ನಿಜದ ಪ್ರಶ್ನೆ, ತನ್ನೊಳಗೆಯೇ ಉತ್ತರವನ್ನು ಬಚ್ಚಿಟ್ಟುಕೊಂಡ ಹೊದಿಕೆ ( capsule), ಮೃದು ಉತ್ತರವನ್ನು ರಕ್ಷಿಸುತ್ತಿರುವ ಕಠಿಣ ಚಿಪ್ಪು. ಅದು ಬೀಜವನ್ನು ಸುತ್ತುವರೆದಿರುವ ತೊಗಟೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
“ಹೇಗಿದ್ದೀರಿ ನೀವು”ಎನ್ನುವ ಪ್ರಶ್ನೆಗೆ
ನನ್ನ ಹತ್ತಿರ ಇವೆ
ಸಾವಿರ ಸುಳ್ಳು ಉತ್ತರಗಳು.
“ದೇವರು ಎಂದರೇನು” ಎನ್ನುವ ಪ್ರಶ್ನೆಗೆ ಕೂಡ
ನನ್ನ ಬಳಿ ಇವೆ
ಸಾವಿರ ಸುಳ್ಳು ಉತ್ತರಗಳು.
ಹಾಗೆಲ್ಲ ಮಾತುಗಳಲ್ಲಿ
ಉತ್ತರ ಹೇಳಬಹುದಾದರೆ,
ಸೂರ್ಯ, ಸಾಗರ
ಈ ಪುಟ್ಟ ಬಾಯಿಯ ಮೂಲಕ
ಹಾಯ್ದು ಹೊರಗೆ ಬರಬಹುದಾದರೆ,
ಓಹ್ !
ಯಾರಾದರೂ ನಕ್ಕುಬಿಡಿ !
ಇನ್ನೂ ಜೋರಾಗಿ !
- ಹಾಫಿಜ್
ನೂರಕ್ಕೆ ತೊಂಭತ್ತೊಂಭತ್ತು ಪ್ರಶ್ನೆಗಳು ಮೂರ್ಖ ಪ್ರಶ್ನೆಗಳು. ಮತ್ತು ಈ ತೊಂಭತ್ತೊಂಭತ್ತು ಮೂರ್ಖ ಪ್ರಳ್ನೆಗಳ ಕಾರಣವಾಗಿ ನಿಮಗೆ ಅತ್ಯಮೂಲ್ಯ ಪ್ರಶ್ನೆಗಳನ್ನು ಎತ್ತುವುದು ಸಾಧ್ಯವಾಗುವುದಿಲ್ಲ. ನಿಮ್ಮ ಸುತ್ತಲೂ ಗದ್ದಲ ಹಾಕುತ್ತಿರುವ ಈ ತೊಂಭತ್ತೊಂಭತ್ತು ಪ್ರಶ್ನೆಗಳು ನಿಮಗೆ ನಿಜವಾದ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡುವುದಿಲ್ಲ. ನಿಜದ ಪ್ರಶ್ನೆಯ ದನಿ ಬಹಳ ಸಣ್ಣದು, ಮೌನವನ್ನು ಹೊದ್ದುಕೊಂಡಂಥದು, ಮತ್ತು ಈ ಸುಳ್ಳು ಪ್ರಶ್ನೆಗಳು ಬಹಳ ಸದ್ದು ಮಾಡುವಂಥವು. ಈ ಕಾರಣವಾಗಿ ನಿಮಗೆ ನಿಜದ ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರ ಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಹಾಗಾಗಿ ಕಳಪೆಯನ್ನು ಕಳಪೆ ಎಂದು ಗೊತ್ತು ಮಾಡಿಕೊಳ್ಳುವುದು ಬಹಳ ದೊಡ್ಡ ತಿಳುವಳಿಕೆ. ಈಗ ಅದು ಕಳಪೆ ಪ್ರಶ್ನೆ ಎನ್ನುವುದು ನಿಮಗೆ ಗೊತ್ತಾಗಿರುವುದರಿಂದ ಬಹು ಕಾಲ ಅದು ನಿಮ್ಮ ಬಳಿ ಇರುವುದು ಸಾಧ್ಯವಾಗುವುದಿಲ್ಲ. ಅದು ಕಳಪೆ ಎನ್ನುವ ತಿಳುವಳಿಕೆಯೇ ಅದು ನಿಮ್ಮ ಕೈಯಿಂದ ಜಾರಿ ಹೋಗಲು ಸಾಕಷ್ಟು ಸಹಾಯ ಮಾಡುತ್ತದೆ. ನಿಮ್ಮ ಕೈ ಕಳಪೆ ಪ್ರಶ್ನೆಗಳಿಂದ ಹೊರತಾದಾಗ ನಿಮ್ಮ ಕೈಯೊಳಗೆ ಕೇವಲ ನಿಜದ ಪ್ರಶ್ನೆಗಳು ಉಳಿದುಕೊಳ್ಳುತ್ತವೆ.
ಮತ್ತು ಇಂಥ ಸ್ಥಿತಿಯ ಚೆಲುವು ಏನೆಂದರೆ ನಿಮ್ಮ ಬಳಿ ಕೇವಲ ನಿಜದ ಪ್ರಶ್ನೆಗಳಿದ್ದಾಗ, ಉತ್ತರ ನಿಮ್ಮಿಂದ ಬಹಳ ದೂರ ಇಲ್ಲ, ಅದು ನಿಮ್ಮ ಪ್ರಶ್ನೆಯಲ್ಲಿಯೇ ಇದೆ. ಪ್ರಶ್ನೆಯ ಕೇಂದ್ರದಲ್ಲಿಯೇ ಉತ್ತರ ಮನೆ ಮಾಡಿಕೊಂಡಿದೆ.
ಝೆನ್ ಮಾಸ್ಟರ್ ಬೊಕುಜು ನ ಗುರು ಸುತ್ತಮುತ್ತ ತುಂಬ ಪ್ರಸಿದ್ಧ ವ್ಯಕ್ತಿಯಾಗಿದ್ದ. ಒಮ್ಮೆ ಯಾರೋ ಒಬ್ಬರು ಬೊಕುಜುನ ಪ್ರಶ್ನೆ ಮಾಡಿದರು, “ನೀನು ನಿಜವಾಗಿ ನಿನ್ನ ಗುರುವನ್ನ ಅನುಸರಿಸುತ್ತೀಯಾ?”
“ಹೌದು, ನಾನು ನನ್ನ ಗುರುವನ್ನ ಅನುಸರಿಸುತ್ತೇನೆ” ಬೊಕುಜು ಉತ್ತರಿಸಿದ.
ಬೊಕುಜು ನ ಉತ್ತರ ಕೇಳಿ ಆ ವ್ಯಕ್ತಿಗೆ ಕಸಿವಿಸಿ ಆಯಿತು ಏಕೆಂದರೆ, ಬೊಕುಜು ತನ್ನ ಮಾಸ್ಟರ್ ನ ಒಂದು ಚೂರೂ ಅನುಸರಿಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು.
“ನೀನು ನನಗೆ ಸುಳ್ಳು ಹೇಳುತ್ತಿದ್ದೀಯ? ನೀನು ನಿನ್ನ ಮಾಸ್ಟರ್ ನ ಕೊಂಚವೂ ಅನುಸರಿಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು, ಆದರೂ ನೀನು ಹೀಗೆ ಸುಳ್ಳು ಹೇಳುವ ಉದ್ದೇಶವೇನು?” ಆ ವ್ಯಕ್ತಿ ಮತ್ತೆ ಬೊಕುಜು ನ ಪ್ರಶ್ನೆ ಮಾಡಿದ.
“ನನ್ನ ಮಾಸ್ಟರ್ ಯಾವತ್ತೂ ತನ್ನ ಮಾಸ್ಟರ್ ನ ಫಾಲೋ ಮಾಡಲಿಲ್ಲ. ಅವನು ತನ್ನಂತೆಯೇ ಇದ್ದ. ನಾನು ನನ್ನ ಗುರುವಿನಿಂದ ಇದನ್ನೇ ಕಲಿತದ್ದು. ಅದಕ್ಕೆ ಹೇಳಿದೆ ನಾನು ನನ್ನ ಗುರುವನ್ನ ಫಾಲೋ ಮಾಡುತ್ತೇನೆ ಎಂದು”. ಬೊಕುಜು ಉತ್ತರಿಸಿದ.

