ನಮ್ಮ ಜೊತೆ ಯಾವಾಗಲೂ ಆಗುವ ಸಂಗತಿಯೆಂದರೆ, ನಾವು ಏನನ್ನಾದರೂ ಕಳೆದುಕೊಂಡಾಗ, ಆ ಬಗ್ಗೆ ಯೋಚನೆ ಮಾಡಲು ಆರಂಭಿಸುತ್ತೇವೆ, ಆ ಕುರಿತು ಫಿಲಾಸಫಿಯಂದನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತೇವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನನ್ನ ಆಬ್ಸರ್ವೇಷನ್ ಏನೆಂದರೆ ಪ್ರೀತಿಸಿದ, ಪ್ರೀತಿಸಲ್ಪಟ್ಟ ಜನ ಪ್ರೀತಿಯ ಬಗ್ಗೆ ಪುಸ್ತಕ ಬರೆಯುತ್ತಾರೆ; ಇದು ಒಂದು ಬಗೆಯ ಪರ್ಯಾಯ. ಪ್ರೀತಿಸಲಾಗದ, ಪ್ರೀತಿಗೆ ಒಳಪಡದ ಜನ ಕವಿತೆ ರಚಿಸುತ್ತಾರೆ. ಅವರು ಅದ್ಭುತ ಪ್ರೇಮ ಕಾವ್ಯವನ್ನು ರಚಿಸುತ್ತಾರಾದರೂ, ಅವರಿಗೆ ಪ್ರೀತಿಯ ಯಾವ ಅನುಭವವೂ ಇಲ್ಲ, ಹಾಗಾಗಿ ಅವರ ಎಲ್ಲ ಕಾವ್ಯ ಕೇವಲ ಕಾಲ್ಪನಿಕ ಮಾತ್ರ. ಅವರಿಗೆ ಅದ್ಭುತ ಕಲ್ಪನೆಯ ಎತ್ತರ ಲಭಿಸಿರಬಹುದು, ಆದರೆ ಅದಕ್ಕೂ ಪ್ರೀತಿಯ ವಾಸ್ತವಕ್ಕೂ ಯಾವ ಸಂಬಂಧವಿಲ್ಲ. ಪ್ರೀತಿಯ ವಾಸ್ತವ ಸಂಪೂರ್ಣವಾಗಿ ವಿಭಿನ್ನವಾದದ್ದು; ಇದು ಅನುಭವದಿಂದ ಮಾತ್ರ ಲಭ್ಯವಾಗುವುದು.
ಒಂದು ಸಮಾರಂಭಕ್ಕೆ ತನ್ನ ಮಗಳ ಮನೆಗೆ ಬಂದಿದ್ದ ಒಬ್ಬ ವ್ಯಕ್ತಿಯನ್ನ ಎಲ್ಲರೂ ಡಾಕ್ಟರ್ ಅಂತ ಸಂಬೋಧನೆ ಮಾಡುತ್ತಿರುವುದನ್ನ ಗಮನಿಸಿದ ನಸ್ರುದ್ದೀನ, ಆ ವ್ಯಕ್ತಿಯನ್ನ ಮಾತನಾಡಿಸಿದ.
“ ಡಾಕ್ಟರ್, ನನಗೆ ಹೃದಯದ ಕೆಳಭಾಗದಲ್ಲಿ ಏನೋ ಒಂದು ವಿಚಿತ್ರ ನೋವು. ….. “
ನಸ್ರುದ್ದೀನ್ ನ ಮಾತು ಕಟ್ ಮಾಡಿ ಆ ವ್ಯಕ್ತಿ,
“ ಕ್ಷಮಿಸಿ, ನಾನು ಹೃದಯದ ಡಾಕ್ಟರ್ ಅಲ್ಲ, ನಾನು ಡಾಕ್ಟರ್ ಆಫ್ ಫಿಲಾಸಫಿ “
“ ಓಹ್ ಹೌದಾ “ ಎಂದು ಹೊರಳಿ ಹೊರಟಿದ್ದ ನಸ್ರುದ್ದೀನ್ ತಿರುಗಿ ಬಂದು ಪ್ರಶ್ನೆ ಮಾಡಿದ.
“ ಹೌದು, ಈ ಫಿಲಾಸಫಿ ಯಾವ ಥರದ ಕಾಯಿಲೆ? “

