ಪ್ರೀತಿ/ಪ್ರಿಯಕರ ಭಕ್ತ/ದೇವರ ಸಂಬಂಧದ ಅಚ್ಚರಿ ನೋವು ಎರಡೂ ಬೆರೆತ ಬಗೆಯನ್ನು ಈ ವಚನ ಹೇಳುತ್ತಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚಡೆ ಗರಿದೋರದಂತಿರಬೇಕು
ಅಪ್ಪಿದಡೆ ಅಸ್ಥಿಗಳು ನಗ್ಗುನುಸಿಯಾಗಬೇಕು
ಬೆಚ್ಚಡೆ ಬೆಸುಗೆಯರಿಯದಂತಿರಬೇಕು
ಮಚ್ಚು ಒಪ್ಪಿತ್ತು
ಚೆನ್ನಮಲ್ಲಿಕಾರ್ಜುನನ ಸ್ನೇಹ ತಾಯೆ [೩೨೦]
[ಮಚ್ಚು=ಮೆಚ್ಚುಗೆ ತುಂಬಿದ ಪ್ರೀತಿ; ಅಚ್ಚುಗ=ಕ್ಲೇಶ, ಆಶ್ಚರ್ಯ; ಎಚ್ಚು=ಎಸೆ, ಬಾಣಪ್ರಯೋಗ; ಗರಿ=ಬಾಣದ ಹಿಂದಿನ ಹಿಳುಕು, ಗರಿ; ಅಸ್ಥಿ=ಎಲುಬು; ಬೆಚ್ಚಡೆ=(ಬಿಸು ಎಂಬ ಪದದ ಕ್ರಿಯಾಪದ ರೂಪ,) ಬೆಸುಗೆ ಹಾಕಿದರೆ; ಅಱಿಯದಂತೆ=ಕತ್ತರಿಸಿ ಹೋಗದ ಹಾಗೆ]
ಮೆಚ್ಚುಗೆ ಪ್ರೀತಿಯಾಗಿ ಒಪ್ಪಿತವಾದ ಅಚ್ಚರಿಯನ್ನು ನೋಡು. ಬಾಣ ಬಿಟ್ಟರೆ ಬಾಣದ ಗರಿ ಕೂಡ ಕಾಣದ ಹಾಗೆ ಒಳಹೊಕ್ಕು ಹುಗಿದು ಹೋದಹಾಗೆ; ಅಪ್ಪಿದರೆ ಮೈಯ ಎಲುಬು ನುಚ್ಚುನುರಿಯಾಗುವ ಹಾಗೆ, ಬೆಸುಗೆ ಹಾಕಿದರೆ ಎಂಥ ಪೆಟ್ಟಿಗೂ ಕತ್ತರಿಸಿ ಹೋಗದ ಹಾಗೆ ಇತ್ತು. ಹೀಗೆ ಚೆನ್ನಮಲ್ಲಿಕಾರ್ಜುನನ ಮೆಚ್ಚುಗೆಯ ಸ್ನೇಹ ಒಪ್ಪಿತವಾಗಿತ್ತು ತಾಯಿ.
ಅಚ್ಚುಗ ಎಂಬ ಮಾತಿಗೆ ಕ್ಲೇಶ, ನೋವು, ತೊಂದರೆ ಅನ್ನುವ ಅರ್ಥಗಳೂ ಇವೆ. ಈ ವಚನ ರೂಪಿಸಿರುವ ಚಿತ್ರದಲ್ಲಿ ಪೂರಾ ಹುಗಿದು ಹೋಗಿರುವ ಬಾಣ, ಬೆಸುಗೆ, ನುಚ್ಚು ನೂರಾಗುವ ಎಲುಬು ಇವು ಪ್ರೀತಿಯ ಕೂಟದ ʻನೋವುʼ ಕ್ಲೇಶಗಳನ್ನೂ ಸೂಚಿಸುತ್ತವೆ ಅನಿಸುತ್ತದೆ. ಮೆಚ್ಚು, ಅಚ್ಚುಗ ಎಂಬ ಎರಡು ಪದಗಳು ಹಾಗೆ ಆಶ್ಚರ್ಯ, ಪ್ರೀತಿ, ಸ್ನೇಹ, ದೇಹದ ಕೂಟ ಇವು ಎಷ್ಟು ಜಟಿಲವಾದ ಸಂಗತಿಗಳು ಅನ್ನುವುದನ್ನು ಕಂಡುಕೊಂಡ ಹೆಣ್ಣು ಮನಸ್ಸು ಹಿರಿಯಳಾದ ತಾಯಿಯೊಡನೆ ಹೇಳಿಕೊಂಡಂತೆ ಈ ವಚನ ಇದೆ. ಮೆಚ್ಚುಗೆ-ಪ್ರೀತಿ-ಅಚ್ಚರಿ/ನೋವು-ಒಂದಾಗುವುದು-ಅದೂ ಯಾವ ಪೆಟ್ಟಿಗೂ ಬೆಸುಗೆ ಬಿಡದಂತೆ ಒಂದಾಗುವುದು ಹೀಗೆ ಪ್ರೀತಿ/ಪ್ರಿಯಕರ ಭಕ್ತ/ದೇವರ ಸಂಬಂಧದ ಅಚ್ಚರಿ ನೋವು ಎರಡೂ ಬೆರೆತ ಬಗೆಯನ್ನು ಈ ವಚನ ಹೇಳುತ್ತಿದೆ. ನಾನತ್ವ ಇನ್ನೂ ಇರುವ ಕಾರಣಕ್ಕೇ ನೋವು ಇರುತ್ತದೆ ಎಂದು ಊಹಿಸಬಹುದು.
ʻನಮ್ಮ ಮಿಲನಕ್ಕೆ ಅಡ್ಡಿಯಾಗುವುದೆಂದು ಉಡುಪು ಒಡವೆಗಳನ್ನೆಲ್ಲ ಕಳಚಿದೆವು. ನಮ್ಮ ಮೈಗಳೇ ನಮಗೆ ಅಡ್ಡಿಯಾಗಿವೆಯಲ್ಲಾʼ ಎಂದು ಅಚ್ಚರಿ ವ್ಯಕ್ತಪಡಿಸುವ ಸಂಸ್ಕೃತದ ಶೃಂಗಾರ ಶ್ಲೋಕವೊಂದನ್ನು ಓದಿದ್ದ ನೆನಪಾಗುತ್ತಿದೆ. ಒಂದುಗೂಡುವ ಅನುಭವಕ್ಕೆ ಮೈ ಬೇಕು, ಹಾಗೆ ಒಂದಾಗಲು ಅಡ್ಡಿಯಾಗುವುದೂ ಮೈಯೇ! ಕಣ್ಣಬೇಟ, ಕನಸಿನ ಕೂಟ ಇವೆಲ್ಲ ಅತೃಪ್ತಿಯನ್ನೇ ತರುತ್ತವೆ. ನಿಜದೊಡನೆ ಕೂಡುವುದು ಅಸಾಧ್ಯವೇ ಅನ್ನುವ ಬೆರಗು, ನೋವು ಎರಡೂ ಇರುವಂತಿದೆ.

