ಪ್ರತಿ ಮನುಷ್ಯನೂ ಪ್ರೇಮ ರಹಿತ, ಆದ್ದರಿಂದಲೇ ಈ ಎಲ್ಲ ಸಂಕಟ, ಆತಂಕ. ಬೀಜ, ತಾನು ಬೀಜವಾಗಿಯೇ ಉಳಿಯಲು ಬಯಸುವುದಿಲ್ಲ. ಅದು ಬೆಳೆದು ಮರವಾಗಬಯಸುತ್ತದೆ, ಅದು ಗಾಳಿಯೊಡನೆ ಆಡ ಬಯಸುತ್ತದೆ, ಅದು ಆಕಾಶಕ್ಕೆ ಏರ ಬಯಸುತ್ತದೆ – ಅದಕ್ಕೆ ಮಹತ್ವಾಕಾಂಕ್ಷೆ ಇದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮಹತ್ವಾಕಾಂಕ್ಷೆಗಳ ವಿಷಯದಲ್ಲಿ
ನಾನು ದೊಡ್ಡ ಸೋಮಾರಿ,
ಜಗತ್ತಿನ ವಿಷಯ
ಜಗತ್ತಿಗೇ ಬಿಟ್ಟು ಬಿಟ್ಟಿದ್ದೇನೆ.
ಚೀಲದಲ್ಲಿರುವ ಅಕ್ಕಿ
ಹತ್ತು ದಿನಗಳಿಗೆ ಸಾಕಾಗುವಷ್ಟು ;
ಜೊತೆಗೆ
ಒಂದಿಷ್ಟು ಕಟ್ಟಿಗೆ ತುಂಡು, ಬೆಂಕಿಗಾಗಿ.
ಭ್ರಮೆ, ಜ್ಞಾನೋದಯದ ಹರಟೆ ಇನ್ನುಮುಂದಿಲ್ಲ.
ರಾತ್ರಿಯಿಡೀ, ಮಾಳಿಗೆ ಮೇಲೆ ಬೀಳುತ್ತಿರುವ
ಮಳೆಯ ಸದ್ದಿಗಾಗಿ ಆಕಾಶಕ್ಕೆ ಕಿವಿ ಹಚ್ಚಿಕೊಂಡು
ಕುಳಿತಿದ್ದೇನೆ ಕಾಲು ಚಾಚಿ.
~ Ryokan
ಪ್ರತಿ ಮನುಷ್ಯನೂ ಮಹತ್ವಾಕಾಂಕ್ಷೆಯೊಂದಿಗೆಯೇ ಹುಟ್ಟಿರುತ್ತಾನೆ – ಪ್ರೇಮದಲ್ಲಿ ಹೂವಾಗಬೇಕು, ಪ್ರೇಮದಲ್ಲಿ ಅರಳಬೇಕು. ಆದ್ದರಿಂದ ನಾನು ಪ್ರತಿ ಮನುಷ್ಯನನ್ನು ಒಂದು ಸಾಧ್ಯತೆ, ಒಂದು ಸಂಭಾವ್ಯ, ಒಂದು ಭರವಸೆ, ಎಂದು ನೋಡುತ್ತೇನೆ. ಏನೋ ಒಂದು ಆಗದಿರುವುದು ಇನ್ನು ಮುಂದೆ ಆಗಲಿದೆ, ಅದು ಆಗದ ಹೊರತು ತೃಪ್ತಿ ಇಲ್ಲ, ಸಮಾಧಾನ ಇಲ್ಲ; ಅಲ್ಲಿ ಸಂಕಟ ಇದೆ, ನೋವು ಇದೆ, ದುಃಖ ಇದೆ.
ಯಾವಾಗ ನೀವು ನಿಮ್ಮ ಬಯಕೆಗೆ ತಕ್ಕಂತೆ ಸಂಪೂರ್ಣವಾಗಿ ಅರಳುತ್ತೀರೋ, ನೀವು ಯಾಕಾಗಿ ಹುಟ್ಟಿರುವುರೋ ಅದು ಪೂರ್ಣವಾದಾಗ, ನಿಮ್ಮ ನಿಯತಿಯನ್ನು ನೀವು ತಲುಪಿದಾಗ, ಸಾಧಿಸುವುದು ಇನ್ನು ಬಾಕಿ ಏನೂ ಇಲ್ಲದಿರುವಾಗ, ಎಲ್ಲ ಮಹತ್ವಾಕಾಂಕ್ಷೆಗಳು ಪೂರ್ಣಗೊಂಡು ನೀವು ತೃಪ್ತರಾದಾಗ ಮಾತ್ರ ನೀವು ಆನಂದವನ್ನು ತಲುಪುತ್ತೀರಿ, ಅದಕ್ಕಿಂತ ಮೊದಲು ಅಲ್ಲ.
ಪೌರ್ವಾತ್ಯ ದೇಶಗಳಲ್ಲಿ ಮಂಗಗಳನ್ನು ಹಿಡಿಯಲು ಒಂದು ಕುತೂಹಲಕಾರಿ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.
ಒಂದು ತೆಂಗಿನಕಾಯಿನ್ನು ಖಾಲಿ ಮಾಡಿ ಅದನ್ನ ಮರಕ್ಕೆ ಜೋತು ಬಿಡುತ್ತಾರೆ. ಆ ತೆಂಗಿನಕಾಯಿಯಲ್ಲಿ ರಂಧ್ರ ಕೊರೆದು ಅದರಲ್ಲಿ ಒಂದಿಷ್ಟು ಅನ್ನ ತುಂಬುತ್ತಾರೆ. ತೆಂಗಿನಕಾಯಿಯಲ್ಲಿ ಕೊರೆದ ರಂಧ್ರ ಎಷ್ಟು ದೊಡ್ಡದಾಗಿರುತ್ತದೆ ಎಂದರೆ, ಒಂದು ಮಂಗದ ಕೈ ಒಳಗೆ ಹೋಗುವಷ್ಟು ಮಾತ್ರ.
ಹಸಿದ ಮಂಗ , ಜೋತು ಬಿಟ್ಟ ತೆಂಗಿನಕಾಯಿ ನೋಡಿ, ಮರ ಏರಿ , ಆ ಕೊರೆದ ರಂಧ್ರದಲ್ಲಿ ಕೈ ಹಾಕಿ , ಅದರೊಳಗಿನ ಅನ್ನವನ್ನು ತನ್ನ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕೈ ಹೊರ ತೆಗೆಯಲು ಪ್ರಯತ್ನಿಸುತ್ತದೆ. ಆದರೆ ಸಾಧ್ಯವಾಗುವುದೇ ಇಲ್ಲ. ಆಗಲೇ ಮಂಗ ಸಿಕ್ಕಿಹಾಕಿಕೊಳ್ಳುತ್ತದೆ.
ತಾನು ಕೈಯಲ್ಲಿ ಹಿಡಿದುಕೊಂಡಿರುವುದೇ ತನ್ನನ್ನು ಸಿಕ್ಕಿ ಹಾಕಿಸಿದೆ ಅನ್ನೋದು ಕೊನೆಗೂ ಗೊತ್ತೇ ಆಗುವುದಿಲ್ಲ ಆ ಮಂಗನಿಗೆ.

