ಶಾಸ್ತ್ರಗಳು ( Scriptures): ಓಶೋ 365 #Day 169



ಹಲವಾರು ಶಾಸ್ತ್ರಗಳಿವೆ ಮತ್ತು ಇನ್ನೂ ಮಹತ್ವದ ಫಿಲಾಸಫಿಗಳಿವೆ, ಆದರೆ ಇವೆಲ್ಲ ವ್ಯರ್ಥ ! ಇವು ಮೂರ್ಖರನ್ನು ಬ್ಯುಸಿ ಆಗಿ ಇಡಲು ಮಾತ್ರ. ಇವು ನಿಜವಾದ ಅನ್ವೇಷಕರಿಗೆ ಅಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ಹೇಳುತ್ತಿರುವುದೆಲ್ಲ ಜೀವಂತಿಕೆಯಿಂದ ಕೂಡಿದ್ದು, ಹೊಸತು, ತಾಜಾ ಮತ್ತು ಯಂಗ್. ಇದು ಸಾಂಪ್ರದಾಯಿಕ ಅಲ್ಲವೇ ಅಲ್ಲ, ಸಂಪೂರ್ಣವಾಗಿ ವಿಭಿನ್ನ ವಿದ್ಯಮಾನ. ಏಕೆಂದರೆ ಸುಮಾರು ಮೂರು ಸಾವಿರ ವರ್ಷಗಳಿಂದ ರಚಿತವಾದ ಶಾಸ್ತ್ರಗಳು ಆ ಕಾಲದ ಜನರಿಗೆ ಮಾತ್ರ. ಆ ಕಾಲದ ಸೈಕಾಲಜಿ ಇವತ್ತಿನ ಜಗತ್ತಿಗೆ ಸಂಬಂಧಿಸಿದ್ದಲ್ಲ. ನಾನು ನಿಮಗೆ ಪ್ರತಿಕ್ರಯಿಸುತ್ತಿರುವ ಹಾಗೆ ಆ ಕಾಲದ ಶಾಸ್ತ್ರಗಳು ಆ ಕಾಲದ ಜನರಿಗೆ ಸಂಬಂಧಿಸಿದ್ದವು, ನಿಮಗೆ ಸಂಬಂಧಿಸಿದ್ದಲ್ಲ. ನಿಮ್ಮ ಮತ್ತು ಆ ಶಾಸ್ತ್ರಗಳ ನಡುವೆ ನಾಲ್ಕೈದು ಸಾವಿರ ವರ್ಷಗಳ ಅಂತರವಿದೆ. ಅವು ಈಗ ಸಂಪೂರ್ಣ ಅಪ್ರಸ್ತುತ. ಅವುಗಳನ್ನು ಅವಲಂಬಿಸುವುದೆಂದರೆ, ನ್ಯೂಟನ್ ನ ವರೆಗೆ ಮಾತ್ರ ಅಭ್ಯಾಸ ಮಾಡಿ, ಐನಸ್ಟೈನ್ ನ ಬಿಟ್ಟು ಬಿಡುವುದು.

ಶಾಸ್ತ್ರಗಳು ಎಂದೂ ಜೀವಂತ ಮನುಷ್ಯರಿಗೆ ಪ್ರತಿಕ್ರಯಿಸುವುದಿಲ್ಲ; ಏಕೆಂದರೆ ಅವುಗಳಿಗೆ ಬೆಳವಣಿಗೆ ಇಲ್ಲ. ಆದ್ದರಿಂದಲೇ ಹಿಂದಿನ ಕಾಲದ ಮಾಸ್ಟರ್ ಗಳು ತಮ್ಮ ತಿಳುವಳಿಕೆಯನ್ನು ಬರೆದಿಡುತ್ತಿರಲಿಲ್ಲ, ಇದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತಿತ್ತು. ಆದ್ದರಿಂದ ಮಾಸ್ಟರ್ ಗಳ ಕಾಲ ಮುಗಿದು ಹೋದರೂ ಅವರ ಶಿಷ್ಯರು ತಮ್ಮ ಕಾಲಕ್ಕೆ ಪ್ರಸ್ತುತವಾದದ್ದನ್ನೇ ಜನರಿಗೆ ಬೋಧಿಸುತ್ತಿದ್ದರು. ಜನ ಮತ್ತು ಸಂದರ್ಭಗಳು ಬದಲಾಗಿರುವುದರಿಂದ ಅವರು ತಮ್ಮ ಬೋಧನೆಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಆದರೆ ಒಮ್ಮೆ ನೀವು ಈ ತಿಳುವಳಿಕೆಯನ್ನ ಪುಸ್ತಕಗಳಲ್ಲಿ ಇಳಿಸಿಬಿಟ್ಚರೆ ಅವು ಫಿಕ್ಸ್ ಆಗಿ ಹೋಗುತ್ತವೆ. ನಂತರ ಅದನ್ನು ಯಾರೂ ಬದಲಾಯಿಸುವ ಹಾಗಿಲ್ಲ. ಯಾರಾದರೂ ಈ ಶಾಸ್ತ್ರಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದ್ದಾದರೆ ಜನ ರೊಚ್ಚಿಗೆದ್ದು ಬಿಡುತ್ತಾರೆ.

ಒಂದು ಆಶ್ರಮದಲ್ಲಿ,  ಪ್ರತೀ ಸಂಜೆ ಅಧ್ಯಾತ್ಮಿಕ ಗುರುಗಳು ತಮ್ಮ ಶಿಷ್ಯರೊಂದಿಗೆ ಧ್ಯಾನಕ್ಕೆ ಕೂರುತ್ತಿದ್ದಂತೆಯೇ, ಅವರೇ ಸಾಕಿಕೊಂಡಿದ್ದ ಬೆಕ್ಕೊಂದು ತುಂಬಾ ಸದ್ದು ಮಾಡುತ್ತಾ, ಓಡಾಡುತ್ತ, ಧ್ಯಾನಕ್ಕೆ ಅಡಚಣಿ ಉಂಟು ಮಾಡುತ್ತಿತ್ತು.

ಇದರಿಂದ ಬೇಸತ್ತ ಗುರುಗಳು ಆ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಆಜ್ಞಾಪಿಸಿದರು.

ಆನಂತರ ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಸರಿಯಾಗಿ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕಲಾಗುತ್ತಿತ್ತು.

ಕೆಲ ವರ್ಷಗಳಾದ ಮೇಲೆ ಗುರುಗಳು ತೀರಿ ಹೋದರು. ಆದರೂ ಬೆಕ್ಕನ್ನು ಪ್ರತೀ ಸಂಜೆ ಕಟ್ಟಿ ಹಾಕುವ ಪರಿಪಾಠ ಮುಂದುವರೆಯಿತು.

ಕೊನೆಗೊಮ್ಮೆ ಬೆಕ್ಕೂ ತೀರಿಕೊಂಡಿತು. ಆಮೇಲಿಂದ ಶಿಷ್ಯರು ಇನ್ನೊಂದು ಬೆಕ್ಕನ್ನು ತಂದು ಪ್ರತೀ ಸಂಜೆ ಧ್ಯಾನದ ಸಮಯಕ್ಕೆ  ಕಂಬಕ್ಕೆ ಕಟ್ಟಿ ಹಾಕತೊಡಗಿದರು.

ಕೆಲ ಶತಮಾನಗಳ ನಂತರ , ಆ ಆಶ್ರಮದ ಮುಂದಿನ ಪೀಳಿಗೆಯ ವಿದ್ವಾಂಸರು,  ಧ್ಯಾನ ಮಾಡುವಾಗ ಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕುವ ಸಂಪ್ರದಾಯದ ಧಾರ್ಮಿಕ ಮಹತ್ವದ ಬಗ್ಗೆ ಧರ್ಮಶಾಸ್ತ್ರಗಳನ್ನು ರಚಿಸಿದರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.