ನೀವು ಏನೋ ಮಾಡುತ್ತಿದ್ದೀರಿ – ಯಾವುದೋ ಶಿಲ್ಪ ಕೆತ್ತುತ್ತಿದ್ದೀರಿ, ಏನೋ ಪೇಂಟ್ ಮಾಡುತ್ತಿದ್ದೀರಿ, ಅಥವಾ ಒಂದು ಪದ್ಯ ಬರೆಯುತ್ತಿದ್ದೀರಿ – ಮಾಡುತ್ತಿರುವ ಕೆಲಸದಲ್ಲಿ ನೀವು ಕಳೆದು ಹೋಗಿಬಿಟ್ಟಿದ್ದೀರಿ. ಅದು ನಿಮ್ಮ ಖುಶಿ, ಅದು ನಿಮ್ಮ ಧ್ಯಾನ. ಆದರೆ ನೀವು ಮಾಡುತ್ತಿರುವ ಕೆಲಸ ಮುಗಿದಾಗ ಮತ್ತೆ ನೀವು ಮೈಂಡ್ ಗೆ ವಾಪಸ್ಸಾಗುತ್ತೀರಿ ಮತ್ತು ಮೈಂಡ್ ಪ್ರಶ್ನೆ ಕೇಳಲು ಶುರು ಮಾಡುತ್ತದೆ, “what is the point?” ~ ಓಶೋ ರಜನೀಶ್; ಕನ್ನಡಕ್ಕೆ; ಚಿದಂಬರ ನರೇಂದ್ರ
ನೋಡಿದರೆ ಕಾಣಿಸದು
ಕೇಳಿದರೆ ಕೇಳಿಸದು
ಮುಟ್ಟಿದರೆ ನಿಲುಕದು
ಇನ್ನೂ ಮುಂದೆ ವರ್ಣಿಸುವುದು
ಆಗದ ಮಾತು
ಅಂತೆಯೇ ಇದು ಮೂರಲ್ಲ, ಒಂದು.
ತಲೆ ಮೇಲೆ ಬೆಳಕಿಲ್ಲ
ಕಾಲ ಕೆಳಗೆ ಕತ್ತಲೆಯಿಲ್ಲ
ಆರಂಭ, ಕೊನೆ, ಹೆಸರು ಒಂದೂ ಇಲ್ಲ.
ರೂಹಿಲ್ಲದ ರೂಹು
ಪ್ರತಿಬಂಬವಿಲ್ಲದ ಬಿಂಬ
ಕಾಣಿಸದಷ್ಟು ಸೂಕ್ಷ್ಮ, ಕಾಣದಷ್ಟು ಅಪಾರ
ಶುರುವಿನ ಗೆರೆಯಿಲ್ಲ, ಮುಟ್ಟುವ ದಾರವಿಲ್ಲ
ರುಚಿಯ ಬಲ್ಲವರಿಲ್ಲ, ರುಚಿ ಆದವರು ಸಾಕಷ್ಟು
ದಾರಿಯಲ್ಲಿ ಹೆಜ್ಜೆ ಹಾಕುತ್ತ ಹೋದಂತೆ
ಜೊತೆಯಾಗುತ್ತ ಹೋಗುತ್ತದೆ ‘ಸಧ್ಯ’
~ ಲಾವೋತ್ಸೇ
ಗಿಬ್ಬನ್ ಬಗ್ಗೆ ಒಂದು ವಿಷಯ ಹೇಳಲಾಗುತ್ತದೆ. ಅವನು ತನ್ನ ಆಚಾರ್ಯ ಕೃತಿ History of World ಬರೆದು ಮುಗಿಸಿದಾಗ ಬಿಕ್ಕಿ ಬಿಕ್ಕಿ ಅತ್ತುಬಿಟ್ಟನಂತೆ. ಅದು ಅವನಿಗೆ ಸುಮಾರು ಮೂವತ್ತು ವರ್ಷಗಳ ಮಹಾ ಕಾರ್ಯ ; ರಾತ್ರಿ ಹಗಲು, ವರ್ಷಾನುಗಟ್ಟಲೆ ಅವನು ತನ್ನನ್ನು ತಾನು ಈ ಕೆಲಸದಲ್ಲಿ ತೊಡಗಿಸಿಕೊಂಡ. ಅವನು ಪ್ರತಿದಿನ ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿ, ಇಪ್ಪತ್ತು ಗಂಟೆ ಕೆಲಸ ಮಾಡುತ್ತಿದ್ದ. ಎಲ್ಲ ಕೆಲಸ ಮುಗಿದಾಗ ಅವನು ಅತ್ತುಬಿಟ್ಟ. ಗಿಬ್ಬನ್ ನ ವರ್ತನೆಯನ್ನು ಕಂಡು ಅವನ ಹೆಂಡತಿ ಮತ್ತು ಶಿಷ್ಯರಿಗೆ ಸಿಕ್ಕಾಪಟ್ಟೆ ಆಶ್ಚರ್ಯವಾಯಿತು.
“ಯಾಕೆ ಅಳುತ್ತಿದ್ದೀಯ?” ಅವರು ಪ್ರಶ್ನೆ ಮಾಡಿದರು. ಒಂದು ಮಹಾ ಕೆಲಸ ಮುಗಿದದ್ದು ಎಲ್ಲರಿಗೂ ಸಂತೋಷವನ್ನು ತಂದಿತ್ತು. ಗಿಬ್ಬನ್ ಇಡೀ ಜಗತ್ತಿನ ಇತಿಹಾಸವನ್ನು ದಾಖಲು ಮಾಡಿದ್ದ. ಆದರೆ ಅವನು ಅಳುತ್ತಿದ್ದ, “ಈಗ ಏನು ಮಾಡಲಿ ನಾನು, I am finished!”. ಮುಂದೆ ಮೂರೇ ವರ್ಷಗಳಲ್ಲಿ ಅವನು ತೀರಿ ಹೋದ. ಅವನು ಮಾಡುವ ಕೆಲಸ ಬೇರೆ ಏನೂ ಇರಲಿಲ್ಲ. ಅವನು ಚಿರ ಯುವಕ, ಆದರೆ ಕೆಲಸ ಮುಗಿದ ದಿನವೇ ಅವನು ಮುದುಕನಾದ. ಪ್ರತಿಯೊಬ್ಬ ಕ್ರಿಯಾಶೀಲ ಸೃಷ್ಟಿಕರ್ತ ವ್ಯಕ್ತಿಯ ಜೊತೆ ಹೀಗಾಗುತ್ತದೆ. ಒಬ್ಬ ಪೇಂಟರ್ ಎಷ್ಟು ಆಳವಾಗಿ ತನ್ನ ಕೆಲಸದಲ್ಲಿ ಮುಳುಗಿರುತ್ತಾನೆಂದರೆ, ಕೆಲಸ ಮುಗಿದ ಕೂಡಲೇ ಅವನ ಮುಂದೆ ಪ್ರಶ್ನೆ ಎದುರಾಗುತ್ತದೆ, “Now what?, Why did I do it?” ಪೇಂಟಿಂಗ್ ನ ಖುಶಿ ಇರುವುದು ಪೇಂಟಿಂಗ್ ಮಾಡುವುದರಲ್ಲಿಯೇ ಹೊರತು ಅದನ್ನು ಮಾಡಿ ಮುಗಿಸುವುದರಲ್ಲಿ ಅಲ್ಲ ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ದೊಡ್ಡ ಅರಿವು ಬೇಕಾಗುತ್ತದೆ. ಇಲ್ಲಿ ಫಲಿತಾಂಶ ಎನ್ನುವುದು ಇಲ್ಲ – ಇಲ್ಲಿ ಗುರಿ ಮತ್ತು ದಾರಿ ಬೇರೆ ಬೇರೆ ಅಲ್ಲ.
ನೀವು ಏನನ್ನಾದರೂ ಆನಂದಿಸುತ್ತಿದ್ದೀರಾದರೆ ಅದು ಮಾತ್ರ ಮುಖ್ಯ; ಬೇರೆ ಯಾವುದನ್ನೂ ಕೇಳಬೇಡಿ. ಇನ್ನೇನು ಹೆಚ್ಚು ಬೇಕು ನಿಮಗೆ? ಗುರಿ ಸಾಧನೆ, ಆ ದಾರಿಯ ಅನುಭವದಲ್ಲಿಯೇ ಇದೆ. ನೀವು ಅದರ lಮೂಲಕವಾಗಿಯೇ ಬೆಳೆದಿರುವಿರಿ ; ಇದೇ ಗುರಿ ಸಾಧನೆ. ನೀವು ಅದರ ಮೂಲಕ ಇನ್ನಷ್ಟು ಆಳವಾಗಿದ್ದೀರಿ ; ಇದೇ ಗುರಿ ಸಾಧನೆ. ನೀವು ನಿಮ್ಮ ಇರುವಿಕೆಯ ಕೇಂದ್ರವನ್ನು ಬಂದು ತಲುಪಿದ್ದೀರಿ; ಇದೇ ಗುರಿ ಸಾಧನೆ. ನಿಮಗೆ ಅರಿವು ಸಾಧ್ಯವಾಗಿರುವಾಗ, pointlessness ನ ಫೀಲಿಂಗ್ ಮಾಯವಾಗಿಬಿಡುತ್ತದೆ.
ಒಂದು ದಿನ ಝೆನ್ ಮಾಸ್ಟರ್, ತನ್ನ ಐವರು ಶಿಷ್ಯರು ದಾರಿಯಲ್ಲಿ ಸೈಕಲ್ ಮೇಲೆ ಬರುತ್ತಿರುವುದನ್ನ ಗಮನಿಸಿದ. ಅವರು ಸೈಕಲ್ ನಿಂದ ಇಳಿದೊಡನೆ ನೇರವಾಗಿ ಅವರ ಹತ್ತಿರ ಹೋಗಿ ಪ್ರಶ್ನೆ ಮಾಡಿದ. “ ನೀವು ಯಾಕೆ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದೀರಿ? “
ಮೊದಲ ಶಿಷ್ಯ ಉತ್ತರಿಸಿದ. “ ಆಲೂಗಡ್ಡೆ ಮೂಟೆ ಬೆನ್ನ ಮೇಲೆ ಹೊತ್ತು ತರುವುದು ಕಷ್ಟ ಮಾಸ್ಟರ್ ಅದಕ್ಕೇ ಸೈಕಲ್ ಉಪಯೋಗ ಮಾಡುತ್ತಿದ್ದೀನಿ”
“ ಜಾಣ ನೀನು” ಮಾಸ್ಟರ್ ಉತ್ತರಿಸಿದರು. “ವಯಸ್ಸಾದ ಮೇಲೆ ನೀನು, ನನ್ನ ಹಾಗೆ ಬೆನ್ನು ಬಾಗಿಸಿಕೊಂಡು ಓಡಾಡಬೇಕಿಲ್ಲ”
ಎರಡನೇಯ ಶಿಷ್ಯ ಉತ್ತರಿಸಿದ “ ದಾರಿ ಬದಿಯ ಗಿಡ ಮರಗಳು, ಹೊಲ ಗದ್ದೆಗಳನ್ನು ನೋಡುವುದೆಂದರೆ ನನಗೆ ಖುಶಿ ಮಾಸ್ಟರ್, ಅದಕ್ಕೇ ಸೈಕಲ್ ಹತ್ತಿ ವಿಹಾರಕ್ಕೆ ಹೋಗಿದ್ದೆ”
“ ಒಳ್ಳೆಯ ವಿಷಯ, ನಿನಗೆ ಒಳ್ಳೆಯ ಕಣ್ಣಗಳಿವೆ, ತೆರೆದ ಕಣ್ಣುಗಳಿಂದ ಜಗತ್ತನ್ನ ಗಮನಿಸುತ್ತಿದ್ದೀಯಾ” ಮಾಸ್ಟರ್ ಉತ್ತರಿಸಿದರು.
ಮೂರನೇಯ ಶಿಷ್ಯ ಉತ್ತರಿಸಿದ “ ಸೈಕಲ್ ನ ಪೆಡಲ್ ತುಳಿಯುವಾಗಲೆಲ್ಲ ನಾನು ಮಂತ್ರ ಪಠಣ ಮಾಡುತ್ತೇನೆ ಮಾಸ್ಟರ್, ಸೈಕಲ್ ತುಳಿಯುವುದು ನನಗೆ ಮನಸ್ಸನ್ನು ಕೇಂದ್ರಿಕರಿಸುವ ಒಂದು ಸಾಧನ “
“ ಹೌದು, ನಿನ್ನ ಮನಸ್ಸು ಸೈಕಲ್ ನ ಗಾಲಿಯಂತೆ ಸರಾಗವಾಗಿ ಉರುಳುತ್ತದೆ” ಮಾಸ್ಟರ್ ಉತ್ತರಿಸಿದರು.
ನಾಲ್ಕನೇಯ ಶಿಷ್ಯ ಉತ್ತರಿಸಿದ “ ಸೈಕಲ್ ತುಳಿಯುವಾಗ ನಾನು ಸುತ್ತ ಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಒಂದಾಗಿರುತ್ತೇನೆ ಮಾಸ್ಟರ್” ಈ ಉತ್ತರ ಕೇಳಿ ಮಾಸ್ಚರ್ ಗೆ ಖುಶಿಯಾಯಿತು “ ನೀನು ಯಾರೀಗೂ ಕೇಡಾಗದ ಸುವರ್ಣ ಮಾರ್ಗದಲ್ಲಿದ್ದೀಯ” ಮಾಸ್ಟರ್ ಉತ್ತರಿಸಿದರು.
“ ನನಗೆ ಸೈಕಲ್ ಸವಾರಿ ಇಷ್ಟ. ನಾನು ಸೈಕಲ್ ಸವಾರಿ ಮಾಡೋದು ಸೈಕಲ್ ಸವಾರಿ ಮಾಡಲಿಕ್ಕೆ ಮಾಸ್ಟರ್ “ ಐದನೇಯ ಶಿಷ್ಯ ಉತ್ತರಿಸಿದ.
ತಕ್ಷಣ ಮಾಸ್ಟರ್ ಐದನೇಯ ಶಿಷ್ಯನ ಕಾಲ ಬಳಿ ಕುಳಿತುಕೊಂಡು ಕೇಳಿಕೊಂಡರು “ ದಯಮಾಡಿ ನನ್ನನ್ನು ಶಿಷ್ಯನಾಗಿ ಸ್ವೀಕರಿಸು.

