ಒಮ್ಮೆ ನಿಮಗೆ ಪಾತ್ರಗಳಲ್ಲಿ ನಟಿಸುವ ಸಾಮರ್ಥ್ಯ ಸಾಧ್ಯವಾಗಿಬಿಟ್ಟರೆ, ನೀವು ಅವುಗಳಿಂದ ಸ್ವತಂತ್ರರಾಗಿಬಿಡುತ್ತೀರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪಾತ್ರಗಳಲ್ಲಿ ನಟಿಸುವಾಗ ಎದುರಾಗುವ ಕಷ್ಟ ಏನು? ಕಷ್ಟದ ಕಾರಣ ಏನೆಂದರೆ, ನೀವು ಇನ್ನೊಂದು ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟಿದ್ದೀರ ಮತ್ತು ಅದನ್ನೇ ನೀವು ನಿಮ್ಮ ವ್ಯಕ್ತಿತ್ವ ಎಂದುಕೊಂಡುಬಿಟ್ಟಿದ್ದೀರ. ನೀವು ಒಂದು ಪಾತ್ರದಲ್ಲಿ ಅಭಿನಯಿಸುತ್ತಿದ್ದೀರ ಮತ್ತು ನೀವು ಆ ಪಾತ್ರದೊಂದಿಗೆ ನಿಮ್ಮನ್ನು ನೀವು ಎಷ್ಟು ಗುರುತಿಸಿಕೊಂಡಿದ್ದೀರ ಎಂದರೆ ಬೇರೆ ಪಾತ್ರದಲ್ಲಿ ಅಭಿನಯಿಸುವುದು ನಿಮಗೆ ಅಸಾಧ್ಯ ಅನಿಸುತ್ತದೆ. ಹಳೆಯ ಪಾತ್ರದಿಂದ ನೀವು ಕಳಚಿಕೊಂಡು ಹೊಸ ಪಾತ್ರದೆಡೆಗೆ ಮೂವ್ ಆಗಬೇಕಿದೆ. ಹೊಸ ಪಾತ್ರಕ್ಕೆ ಮೂವ್ ಆಗುವುದು ಒಳ್ಳೆಯದು. ಮತ್ತು ಆ ಪಾತ್ರವನ್ನ ನೀವು ನಿಮ್ಮ ಹೊಸ ಆಟದ ಪಾತ್ರ ಮಾತ್ರ ಎಂದುಕೊಂಡುಬಿಡಬೇಕು.
ನಿಮ್ಮ ಒಳಗಿನ ತಿರುಳಿಗೆ ಯಾವ ವ್ಯಕ್ತಿತ್ವ ಇಲ್ಲ. ನಿಮ್ಮ ತಿರುಳಿಗೆ ಯಾವ ನಿರ್ದಿಷ್ಟ ಪಾತ್ರವಿಲ್ಲ. ಅದು ಯಾವ ಪಾತ್ರವನ್ನಾದರೂ ಅಭಿನಯಿಸಬಲ್ಲದು, ಆದರೆ ಅದಕ್ಕೆ ಯಾವ ಕ್ಯಾರೆಕ್ಟರ್ ಇಲ್ಲ. ಈವಿಶಿಷ್ಟತೆಯೇ ಆಂತರ್ಯದ ಸ್ವಾತಂತ್ರ್ಯವನ್ನು ಸುಂದರವಾಗಿಸುತ್ತದೆ. ಆದ್ದರಿಂದ ನೀವು ಕೇವಲ ನಟರಾಗಿ. ಒಂದು ಫಿಲ್ಮ್ ನಲ್ಲಿ ನಟ ಒಂದು ಪಾತ್ರದಲ್ಲಿ ಅಭಿನಯಿಸುತ್ತಿದ್ದರೆ ಇನ್ನೊಂದು ಫಿಲ್ಮ್ ನಲ್ಲಿ ಅವನು ಇನ್ನೊಂದು ಪಾತ್ರದಲ್ಲಿ ನಟಿಸುತ್ತಿದ್ದಾನೆ. ಮುಂಜಾನೆ ಒಂದು ಪಾತ್ರವಾದರೆ ಸಂಜೆ ಇನ್ನೊಂದು ಪಾತ್ರ. ನಟ ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಸರಾಗವಾಗಿ ಜಾರಿಕೊಳ್ಳುತ್ತಾನೆ, ಏಕೆಂದರೆ ಇದು ಕೇವಲ ಅಭಿನಯ ಎನ್ನುವುದು ಅವನಿಗೆ ಗೊತ್ತು.
ಎಲ್ಲ ಬದುಕು ಹೀಗೆಯೇ ಇರಬೇಕು. ಪ್ರತಿಯೊಬ್ಬರೂ ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಯಾವ ಗೊಂದಲವಿಲ್ಲದಂತೆ ಸರಾಗವಾಗಿ ಜಾರಿಕೊಳ್ಳುವಂತಿರಬೇಕು. ಆಗ ನಿನಗೆ ನಿಮ್ಮೊಳಗೆ ಹುಟ್ಟುತ್ತಿರುವ ಸ್ವಾತಂತ್ರ್ಯದ ಅನುಭವವಾಗುತ್ತದೆ, ಮತ್ತು ನೀವು ನಿಮ್ಮ ನಿಜವಾದ ತಿರುಳನ್ನು ಅನುಭವಿಸುತ್ತೀರಿ. ಇಲ್ಲವಾದರೆ ನೀವು ಯಾವಾಗಲೂ ಒಂದು ಪಾತ್ರಕ್ಕೆ ಅಂಟಿಕೊಂಡು ಕಷ್ಟ ಅನುಭವಿಸಬೇಕಾಗುತ್ತದೆ.
ಮುಲ್ಲಾ ನಸ್ರುದ್ದೀನ್ ಗೆ ಕೆಲಸ ಇರಲಿಲ್ಲ. ಸ್ವಲ್ಪ ಕೂಡ ಪ್ರತಿಭೆ ಇಲ್ಲದಿದ್ದರೂ ನಾಟಕಗಳಲ್ಲಿ ಪಾತ್ರ ಮಾಡುವ ಹುಚ್ಚು. ಮೇಲಿಂದ ಮೇಲೆ ನಾಟಕಗಳಲ್ಲಿ ಪಾತ್ರ ಕೊಡಿಸುವ ದಲ್ಲಾಳಿಯ ಮನೆಗೆ ಹೋಗಿ ಪಾತ್ರ ಕೊಡಿಸುವಂತೆ ಗೋಗರೆಯುತ್ತಿದ್ದ.
ನಸ್ರುದ್ದೀನ್ ನ ಪ್ರತಿಭೆಯ ವಿಷಯಪೂರ್ತಿ ಗೊತ್ತಿದ್ದ ಆ ದಲ್ಲಾಳಿ ಪ್ರತೀಬಾರಿ,
“ ನಿನ್ನಿಂದ ನಟನೆ ಸಾಧ್ಯವೇ ಇಲ್ಲ ನಸ್ರುದ್ದೀನ್ “
ಎಂದು ಖಡಾ ಖಂಡಿತವಾಗಿ ಹೇಳಿ ನಸ್ರುದ್ದೀನ್ ನನ್ನು ಸಾಗ ಹಾಕುತ್ತಿದ್ದ.
ಆದರೂ ಎದೆಗುಂದದ ನಸ್ರುದ್ದೀನ್ ತನ್ನ ಪ್ರಯತ್ನ ನಿಲ್ಲಿಸಲೇ ಇಲ್ಲ. ಮೇಲಿಂದ ಮೇಲೆ ದಲ್ಲಾಳಿಯ ಮನೆಗೆ ಹೋಗಿ ವಿನಂತಿ ಮಾಡಿಕೊಳ್ಳುತ್ತಿದ್ದ.
ಆಮೇಲೆ ಬಹು ದಿನಗಳ ನಂತರ ಒಂದು ದಿನ, ಮುಲ್ಲಾ
ಬಹಳ ದುಃಖದ ಮುಖ ಭಾವ ಹೊತ್ತು ದಲ್ಲಾಳಿಯ ಮನೆಗೆ ಹೋದ. ನಸ್ರುದ್ದೀನ್ ನ ಚಿಂತಾಕ್ರಾಂತ ಮುಖ ಗಮನಿಸಿದ ದಲ್ಲಾಳಿ ಪ್ರಶ್ನೆ ಮಾಡಿದ,
“ ಯಾಕೆ ನಸ್ರುದ್ದೀನ ಇಷ್ಟು ಚಿಂತೆ? ಏನು ವಿಷಯ?”
ನಸ್ರುದ್ದೀನ ಉತ್ತರಿಸಿದ,
“ ನಾಲ್ಕು ವಾರಗಳ ಮಟ್ಟಿಗೆ ಬೇರೆ ಊರಿಗೆ ಹೋಗುತ್ತಿದ್ದೇನೆ, ನನಗೆ ಯಾವುದಾದರೂ ನಟನೆಗಾಗಿ ಅವಕಾಶಗಳು ಬಂದರೆ ದಯವಿಟ್ಟು ಒಪ್ಪಿಕೊಳ್ಳಬೇಡ”

