ಪ್ರೇಮ, ನಿಮ್ಮ ಮತ್ತು ಇನ್ನೊಬ್ಬರ ನಡುವಿನ ಸಂಬಂಧ. ಧ್ಯಾನ, ನಿಮ್ಮೊಡನೆಯ ನಿಮ್ಮ ಸಂಬಂಧ. ಪ್ರೇಮ ಬಹಿರ್ಮುಖವಾದದ್ದು ಮತ್ತು ಧ್ಯಾನ ಅಂತರ್ಮುಖ. ಪ್ರೇಮ, ಹಂಚಿಕೊಳ್ಳುವ ಸಂಗತಿ. ಆದರೆ ಪ್ರೇಮ ನಿಮ್ಮ ಬಳಿ ಇಲ್ಲದಿರುವಾಗ ಹೇಗೆ ಹಂಚಿಕೊಳ್ಳುತ್ತೀರಿ ಅದನ್ನ? ಏನನ್ನು ಹಂಚಿಕೊಳ್ಳುತ್ತೀರಿ? ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ಜನರಲ್ಲಿ ಕೋಪ ಇದೆ, ಅಸೂಯೆ ಇದೆ, ದ್ವೇಷ ಇದೆ ಹಾಗಾಗಿ ಅವರು ಪ್ರೇಮದ ಹೆಸರನಲ್ಲಿ ತಮ್ಮಲ್ಲಿರುವ ಈ ಸಂಗತಿಗಳನ್ನು ಹಂಚುತ್ತಾರೆ. ಒಮ್ಮೆ ಮಧುಚಂದ್ರದ ಸಮಯ ಮುಗಿಯುತ್ತಿದ್ದಂತೆ, ನಿಮ್ಮ ಮುಖವಾಡ ಕಳಚಿ ಬೀಳುತ್ತದೆ ಮತ್ತು ನಿಮ್ಮ ಸತ್ಯದ ಅನಾವರಣವಾಗುತ್ತದೆ. ಆಗ ನೀವು ಏನು ತಾನೇ ಹಂಚುತ್ತೀರಿ? ನಿಮ್ಮ ಬಳಿ ಇರುವದನ್ನ ಮಾತ್ರ. ನಿಮ್ಮಲ್ಲಿ ಕೋಪವಿದ್ದರೆ ಕೋಪವನ್ನ, possessiveness ಇದ್ದರೆ ಪೊಸೆಸಿಸಿವ್ ನೆಸ್ ನ. ಆಗ ಅಲ್ಲೊಂದು ಬಿಕ್ಕಟ್ಟು, ಸಂಘರ್ಷ ಮತ್ತು ಜಗಳ, ಮತ್ತು ಒಬ್ಬರು ಇನ್ನೊಬ್ಬರನ್ನು ಡಾಮಿನೇಟ್ ಮಾಡುವ ಪ್ರಯತ್ನ.
ಧ್ಯಾನ, ನಿಮಗೆ ಹಂಚಬಹುದಾದ್ದನ್ನ ಪ್ರದಾನ ಮಾಡುತ್ತದೆ, ಧ್ಯಾನ ನಿಮಗೆ ಕ್ವಾಲಿಟಿಯನ್ನು ಪ್ರದಾನ ಮಾಡುತ್ತದೆ, ನೀವು ಇನ್ನೊಬ್ಬರ ಜೊತೆ ರಿಲೇಟ್ ಆದಾಗ ಪ್ರೇಮವಾಗಬಲ್ಲಂಥ ಎನರ್ಜಿಯನ್ನು ನಿಮಗೆ ಕೊಡುತ್ತದೆ. ಸಾಮಾನ್ಯವಾಗಿ ಇಂಥ ಕ್ವಾಲಿಟಿ ನಿಮ್ಮ ಬಳಿ ಇರುವುದಿಲ್ಲ. ಯಾರ ಬಳಿಯೂ ಇರುವುದಿಲ್ಲ. ಈ ಕ್ವಾಲಿಟಿಯನ್ನು ನೀವು ಬೆಳೆಸಿಕೊಳ್ಳಬೇಕು. ಪ್ರೇಮ ಹುಟ್ಟಿನಿಂದಲೇ ನಿಮ್ಮೊಳಗಿರುವ ಸಂಗತಿಯಲ್ಲ. ಇದು ನೀವು ಬೆಳೆಸಿಕೊಳ್ಳಬೇಕಾದ ಸಂಗತಿ, ಇದು ನೀವು ಆಗಬೇಕಾದ ಸಂಗತಿ. ಇದು ಸಂಘರ್ಷ, ಇದು ಪ್ರಯತ್ನ ಮತ್ತು ಇದು ಒಂದು ಕಲೆ.
ಮತ್ತು ಯಾರಿಗೆ ನೀವು ಪ್ರೇಮವನ್ನು ಹಂಚುತ್ತೀರೋ ಅವರು ನಿಮಗೆ ಯಾವ ರೀತಿಯಲ್ಲೂ ಬದ್ಧರಾಗಬೇಕಿಲ್ಲ. ಬದಲಾಗಿ ನೀವು ಅವರಿಗೆ ನಿಮ್ಮನ್ನು ಹಗುರ ಮಾಡಿಕೊಳ್ಳಲು ಸಹಾಯ ಮಾಡಿದ ಕಾರಣಕ್ಕೆ ಕೃತಜ್ಞರಾಗಿರಬೇಕಿದೆ. ಅವರು ನಿಮ್ಮೊಳಗೆ ತುಂಬಿ ತುಳುಕುತ್ತಿದ್ದ ಭಾರವನ್ನ ಹಂಚಿಕೊಂಡು ನಿಮಗೆ ಸಹಾಯ ಮಾಡಿದ್ದಾರೆ. ಪ್ರೇಮದ ಅರ್ಥಶಾಸ್ತ್ರದ ಪ್ರಕಾರ ಹೆಚ್ಚು ಹೆಚ್ಚು ಪ್ರೇಮವನ್ನ ನೀವು ಹಂಚಿದಾಗ ಹೆಚ್ಚು ಹೆಚ್ಚು ಪ್ರೇಮ ಮತ್ತೆ ನಿಮ್ಮದಾಗುತ್ತದೆ, ಏಕೆಂದರೆ ನಿಮ್ಮ ಮೌನ ಅಸ್ತಿತ್ವದಲ್ಲಿ ನೀವು ಪ್ರೇಮದ ಅಪಾರ ಸಾಗರದ ಜೊತೆ, ಯಾವುದು ಎಲ್ಲ ದಿವ್ಯದ ಮೂಲವೋ ಆ ಅಪರಿಮಿತದ ಜೊತೆ, ನಿಮ್ಮನ್ನ ನೀವು ಜೋಡಿಸಿಕೊಂಡಿದ್ದೀರಿ. ನೀವು ಹಂಚಿಕೊಂಡಷ್ಟು ಪ್ರೇಮ ನಿಮ್ಮನ್ನು ತುಂಬಿಕೊಳ್ಳುತ್ತಲೇ ಹೋಗುತ್ತದೆ.
ಪ್ರೇಮ ಈ ಜಗತ್ತಿನ ಏಕೈಕ ಭರವಸೆ. ಮತ್ತು ನಾವು ಆ ಹೊರಳು ದಾರಿಯನ್ನ ಸಮೀಪಿಸುತ್ತಿದ್ದೇವೆ ; ಪೂರ್ಣ ಯುದ್ಧ ಅಥವಾ ಸಂಪೂರ್ಣ ಪ್ರೇಮ. ಬೇರೆ ಪರ್ಯಾಯವಿಲ್ಲ ನಮಗೆ ಯುದ್ಧ ಮತ್ತು ಪ್ರೇಮದ ನಡುವೆ. ಈ ಎರಡರಲ್ಲಿ ನಾವು ಒಂದನ್ನ ಆಯ್ಕೆ ಮಾಡಿಕೊಳ್ಳಲೇ ಬೇಕು. ಇದು ಮನುಷ್ಯನ ಸಾವು ಬದುಕಿನ ಪ್ರಶ್ನೆ. ಯುದ್ಧ ಎಂದರೆ ಸಾವು, ಪ್ರೇಮ ಎಂದರೆ ಬದುಕು.
ಯಾವಾಗ ನಿಮ್ಮೊಳಗೆ ಉಕ್ಕಿ ಹರಿಯುವಷ್ಟು ಪ್ರೇಮ ಇರುತ್ತದೆಯೋ ಆಗ ಮಾತ್ರ ನೀವು ಅದನ್ನು ಹಂಚಿಕೊಳ್ಳಬಹುದು. ಆದರೆ ಇದು ಸಾಧ್ಯವಾಗುವುದು ನೀವು ನಿಮ್ಮ ಜೊತೆ ರಿಲೇಟ್ ಆದಾಗ ಮಾತ್ರ. ಮತ್ತು ಧ್ಯಾನ ಎಂದರೆ ಬೇರೇನೂ ಅಲ್ಲ, ನಿಮಗೆ ನಿಮ್ಮೊಡನೆ ರಿಲೇಟ್ ಆಗುವುದನ್ನ ಕಲಿಸುವ ಸಂಗತಿ.

