ಕೆಲವರು ಅಪಾಯಮುಕ್ತರಾಗಿದ್ದಾಗ ಮಾತ್ರ ತಾವು ಶಕ್ತಿಶಾಲಿಗಳೆಂದು ಭಾವಿಸುತ್ತಾರೆ ; ಆದರೆ ಈ ಶಕ್ತಿಶಾಲಿ ಎನ್ನುವ ಭಾವನೆ ಕೇವಲ ಬೋಗಸ್. ಆದರೆ ಅಪಾಯಕ್ಕೆ ತೆರೆದುಕೊಂಡಿರುವ ಬಹುತೇಕರು ತಮ್ಮನ್ನು ತಾವು ದುರ್ಬಲರು ಎಂದು ತಿಳಿದುಕೊಳ್ಳುತ್ತಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಎಲ್ಲಕ್ಕಿಂತ ಮೃದುವಾಗಿದೆ ಮತ್ತು
ಎಲ್ಲರೊಡನೆ ಒಗ್ಗಿಕೊಳ್ಳುತ್ತದೆ
ಅಂದ ಮಾತ್ರಕ್ಕೆ
ನೀರನ್ನ ದುರ್ಬಲ ಎಂದುಕೊಳ್ಳಬೇಡಿ.
ಈ ನೀರು ಮನಸ್ಸು ಮಾಡಿದರೆ
ಏನನ್ನಾದರೂ ಮಣಿಸಬಲ್ಲದು.
ಈ ಸತ್ಯ ಪ್ರಚಾರದಲ್ಲೇನೋ ಇದೆ
ಆದರೆ
ಯಾರೂ ಗಂಭೀರವಾಗಿ ಪರಿಗಣಿಸಿಲ್ಲ.
ಸಂತರ ನಂಬಿಕೆ ಏನೆಂದರೆ
ರಾಜನಾದವನು,
ಕರುಣೆಯನ್ನ ಬಿಟ್ಟುಬಿಡಬೇಕು,
ಕೆಟ್ಟವನಾಗಬೇಕು.
ಇದು ದ್ವಂದ್ವ ಅಲ್ಲ, ಸತ್ಯ.
~ ಲಾವೋತ್ಸೇ
ಅಪಾಯಕ್ಕೆ ತೆರೆದುಕೊಂಡಿರುವಾಗ ತಮ್ಮನ್ನು ತಾವು ದುರ್ಬಲರು ಎಂದು ತಿಳಿದುಕೊಳ್ಳುವ ಬಹಳಷ್ಟು ಜನ, ಬಹುಕಾಲ ದುರ್ಬಲತೆಯನ್ನು ಫೀಲ್ ಮಾಡಿಕೊಳ್ಳುವುದಿಲ್ಲ : ಬಹಳ ಬೇಗ ಈ ದುರ್ಬಲತೆ ಅವರನ್ನು ಎಷ್ಟು ಗಾಬರಿಗೊಳಿಸುತ್ತದೆ ಎಂದರೆ, ಅವರು ಎಲ್ಲಕ್ಕೂ ಮುಕ್ತಾಯ ಹಾಡಿಬಿಡುತ್ತಾರೆ. ಆದರಿಂದ ಸರಿಯಾದ ರೀತಿಯೆಂದರೆ ಅಪಾಯಕ್ಕೆ ತೆರೆದುಕೊಂಡಾಗಲೂ ಸ್ಟ್ರಾಂಗ್ ಫೀಲ್ ಮಾಡುವುದು. ಆಗ ಅಪಾಯ ಹೆಚ್ಚಾದಂತೆ ನೀವು ಹೆಚ್ಚು ಶಕ್ತಿಶಾಲಿಗಳಾಗುತ್ತ ಹೋಗುತ್ತೀರಿ ಮತ್ತು ನಿಮಗೆ ಹೆಚ್ಚು ಹೆಚ್ಚು ಅಪಾಯಗಳನ್ನು ಆಹ್ವಾನಿಸುವ ಧೈರ್ಯ ಪ್ರಾಪ್ತಿಯಾಗುತ್ತದೆ.
ನಿಜವಾದ ಧೈರ್ಯಶಾಲಿ ಎಲ್ಲಕ್ಕೂ ತೆರೆದುಕೊಂಡವನಾಗಿರುತ್ತಾನೆ, ಇದು ಧೈರ್ಯದ ನಿಜವಾದ ಮಾನದಂಡ. ಕೇವಲ ಹೇಡಿ ಮಾತ್ರ ಸವಾಲುಗಳಿಗೆ ಬೆನ್ನು ಹಾಕುತ್ತಾನೆ. ಧೈರ್ಯಶಾಲಿ ವ್ಯಕ್ತಿ ಬಂಡೆಗಲ್ಲಿನಷ್ಟು ಶಕ್ತಿಶಾಲಿಯಾಗಿರುತ್ತಾನೆ ಮತ್ತು ಗುಲಾಬಿಯಷ್ಟು ನಾಜೂಕಾಗಿರುತ್ತಾನೆ. ಇದು ದ್ವಂದ್ವ ಮತ್ತು ಎಲ್ಲ ಸತ್ಯವೂ ದ್ವಂದ್ವಾತ್ಮಕವೇ.
ಆದ್ದರಿಂದ ನಿಮಗೆ ಸದಾ ನೆನಪಿರಲಿ : ಯಾವುದಾದರೂ ನಿಮಗೆ ದ್ವಂದ್ವಾತ್ಮಕ ಅನಿಸುತ್ತಿದೆಯಾದರೆ, ಅದನ್ನು ಸರಳಗೊಳಿಸಲು ಹೋಗಬೇಡಿ, ಏಕೆಂದರೆ ಇಂಥ ಸರಳೀಕರಣ ಮಿಥ್ಯೆಯಾಗಿರುತ್ತದೆ. ವಾಸ್ತವ ಯಾವತ್ತೂ ದ್ವಂದ್ವಾತ್ಮಕ : ಒಂದು ಕಡೆ ನೀವು vulnerable ಆಗಿದ್ದರೆ ಇನ್ನೊಂದು ಕಡೆ strong ಫೀಲ್ ಮಾಡಿಕೊಳ್ಳುತ್ತಿದ್ದೀರಿ, ಹಾಗೆಂದರೆ ಸತ್ಯದ ಗಳಿಗೆ ನಿಮ್ಮ ಎದುರುಗಿದೆ. ಒಂದು ಕಡೆ ನಿಮಗೆ ಏನೂ ಗೊತ್ತಿಲ್ಲ ಅನಿಸುತ್ತಿದ್ದರೆ, ಇನ್ನೊಂದು ಕಡೆ ನಿಮಗೆ ಎಲ್ಲವೂ ಗೊತ್ತು ಅನಿಸುತ್ತಿದೆ – ಆಗ ಸತ್ಯ ನಿಮ್ಮ ಎದುರಿಗಿದೆ.
ಒಂದು ಕಡೆ ನಿಮಗೆ ಏನೂ ಒಂದು ಅನಿಸುತ್ತಿದೆ, ಮತ್ತು ಇನ್ನೊಂದು ಕಡೆ ನಿಮಗೆ ಅದಕ್ಕೆ ವಿರುದ್ಧವಾದದ್ದು ಫೀಲ್ ಆಗುತ್ತಿದೆಯೆಂದರೆ, ನೆನಪಿರಲಿ, ಸತ್ಯ ಅಲ್ಲೇ ಎಲ್ಲೋ ಹತ್ತಿರದಲ್ಲಿದೆ.
ನಸ್ರುದ್ದೀನ್ ದಂಪತಿಗಳು ಲಾಯನ್ ಸಫಾರಿ ಗೆ ಹೋಗಿದ್ದಾಗ ಅಚಾನಕ್ ಆಗಿ ಭಯಂಕರ ಸಿಂಹವೊಂದು ಇವರಿಗೆ ಎದುರಾಯಿತು. ದಂಪತಿಗಳು ಮಹಾ ಗಾಬರಿಯಲ್ಲಿ ಮಾತು ಹೊರಡದೆ ಸುಮ್ಮನೇ ನಿಂತುಬಿಟ್ಟರು. ಅದ್ಯಾಕೋ ಸಿಂಹ ಎರಡು ನಿಮಿಷ ಆದ ಮೇಲೆ ಕಾಡಿನೊಳಗೆ ಓಡಿ ಹೋಯಿತು.
ಹತ್ತು ನಿಮಿಷ ಆದ ಮೇಲೆ ನಸ್ರುದ್ದೀನ್ ತೊದಲುತ್ತ ತನ್ನ ಹೆಂಡತಿಗೆ ಹೇಳಿದ,
“ ಭಯ ಪಡಬೇಡ ನಾನಿದ್ದೀನಿ, ಸಿಂಹ ಓಡಿ ಹೋದ ದಿಕ್ಕಿನಲ್ಲಿ ನೀನು ಹೋಗು, ಆ ಸಿಂಹ ಕಾಡಿನಲ್ಲಿ ಎಲ್ಲಿ ಹೋಯಿತು ಅಂತ ಹುಡುಕು. ಆ ಸಿಂಹ ಎಲ್ಲಿಂದ ಬಂತು ಅಂತ ನಾನು ನೋಡ್ತೀನಿ. “

