ಒಪ್ಪಿತವಾದ ನೈತಿಕ ಚೌಕಟ್ಟನ್ನು ಹೀಗೆ ಅನುಭವ ಸತ್ಯವಾಗಿ ಗ್ರಹಿಸುವುದೇ, ಅದನ್ನು ಮುಕ್ತವಾಗಿ ಹೇಳುವ ಅವಕಾಶವಿದ್ದುದೇ ವಚನಗಳು ಸಾಧಿಸಿದ ʻಕ್ರಾಂತಿʼ ಅನಿಸುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಇಂದ್ರನೀಲದ ಗಿರಿಯನೇರಿಕೊಂಡು
ಚಂದ್ರಕಾಂತದ ಶಿಲೆಯನಪ್ಪಿಕೊಂಡು
ಕೊಂಬ ಬಾರಿಸುತ್ತ
[ಹರನೆ, ಎನ್ನ ಕುಂಭ ಕುಚದ ಮೇಲೆ ನಿಮ್ಮನೆಂದಪ್ಪಿ] ಎಂದಿಪ್ಪೆನೊ ಶಿವನೆ
ನಿಮ್ಮ ನೆನೆವುತ್ತ ಎಂದಿಪ್ಪೆನೊ
ಅಂಗಭಂಗ ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೆನಯ್ಯಾ
ಚೆನ್ನಮಲ್ಲಿಕಾರ್ಜುನಾ [೭೨]
[ಇಂದ್ರನೀಲದ ಗಿರಿ=ಇಂದ್ರನು ಶಿವವನ್ನು ಪೂಜಿಸಿ ವರ ಪಡೆದ ಸ್ಥಳ, ಅರ್ಜುನನು ಶಿವನೊಡನೆ ಹೋರಾಡಿ ಅಸ್ತ್ರಗಳನ್ನು ಪಡೆದ ಸ್ಥಳ, ಕೆಲವರ ಪ್ರಕಾರ ಈಗ ನೇಪಾಳದಲ್ಲಿರುವ, ಮತ್ತೆ ಕೆಲವರ ಪ್ರಕಾರ ಬದರಿಯ ಸಮೀಪವಿರುವ ಪರ್ವತ; ಚಂದ್ರಕಾಂತಶಿಲೆ=ಚಂದ್ರನ ಬೆಳಕಿನಲ್ಲಿ ನೀರಾಗುವುದೆಂದು ಹೇಳಲಾಗುವ ಕಲ್ಲು, ಚಂದ್ರಕಿರಣಗಳಿಂದ ಆದ ಕಲ್ಲು;]
ಇಂದ್ರನೀಲಪರ್ವತವನ್ನು ಏರಿ, ಚಂದ್ರಕಾಂತ ಶಿಲೆಯನ್ನು ಅಪ್ಪಿ, ಕೊಂಬು ಬಾರಿಸುತ್ತ ಯಾವಾಗ ಇದ್ದೇನು, ನನ್ನ ಮೊಲೆಗಳ ಮೇಲೆ ನಿಮ್ಮನ್ನು ಅಪ್ಪಿಕೊಂಡು ಯಾವಾಗ ಇದ್ದೇನು. ದೇಹಕ್ಕೆ ಆದ ಭಂಗ, ಮನಸಿಗೆ ಆದ ಭಂಗ ಇಲ್ಲವಾಗಿ ಒಂದು ಸಲವಾದರೂ ನಿಮ್ಮನ್ನು ಎಂದು ಕೂಡುವೆ ಚೆನ್ನಮಲ್ಲಿಕಾರ್ಜುನಾ.
ಪೌರಾಣಿಕ ಎಂದೆನ್ನಬಹುದಾದ ರೂಪಕಗಳನ್ನು ಅಕ್ಕಮಹಾದೇವಿಯ ವಚನಗಳಲ್ಲಿ ಬಹಳ ಅಪರೂಪವಾಗಿ ಕಾಣಬಹುದು ಇದು ಅಂಥ ಒಂದು ಉದಾಹರಣೆ. ʻಇಂದ್ರಿಯʼಗಳ ಒಡೆಯನಾದ ಇಂದ್ರನ ಪರ್ವತವನ್ನು ಏರುವ ಶ್ರಮವನ್ನು ಬಯಕೆಯ ಕಾರಣಕ್ಕೆ ಹುಟ್ಟುವ ಮೈಯ ಕಾವು; ಚಂದ್ರಕಿರಣಗಳು ಘನಗೊಂಡು ಶಿಲೆಯಾದದ್ದು ಚಂದ್ರನ ಬೆಳಕಿನಲ್ಲಿ ಕರಗಿ ಹರಿಯುವುದೆಂದು ಹೇಳಲಾಗುವ ಕಲ್ಲನ್ನು ಅಪ್ಪಿ ಮೈಯ ಕಾವನ್ನು ತಂಪು ಮಾಡಿಕೊಳ್ಳುವ ಬಯಕೆ; ಛಿದ್ರಗೊಂಡ ಮೈ, ಛಿದ್ರಗೊಂಡ ಮನಸ್ಸು ಇದ್ದರೂ ನಿಮ್ಮನ್ನು ಒಂದು ಬಾರಿ ಕೂಡಬೇಕೆಂಬ ಆಸೆ ಇವು ಕೇವಲ ದೇಹದ ಆಸೆಯ ಪೂರೈಕೆಯನ್ನು ಮಾತ್ರವಲ್ಲ, ದೇವರೊಡನೆ ಒಂದಾಗುವ ಬಯಕೆಯ ಚಿತ್ರಣವಾಗಿಯೂ ಗಮನ ಸೆಳೆಯುತ್ತದೆ. ಕಂಸದೊಳಗೆ ಇರುವ ಕುಂಭಕುಚದ ಮೇಲೆ ಅಪ್ಪ್ಪಿಕೊಳ್ಳುವ ಅನ್ನುವ ನುಡಿಗಟ್ಟು ಅಕ್ಕನ ವಚನಗಳ ಕೆಲವು ಹಸ್ತಪ್ರತಿಗಳಲ್ಲಿವೆ. ಅದನ್ನು ಆಧುನಿಕ ಸಂಪಾದಕರು ಪಾಠಾಂತರವೆಂದು ಅಡಿಟಿಪ್ಪಣಿಯಾಗಿ ನೀಡುತ್ತಾರೆ. ಕೊಂಬ ಬಾರಿಸುತ್ತ ಅನ್ನುವ ಚಿತ್ರ ಅಲ್ಲಮನ ವಚನವನ್ನು ನೆನಪು ಮಾಡುತ್ತದೆ. ʼಆದಿ ಅನಾದಿಗಳಿಲ್ಲದಂದಿನ ಕೂಗು;ʼ ಎಂದು ಆರಂಭವಾಗುವ ಅಲ್ಲಮ ವಚನ ನೋಡಿ [೨.೮೭೭]. ಝೆನ್ ಗುರುಗಳು ನಿರ್ವಾಣದ ಅನುಭವ ಪಡೆದ ಕ್ಷಣ ಜೋರಾಗಿ ಕೂಗುವ ವರ್ಣೆಗಳಿವೆ. ಅಕ್ಕನ ಈ ವಚನವು ತಾನು ಇಷ್ಟದೈವದೊಡನೆ ಒಂದಾದ ಅನುಭವದಲ್ಲಿ ಮೈ ಮರೆತು ತೂರ್ಯಧ್ವನಿಯಲ್ಲಿ ಕೂಗುವುದನ್ನು ಕಲ್ಪಿಸಿಕೊಳ್ಳುವಂತೆ ಇದೆ. ಈ ವಚನದ ಇನ್ನೊಂದು ಮಗ್ಗುಲ ಚಿತ್ರವನ್ನು. ಮುಪ್ಪಿನ ಷಡಕ್ಷರಿಯ ʻಒಲಿದ ಲಲನೆಯನಗಲುವುದುʼ ಎಂದು ಆರಂಭವಾಗುವ “ನರರಿಗೆಂತಹುದು” ಎಂಬ ಹೆಸರಿನ ಕಾಣಬಹುದು. ಅನುಭಾವಕ್ಕೆ ನೀತಿಯ ಹಂಗಿಲ್ಲ, ಧರ್ಮಕ್ಕೆ ಇದೆ. ಧರ್ಮವು ಆಯಾ ಕಾಲದ ಒಪ್ಪಿತ ನೀತಿಗೆ ಬದ್ಧವಾಗಿ ತತ್ವ ಪ್ರತಿಪಾದನೆ ಮಾಡುತ್ತದೆ.
ಆದರೆ ನನ್ನನ್ನು ಮೀರಿ ನಿನ್ನೊಡನೆ ಒಂದಾಗಿ ಚೀರುವುದು ಇನ್ನೂ ಆಗಬೇಕಾದ ಅನುಭವ, ಎಂದು ಆಗುತ್ತದೋ ಅನ್ನುವ ಹಂಬಲ ಈ ವಚನದಲ್ಲಿದೆ.

