀತಿಯ ಥರವೇ ದೇವರೂ ನಿಮಗೆ ಒದಗಿ ಬರುತ್ತಾನೆ. ದೇವರೂ ಉನ್ಮತ್ತ, ಪ್ರೇಮಕ್ಕಿಂತಲೂ ಉನ್ಮತ್ತ. ಎಲ್ಲಾದರೂ ನಾಗರೀಕ ದೇವರು ಇದ್ದಾನೆಂದರೆ ಅವನು ದೇವರೇ ಅಲ್ಲ. ಚರ್ಚಿನ ದೇವರು, ಗುಡಿ ಗುಂಡಾರಗಳ ದೇವರು ಕೇವಲ ಮೂರ್ತಿ ಮಾತ್ರ. ಈ ಜಾಗಗಳಿಂದ ದೇವರು ಮಾಯವಾಗಿ ಎಷ್ಟೋ ಕಾಲವಾಗಿ ಹೋಯ್ತು. ಏಕೆಂದರೆ ದೇವರನ್ನು ಬಂಧಿಸಿಡುವುದು ಸಾಧ್ಯವಿಲ್ಲ, ಈ ಜಾಗಗಳು ದೇವರ ಗೋರಿಗಳು.
ನಿಮಗೆ ದೇವರನ್ನು ಹುಡುಕಬೇಕಾಗಿದ್ದರೆ ನೀವು, ಬದುಕಿನ ಉನ್ಮತ್ತ ಎನರ್ಜಿಗೆ ಲಭ್ಯವಾಗಿರಬೇಕು. ಪ್ರೇಮ ಈ ಉನ್ಮತ್ತ ಹುಡುಕಾಟದ ಮೊದಲ ಹೊಳಹು. ದೇವರು ಈ ಹುಡುಕಾಟದ ಕ್ಲೈಮ್ಯಾಕ್ಸ್ , ಗಮ್ಯ. ಆದರೆ ದೇವರು ಅವತರಿಸುವುದು ಮಾತ್ರ ಚಂಡಮಾರುತದ ರೂಪದಲ್ಲಿ. ಅವನು ನಿಮ್ಮನ್ನು ಬೇರು ಸಹಿತ ಕೀಳುತ್ತಾನೆ, ಪೂರ್ತಿಯಾಗಿ ಆವರಿಸಿಕೊಳ್ಳುತ್ತಾನೆ, ನಿಮ್ಮನ್ನು ಚೂರು ಚೂರಾಗಿಸುತ್ತಾನೆ. ದೇವರು ನಿಮ್ಮನ್ನು ನಾಶಮಾಡಿ ಪುನರುತ್ಥಾನಗೊಳಿಸುತ್ತಾನೆ. ಅವನು ಶಿಲುಬೆಯೂ ಹೌದು, ಪುನರುತ್ಥಾನವೂ ಹೌದು.

