ಭೂಮಿ ಅವಿಭಜಿತ. ಭಾರತ, ಪಾಕಿಸ್ತಾನ, ಇಂಗ್ಲಂಡ್ ಮುಂತಾದ ದೇಶಗಳು ಇರುವುದು ಕೇವಲ ನಕಾಶೆಯ ಮೇಲೆ, ಮತ್ತು ಈ ನಕಾಶೆಗಳನ್ನು ಸೃಷ್ಟಿ ಮಾಡಿರುವವರು ಅಧಿಕಾರದ ಹಪಹಪಿಯ ಹುಚ್ಚು ರಾಜಕಾರಣಿಗಳು. ಈ ಇಡೀ ಭೂಮಿ ನಿಮ್ಮದು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವ ನಿರ್ದಿಷ್ಟ ಸಂಗತಿಯೊಂದಿಗೆ ಗುರುತಿಸಿಕೊಳ್ಳುವ ಅವಶ್ಯಕತೆಯಿಲ್ಲ. ಯಾಕೆ ಸೀಮಿತ ಭೂ ಭಾಗಗಳೊಂದಿಗೆ ಗುರುತಿಸಿಕೊಳ್ಳಬೇಕು? ಯಾಕೆ ರಾಜಕಾರಣದ ಬೇಕು ಬೇಡಗಳಿಗೆ ಸೀಮಿತವಾಗಬೇಕು? ಇಡೀ ಭೂಮಿಯ ಪರಂಪರೆಯನ್ನು ಕ್ಲೇಮ್ ಮಾಡಿ, ಇದು ನಿಮ್ಮ ಭೂಮಿ. ರಾಷ್ಟ್ರೀಯ ಮನುಷ್ಯನಾಗುವ ಬದಲು ವಿಶ್ವ ಮಾನವರಾಗಿ. ಭಾರತ, ಇಂಗ್ಲಂಡ್ ಇವುಗಳನ್ನೆಲ್ಲ ಮರೆತು, ಇಡೀ ವಿಶ್ವದ ಬಗ್ಗೆ ಯೋಚನೆ ಮಾಡಿ. ಪ್ರತಿಯೊಬ್ಬರನ್ನೂ ನಿಮ್ಮ ಬಾಂಧವರು ಎಂದು ಗುರುತಿಸಿ; ಅವರು ನಿಮ್ಮ ಬಾಂಧವರೇ!
ನಾನು ಭಾರತೀಯ ಎಂದು ನೀವು ಗುರುತಿಸಿಕೊಳ್ಳುವಾಗ, ನೀವು ಇನ್ನೊಂದು ದೇಶದ ವಿರುದ್ಧವಾಗಿರುತ್ತೀರಿ. ಹಾಗಾಗಲೇಬೇಕು ಇಲ್ಲವಾದರೆ, ನಿಮ್ಮ ಭಾರತೀಯತೆಯನ್ನು ಹೇಗೆ ಡಿಫೈನ್ ಮಾಡುತ್ತೀರಿ? ನೀವು ಚೈನಾದ ವಿರುದ್ಧ ಇದ್ದೀರಿ, ಪಾಕಿಸ್ತಾನದ ವಿರುದ್ಧ ಇದ್ದೀರಿ, ಅದರ ವಿರುದ್ಧ ಇದ್ದೀರಿ, ಇದರ ವಿರುದ್ಧ ಇದ್ದೀರಿ. ಎಲ್ಲ ಪರ ಗುರುತಿಸಿಕೊಳ್ಳುವಿಕೆ ಮೂಲಭೂತವಾಗಿ ಯಾವುದೋ ಒಂದರ ವಿರುದ್ಧ ಇದ್ದೇ ಇರುತ್ತದೆ. ನೀವು ಯಾವುದೋ ಒಂದರ ಪರ ಇದ್ದೀರಿ ಎಂದರೆ ಸಹಜವಾಗಿ ಯಾವುದೋ ಇನ್ನೊಂದರ ವಿರುದ್ಧ ಇದ್ದೇ ಇರುತ್ತೀರಿ. ಪರ-ವಿರೋಧಗಳ ಹವ್ಯಾಸ ಬಿಟ್ಟು ಸುಮ್ಮನೇ ಇರುವಿಕೆಯ ಬಗ್ಗೆ ಧ್ಯಾನಿಸಿ. ಈ ಪರ- ವಿರೋಧಗಳಿಗಿಂತ ಯೋಚಿಸಲು ಬೇರೆ ಮಹತ್ವದ ಸಂಗತಿಗಳಿವೆ. “ಯಾವ ರೋಗದೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುತ್ತೀರಿ? ಕ್ಷಯ ರೋಗದೊಂದಿಗೋ ಅಥವಾ ಕ್ಯಾನ್ಸರ್ ನೊಂದಿಗೋ ” ಎಂದು ಯಾವತ್ತೂ ನೀವು ಕೇಳುವುದಿಲ್ಲ. ಈ ರಾಷ್ಟ್ರವಾದಿ ಗುರುತಿಸಿಕೊಳ್ಳುವಿಕೆ ಕ್ಷಯರೋಗ ಅಥವಾ ಕ್ಯಾನ್ಸರ್ ನ ಹಾಗೆ.
ಆದರ್ಶ ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಿಲ್ಲ, ಬೇರೆ ಬೇರೆ ಮತಗಳಿಲ್ಲ. ಕೇವಲ ಮನುಷ್ಯನಾಗಿದ್ದರೆ ಸಾಕು, ಒಂದಲ್ಲ ಒಂದು ದಿನ ನೀವು ಇದನ್ನೂ ಮೀರಿ ಮುಂದೆ ಹೋಗುತ್ತೀರಿ, ಆಗ ನೀವು ದೈವಿಕ ಆಗುತ್ತೀರಿ, ಆಗ ಈ ಭೂಮಿ ಕೂಡ ನಿಮಗೆ ಚಿಕ್ಕದಾಗತೊಡಗುತ್ತದೆ, ಆಗ ನೀವು ನಕ್ಷತ್ರಗಳತ್ತ ಕೈಚಾಚುತ್ತೀರಿ, ಆಗ ನೀವು ಇಡೀ ಬ್ರಹ್ಮಾಂಡವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ. ಯಾವಾಗ ನೀವು ಯುನಿವರ್ಸಲ್ ಆಗುತ್ತೀರೋ ಆಗ ಪರಿಪೂರ್ಣರಾಗುತ್ತೀರಿ.

