ಆಟದಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿ, ಆನಂದಿಸಿ; ಇದು ಮೋಜು. ಆದರೆ ಇದನ್ನು ಹಗುರಾಗಿ ಪರಿಗಣಿಸಿ. ಇದರ ಸಲುವಾಗಿ ಚಿಂತೆ ಮಾಡುವ ಕಾರಣವಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ:ಚಿದಂಬರ ನರೇಂದ್ರ
ಒಂದು ನಿರ್ದಿಷ್ಟ ಸಂದರ್ಭದಲ್ಲಿ ನೀವು ಯಾವ ಪಾತ್ರವನ್ನು ನಿರ್ವಹಿಸಬೇಕೋ ಆ ಪಾತ್ರವನ್ನು ನಿಮ್ಮ ಪೂರ್ಣ ಸಾಮರ್ಥ್ಯದಲ್ಲಿ ನಿಭಾಯಿಸಿ, ಪರಿಪೂರ್ಣತೆಯಲ್ಲಿ. ಆದರೆ ಒಮ್ಮೆ ಮುಗಿಯಿತೆಂದರೆ, ನೀವು ಗೆದ್ದಿರೋ ಅಥವಾ ಸೋತಿರೋ ಎನ್ನುವುದೆಲ್ಲ ಅಪ್ರಸ್ತುತ. ನಂತರ ಆ ಕಡೆ ಹಿಂತಿರುಗಿಯೂ ನೋಡದಂತೆ ಮುಂದೆ ಸಾಗಿ. ನೀವು ಇನ್ನೂ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಬೇಕಿದೆ. ಗೆಲುವು ಮತ್ತು ಸೋಲಿಗೆ ಯಾವ ಮಹತ್ವ ಇಲ್ಲ. ಯಾವುದು ಮುಖ್ಯವೆಂದರೆ ಇದು ಕೇವಲ ಆಟ ಎನ್ನುವ ಅರಿವು.
ಯಾವಾಗ ನಿಮ್ಮ ಇಡೀ ಬದುಕು ಈ ಅರಿವಿನಿಂದ ತುಂಬಿಕೊಳ್ಳುತ್ತದೆಯೋ, ಆಗ ನೀವು ಮುಕ್ತರು, ಆಗ ಯಾವುದೂ ನಿಮ್ಮನ್ನು ಕಟ್ಟಿಹಾಕುವುದಿಲ್ಲ, ಯಾವುದೂ ನಿಮ್ಮನ್ನು ಬಂಧಿಸುವುದಿಲ್ಲ. ನೀವು ಮುಖವಾಡಗಳನ್ನು ಬಳಸುತ್ತೀರಿ ಆದರೆ, ಅವು ನಿಮ್ಮ ನಿಜ ಮುಖವಲ್ಲ ಎನ್ನುವುದು ನಿಮಗೆ ಗೊತ್ತು. ಈ ಮುಖವಾಡವನ್ನು ನೀವು ತೆಗೆಯಬಹುದು ಏಕೆಂದರೆ ನಿಮಗೆ ಗೊತ್ತು ಈ ಮುಖವಾಡ ಯಾಕಾಗಿಯೆಂದು. ನಿಮಗೆ ನಿಮ್ಮ ಓರಿಜಿನಲ್ ಮುಖವೂ ಗೊತ್ತು. ಯಾರಿಗೆ ಬದುಕು ಆಟ ಎನ್ನುವುದು ಗೊತ್ತೋ ಅವರಿಗೆ ನೈಜ ಮುಖದ ಪರಿಚಯವೂ ಉಂಟು. ನೈಜ ಮುಖ ಗೊತ್ತಾಗುವುದೆಂದರೆ, ಗೊತ್ತಾಗಬೇಕಾದದ್ದನ್ನ ಗೊತ್ತು ಮಾಡಿಕೊಳ್ಳುವುದು.
ನಸ್ರುದ್ದೀನ್, ಪಾದ್ರಿಯೊಬ್ಬರ ಮನೆ ಬಾಗಿಲು ತಟ್ಟಿದ.
“ ಫಾದರ್, ಮನೆಯಲ್ಲಿದೀರಾ ? ಬ್ಯುಸಿ ನಾ ? “
“ ಹಾಗೇನಿಲ್ಲ ಒಳಗೆ ಬಾ ನಸ್ರುದ್ದೀನ್, ಇವತ್ತು ಚರ್ಚ್ ಲ್ಲಿ ಹೇಳಬೇಕಾಗಿರುವ ಮಾತುಗಳನ್ನ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ”
“ ಓಹ್, ನೀವು ಪ್ರ್ಯಾಕ್ಚೀಸ್ ಮಾಡಿ ಉಪದೇಶ ಹೇಳುತ್ತೀರಿ, ಆದರೆ ನಾವು ನಿಮ್ಮ ಉಪದೇಶ ಕೇಳಿ ಪ್ರ್ಯಾಕ್ಟೀಸ್ ಮಾಡಬೇಕು ಅಲ್ವಾ ? “
ನಸ್ರುದ್ದೀನ್, ತಮಾಷೆ ಮಾಡಿದ.

