ನಿಮ್ಮ ಬದುಕಿಗೆ ಮತ್ತು ಜಗತ್ತಿಗೆ ನೀವೇ ಕಾರಣರು ಎಂದು ಈ ಕ್ಷಣದಿಂದಲೇ ಯೋಚನೆ ಮಾಡಲು ಶುರು ಮಾಡಿ. ಅನ್ವೇಷಕ ( seeker) ಎನ್ನುವುದರ ನಿಜವಾದ ಅರ್ಥ ಇದು : ತನ್ನ ಇರುವಿಕೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊರುವದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಷ್ಟಗಳಿಗೆ ಯಾವ ಹೊರಗಿನ ಕಾರಣವೂ ಇಲ್ಲ ; ಇರುವ ಕಾರಣಗಳೆಲ್ಲವೂ ಒಳಗಿನವೇ. ಆದರೆ ನೀವು ಈ ಜವಾಬ್ದಾರಿಯನ್ನೆಲ್ಲ ಹೊರಗಿನ ಕಾರಣಗಳ ಮೇಲೆ ಹಾಕುತ್ತ ಹೋಗುತ್ತೀರಿ, ಇವು ಕೇವಲ ನೆಪಗಳು ಮಾತ್ರ.
ಖಂಡಿತ, ಕಷ್ಟಗಳನ್ನು ಉದ್ದೀಪನೆ ( trigger ) ಮಾಡುವವು ಹೊರಗಿನ ಕಾರಣಗಳು , ಆದರೆ ಅವು ಕಷ್ಟಗಳ ಸೃಷ್ಟಿಗೆ ಕಾರಣಗಳಲ್ಲ. ಯಾರಾದರೂ ನಿಮಗೆ ಅಪಮಾನ ಮಾಡಿದಾಗ, ಅಪಮಾನ ಹೊರಗಿನಿಂದ ಬಂತು ನಿಜ ಆದರೆ ಕೋಪ ಇರುವುದು ನಿಮ್ಮೊಳಗೆ. ಕೋಪದ ಹುಟ್ಟಿಗೆ ಈ ಅಪಮಾನ ಕಾರಣವಲ್ಲ, ಇದು ಅಪಮಾನದ ಪರಿಣಾಮ ಅಲ್ಲ. ನಿಮ್ಮೊಳಗೆ ಮೊದಲು ಈ ಕೋಪದ ಎನರ್ಜಿ ಇರದೇ ಹೋಗಿದ್ದರೆ ಆ ಅಪಮಾನಕ್ಕೆ ಏನನ್ನೂ ಹುಟ್ಟಿಸುವ ಶಕ್ತಿ ಇರುತ್ತಿರಲಿಲ್ಲ. ಅದು ಸುಮ್ಮನೇ ಬಂದು ಹೋಗುತ್ತಿತ್ತು, ಮತ್ತು ಅದರಿಂದ ನೀವು ಡಿಸ್ಟರ್ಬ್ ಆಗುತ್ತಿರಲಿಲ್ಲ.
ಕಾರಣಗಳು, ಮಾನವ ಪ್ರಜ್ಞೆಯ ಹೊರಗೆ ಇರುವುದು ಸಾಧ್ಯವಿಲ್ಲ; ಕಾರಣಗಳು ನಿಮ್ಮೊಳಗೆ ಇವೆ. ನಿಮ್ಮ ಬದುಕಿಗೆ ನೀವು ಕಾರಣರು, ಮತ್ತು ಇದನ್ನು ಅರ್ಥ ಮಾಡಿಕೊಳ್ಳುವುದೆಂದರೆ, ಅತ್ಯಂತ ಮೂಲಭೂತ ಸತ್ಯಗಳನ್ನು ಅರ್ಥ ಮಾಡಿಕೊಳ್ಳುವುದು. ಇದನ್ನು ಅರ್ಥ ಮಾಡಿಕೊಳ್ಳುವುದೆಂದರೆ, ಬದಲಾವಣೆಯ ಪ್ರಯಾಣವನ್ನು ಶುರು ಮಾಡಿದಂತೆ.
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.
“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “
ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.
ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?
ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?
ಶಿಷ್ಯ : ಅಯ್ಯೋ ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.
ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು?
ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.

