ಕಷ್ಟಗಳು ( Misery ): ಓಶೋ 365 #Day 179



ಪ್ರಕೃತಿಗೆ ಎಲ್ಲರೂ ಚಕ್ರವರ್ತಿಗಳಾಗಬೇಕೆಂಬ ಆಶಯ. ಪ್ರಕೃತಿ ಸೃಷ್ಟಿಸುವುದು ಕೇವಲ ರಾಜ, ರಾಣಿಯರನ್ನು ಮಾತ್ರ, ಆದರೆ ಅದು ನಮಗೆ ಒಪ್ಪಿತವಲ್ಲ ; ಸತ್ಯದ ತಲೆ ಮೇಲೆ ಹೊಡೆಯುವಷ್ಟು ಸುಂದರ ಆಶಯ ಇದು ನಮಗೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಸಣ್ಣ ಮನೆಯಲ್ಲಿ
ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.

ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ  ಹಾಡು, ಕುಣಿತ
ಮತ್ತು ಕುಡಿತ.

ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.

“ಈ ಮೋಜು
ಮುಂದುವರೆಸಿದರೆ
ಮನೆ ಬಿಟ್ಟು ಹೋಗುತ್ತೇವೆ ನೋಡು.”

– ಹಾಫಿಜ್

ಆನಂದ ಮಾತ್ರ, ನೀವು ಸತ್ಯಕ್ಕೆ ನೀವು ಹತ್ತಿರವೋ ಇಲ್ಲವೋ ಎನ್ನುವುದನ್ನ ನಿರ್ಧರಿಸುವ ಮಾನದಂಡ. ನೀವು ಸತ್ಯಕ್ಕೆ ಹತ್ತಿರವಾದಷ್ಟು ಹೆಚ್ಚು ಆನಂದವನ್ನು ಅನುಭವಿಸುತ್ತೀರಿ; ಸತ್ಯದಿಂದ ದೂರವಾದಷ್ಚು ಕಷ್ಟಗಳಿಗೆ ಹತ್ತಿರವಾಗುತ್ತ ಹೋಗುತ್ತೀರಿ. ಕಷ್ಟ ಎನ್ನುವುದು ಸತ್ಯದಿಂದ ನೀವು ಕಾಯ್ದುಕೊಂಡಿರುವ ದೂರವಲ್ಲದೇ ಬೇರೇನೂ ಅಲ್ಲ ; ಆನಂದ ಎನ್ನುವುದು ಸತ್ಯದ ಸಾಮಿಪ್ಯ, ಆತ್ಮೀಯತೆ. ಮತ್ತು ಯಾವಾಗ ನೀವು ಸತ್ಯದೊಂದಿಗೆ ಒಂದಾಗುತ್ತೀರೋ ಆಗ ಅದು ಆತ್ಯಂತಿಕ ಆನಂದ. ಈ ಆನಂದವನ್ನು ನಿಮ್ಮಿಂದ ಕಸಿದುಕೊಳ್ಳುವುದು ಸಾಧ್ಯವಿಲ್ಲ ಏಕೆಂದರೆ, ಸತ್ಯ ಮತ್ತು ನಿಮ್ಮ ನಡುವಿನ ಎಲ್ಲ ದೂರಗಳು ಮಾಯವಾಗಿವೆ.

ಸತ್ಯ, ನಮ್ಮ ಇರುವಿಕೆಯ ಕೇಂದ್ರದಲ್ಲಿ ನೆಲೆಯಾಗಿದೆ, ಆದರೆ ನಾವು ನೆಲೆಯಾಗಿರುವುದು ಪರಿಧಿಯ ಮೇಲೆ. ನಾವು ಅರಮನೆಯ ದ್ವಾರದಲ್ಲಿ ನಿಂತು ಅರಮನೆಯನ್ನು ಪೂರ್ತಿಯಾಗಿ ಮರೆತುಬಿಟ್ಟಿದ್ದೇವೆ. ನಾವು ದ್ವಾರವನ್ನೇ ಅಲಂಕಾರ ಮಾಡಿಕೊಂಡು ಇದನ್ನು ಬಿಟ್ಟರೆ ಬೇರೆ ಏನೂ ಇಲ್ಲ ಎಂದುಕೊಂಡಿದ್ದೇವೆ. ನಾವು ಸ್ವ-ಖಂಡನೆಯ ಭಿಕ್ಷುಕರು.  ಪ್ರಕೃತಿಗೆ ಎಲ್ಲರೂ ಚಕ್ರವರ್ತಿಗಳಾಗಬೇಕೆಂಬ ಆಶಯ. ಪ್ರಕೃತಿ ಸೃಷ್ಟಿಸುವುದು ಕೇವಲ ರಾಜ, ರಾಣಿಯರನ್ನು ಮಾತ್ರ, ಆದರೆ ಅದು ನಮಗೆ ಒಪ್ಪಿತವಲ್ಲ ; ಸತ್ಯದ ತಲೆ ಮೇಲೆ ಹೊಡೆಯುವಷ್ಟು ಸುಂದರ ಆಶಯ ಇದು ನಮಗೆ. ನಾವು ನಮ್ಮ ಕಷ್ಟಗಳ ನಡುವೆಯೇ ಸುಖವಾಗಿದ್ದೇವೆ. ಕಷ್ಟಗಳು ನಮ್ಮ ಅಹಂಗೆ ಕಾರಣವಾಗಿವೆ. ಕಷ್ಟಗಳು ನಮಗೆ ಅಹಂ ದಯಪಾಲಿಸಿದರೆ, ಆನಂದ ಅಹಂನ ನಮ್ಮಿಂದ ದೂರ ಮಾಡುತ್ತದೆ.

ಕಷ್ಟಗಳಿದ್ದರೂ ನಮ್ಮ ಇರುವಿಕೆಯನ್ನು ನಾವು ಕಾಯ್ದುಕೊಳ್ಳಲು ಬಯಸುತ್ತೇವೆ; ನಾವು disappear ಆಗಲು ಇಷ್ಟಪಡುವುದಿಲ್ಲ. ಇದೇ ನಾವು ಆಡುತ್ತಿರುವ ಜೂಜು. Disappear ಆಗದೇ ಆನಂದ ಮತ್ತು ಸತ್ಯ ಸಾಧ್ಯವಿಲ್ಲ.

ಒಬ್ಬ ಝೆನ್ ಸನ್ಯಾಸಿ ಒಂದು ಪುಟ್ಟ ಕನ್ನಡಿಯನ್ನ ಸದಾ ತನ್ನ ಬಳಿ ಇಟ್ಟುಕೊಂಡಿರುತ್ತಿದ್ದ. ಇದನ್ನು ಗಮನಿಸಿದ ದೇವಸ್ಥಾನವೊಂದರ ಪೂಜಾರಿಗೆ ಸನ್ಯಾಸಿಯ ಜ್ಞಾನದ ಬಗ್ಗೆ ಅನುಮಾನ ಉಂಟಾಯಿತು. ಸಾಧಕನಾದವನು ತನ್ನ ಆಂತರ್ಯದ ಚೆಲುವಿನ ಬಗ್ಗೆ ಯೋಚಿಸಬೇಕೇ ಹೊರತು ಬಾಹ್ಯ ಸೌಂದರ್ಯದ ಬಗ್ಗೆ ಅಲ್ಲ, ಇದನ್ನು ಸನ್ಯಾಸಿಗೆ ತಿಳಿಸಿ ಹೇಳಿ ಅವನಲ್ಲಿ ಅರಿವು ಮೂಡಿಸಬೇಕೆಂದೂ, ಅವನ ತಪ್ಪನ್ನ ಮನವರಿಕೆ ಮಾಡಿಕೊಡಬೇಕೆಂದೂ ಪೂಜಾರಿ, ಸನ್ಯಾಸಿಯನ್ನು ಭೇಟಿಯಾಗಿ, ಪ್ರಶ್ನೆ ಮಾಡಿದ.

“ ಯಾಕೆ ನೀನು ಸದಾ ಕನ್ನಡಿಯನ್ನ ಇಟ್ಟುಕೊಂಡಿರುತ್ತೀ? ಝೆನ್ ಸನ್ಯಾಸಿಗೆ ಇದು ಮೂರ್ಖತನವೆಂದು ಗೊತ್ತಿಲ್ಲವೆ? “

ಝೆನ್ ಸನ್ಯಾಸಿ, ತನ್ನ ಜೋಳಿಗೆಯಿಂದ ಕನ್ನಡಿಯನ್ನ ಹೊರತೆಗೆದು, ಪೂಜಾರಿಯತ್ತ ಚಾಚಿದ.

“ಇದು ಸಾಧಾರಣ ಕನ್ನಡಿಯಲ್ಲ, ಮಾಯಾಕನ್ನಡಿ. ನನಗೆ ದುಃಖವಾದಾಗಲೆಲ್ಲ ಈ ಕನ್ನಡಿ ನನಗೆ ಪರಿಹಾರ ಸೂಚಿಸುತ್ತದೆ. ಈ ಕನ್ನಡಿಯನ್ನ ನೋಡಿಕೊಂಡಾಗಲೆಲ್ಲ ನನಗೆ, ನನ್ನ ದುಃಖದ ಕಾರಣ ಮತ್ತು ದುಃಖಕ್ಕೆ ಪರಿಹಾರ ಎರಡೂ ಕಾಣಿಸತೊಡಗುತ್ತವೆ”

ಸನ್ಯಾಸಿಯ ಮಾತಿಗೆ ಪೂಜಾರಿ ಮೂಕನಾದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.