ಸ್ಕಿಜೋಫ್ರೇನಿಯಾ ಕ್ಕೆ ಕಾರಣ ಮನುಷ್ಯರಲ್ಲಿಯ ಅಪರಾಧಿ ಭಾವ ( guilt). ಅಪರಾಧಿ ಭಾವ ಆಳವಾಗಿ ಬೆಳೆಯಿತೆಂದರೆ ಅದು ನಿಜವಾದ ವಿಭಜನೆಯನ್ನು ಹುಟ್ಟುಹಾಕುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜಗತ್ತು ಮತ್ತು ಅಧ್ಯಾತ್ಮದ ನಡುವೆ ಯಾವ ಭೇದ ಇಲ್ಲ. ಆದರೆ ಮನುಷ್ಯನಲ್ಲಿಯ ಅಪರಾಧಿ ಭಾವದ ಕಾರಣವಾಗಿ ಈ ಭೇದ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಅಪರಾಧಿ ಭಾವವನ್ನು ಡ್ರಾಪ್ ಮಾಡಲೇಬೇಕು. ಜಗತ್ತು ಮತ್ತು ಅಧ್ಯಾತ್ಮವನ್ನು ಜೊತೆಗೂಡಿಸಲು ನಾವು ಯಾವ ಪ್ರಯತ್ನವನ್ನೂ ಮಾಡಬೇಕಿಲ್ಲ ಏಕೆಂದರೆ ಅವು ಯಾವಾಗಲೂ ಒಂದಾಗಿಯೇ ಇವೆ. ಅವುಗಳನ್ನು ಬೇರೆ ಮಾಡುವ ವಿಧಾನವೇ ಇಲ್ಲ. ನೀವು ನಿಮ್ಮ ಅಪರಾಧಿ ಭಾವವನ್ನು ಗುರುತಿಸಿಕೊಂಡು, ಅರ್ಥಮಾಡಿಕೊಂಡು ಅದನ್ನು ಡ್ರಾಪ್ ಮಾಡಬೇಕು ಅಷ್ಟೇ. ಇಲ್ಲವಾದರೆ ಸ್ಕಿಜೋಫ್ರೇನಿಯಾ ಹುಟ್ಟಿಕೊಳ್ಳುತ್ತದೆ. ಅಪರಾಧಿ ಭಾವ ಆಳವಾಗಿ ಬೆಳೆಯಿತೆಂದರೆ ಅದು ನಿಜವಾದ ವಿಭಜನೆಗೆ ಕಾರಣವಾಗುತ್ತದೆ. ಈ ಕಾರಣವಾಗಿ ವ್ಯಕ್ತಿ ನಿಜವಾಗಿ ಎರಡಾಗಿ ಒಡೆದು ಹೋಗುತ್ತಾನೆ. ಎಷ್ಟು ತೀವ್ರವಾಗಿ split ಆಗುತ್ತಾನೆಂದರೆ ಅವನ ಒಂದು ಭಾಗಕ್ಕೆ ಇನ್ನೊಂದು ಭಾಗದ ಪರಿಚಯವೇ ಇರುವುದಿಲ್ಲ. ಈ ವಿಭಜನೆ ಮುಂದೆ ಎಷ್ಟು ತೀವ್ರವಾಗುತ್ತದೆಯೆಂದರೆ, ಈ ಎರಡು ಭಾಗಗಳು ಒಂದನ್ನೊಂದು ಭೇಟಿಯೇ ಆಗುವುದಿಲ್ಲ.
ನೀವು ನಿಮ್ಮೊಳಗಿನ ಅಪರಾಧಿ ಭಾವವನ್ನ ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಸಹಜವಾಗಿ ಬದುಕುತ್ತ ಹೋಗಿ, ಮತ್ತು ಒಂದನ್ನು ಲೌಕಿಕ ಮತ್ತು ಇನ್ನೊಂದನ್ನು ಅಧ್ಯಾತ್ಮಿಕ ಎಂದು ಗುರುತಿಸಲು ಹೋಗಲೇ ಬೇಡಿ. ಈ ವಿಂಗಡಿಸುವಿಕಮಯೇ ತಪ್ಪು. ಏಕೆಂದರೆ ಮುಂದೆ ಇದು ವಿಭಜನೆಗೆ ಕಾರಣವಾಗುತ್ತದೆ. ಒಂದನ್ನು ನೀವು ಅಧ್ಯಾತ್ಮಿಕ ಎಂದು ಗುರುತಿಸುವಾಗಲೇ ನೀವು ಇನ್ನೊಂದನ್ನು ಲೌಕಿಕ ಎಂದು ಖಂಡಿಸುತ್ತಿರುತ್ತೀರಿ. ಇಂಥ ವಿಂಗಡಿಸುವಿಕೆಯ ಯಾವ ಅಗತ್ಯವೂ ಇಲ್ಲ.
ನೀವು ರಾತ್ರಿ ಚಂದ್ರನನ್ನು ನೋಡಿ ಬೆಳದಿಂಗಳನ್ನು ಆನಂದಿಸುತ್ತಿರುವಾಗ ವಿಭಜನೆಗೆ ಮುಂದಾಗುವುದಿಲ್ಲ. ಯಾವುದು ಭೌತಿಕ, ಯಾವುದು ಅಧ್ಯಾತ್ಮಿಕ? ಹೂವು ಅರಳುವುದನ್ನ ನೋಡಿದಾಗ, ನಿಮ್ಮೊಳಗೂ ಏನೋ ಒಂದು ಅರಳುತ್ತದೆ ಮತ್ತು ನೀವು ಅದರೊಳಗೆ ಸಂತೋಷವನ್ನು ಅನುಭವಿಸುತ್ತೀರಿ. ಅಡುಗೆ ಮಾಡುವಾಗ ರುಚಿಯಾದ ಪರಿಮಳ ನಿಮ್ಮನ್ನು ತಲುಪುತ್ತದೆ, ಮತ್ತು ನಿಮಗೆ ಅದರಲ್ಲೊಂದು ಖುಶಿ ಇದೆ. ಯಾವುದು ಭೌತಿಕ, ಯಾವುದು ಅಧ್ಯಾತ್ಮಿಕ?
ಒಮ್ಮೆ ನಸ್ರುದ್ದೀನ್ ಮನೋವೈದ್ಯರ ಹತ್ತಿರ ಬಂದ ತನ್ನ ಪರ್ಸ್ನಾಲಿಟಿಯನ್ನ ಸ್ಪ್ಲಿಟ್ ಮಾಡಿ ಕೊಡುವಂತೆ ಕೇಳಿಕೊಂಡ.
“ ಅದು ಒಂದು ಕಾಯಿಲೆ ನಸ್ರುದ್ದೀನ್. ಇಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಇರುವವರು ಗುಣಮುಖರಾಗಲು ಬರುತ್ತಾರೆ, ನಿನಗ್ಯಾಕೆ ಈ ಯೋಚನೆ ಬಂತು? “
ಮನೋವೈದ್ಯರು ನಸ್ರುದ್ದೀನ್ ನನ್ನು ವಿಚಾರಿಸಿದರು.
“ ಒಂದೇ ಪರ್ಸನಾಲಿಟಿ ಕಾರಣವಾಗಿ ನನಗೆ ಒಂಟಿತನ ಕಾಡ್ತಾ ಇದೆ. “
ನಸ್ರುದ್ದೀನ್, ತನ್ನ ಕಾರಣ ಡಾಕ್ಟರ್ ಗೆ ತಿಳಿಸಿದ.

