ಧ್ಯಾನ, ಒಂದು ರಸವೈಜ್ಞಾನಿಕ ವಿಧಾನ; ಅದು ನಿಮ್ಮ ಇಡೀ ಇರುವಿಕೆಯನ್ನು ಬದಲಾಯಿಸಿಬಿಡುತ್ತದೆ. ಅದು ನಿಮ್ಮ ಎಲ್ಲ ಸೀಮಿತತೆಯನ್ನ, ಎಲ್ಲ ಇಕ್ಕಟ್ಟನ್ನ ನಾಶಮಾಡುತ್ತದೆ; ಅದು ನಿಮ್ಮನ್ನು ವಿಸ್ತಾರಗೊಳಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ, ಎಲ್ಲ ಬೌಂಡರಿಗಳನ್ನ ಮೀರಲು ನಿಮಗೆ ಸಹಾಯ ಮಾಡುತ್ತದೆ : ಮತ-ಧರ್ಮಗಳ ಬೌಂಡರಿ, ದೇಶ-ಜನಾಂಗಗಳ ಬೌಂಡರಿ, ಎಲ್ಲವನ್ನೂ. ಅರಿವು, ಎಲ್ಲ ಬಗೆಯ ತಾರ್ಕಿಕ, ಸೈದ್ಧಾಂತಿಕ ನಿರ್ಬಂಧಗಳಿಂದ, ಬಂಧನಗಳಿಂದ ಪಾರಾಗಿ ಹೋಗಲು ನಿಮಗೆ ಸಹಾಯ ಮಾಡುತ್ತದೆಯಷ್ಟೇ ಅಲ್ಲ, ಅದು ನಿಮ್ಮ ದೇಹ-ಮೈಂಡ್ ಗಳ ಲಿಮಿಟೇಶನ್ಗಳನ್ನು ಮೀರಲು ಕೂಡ ಸಹಾಯ ಮಾಡುತ್ತದೆ. ಅದು ನೀವು ಶುದ್ಧ ಪ್ರಜ್ಞೆಯಲ್ಲದೇ ಬೇರೇನೂ ಅಲ್ಲ ಎನ್ನುವ ಅರಿವನ್ನು ನಿಮ್ಮಲ್ಲಿ ಮೂಡಿಸುತ್ತದೆ.
ದೇಹ, ಕೇವಲ ನಿಮ್ಮ ಮನೆಯಂತೆ ; ನೀವೇ ಅದಲ್ಲ. ಮೈಂಡ್ ಕೇವಲ ನೀವು ಬಳಸಬಹುದಾದ ಮೆಕ್ಯಾನಿಸಂ ಮಾತ್ರ. ಅದು ನಿಮ್ಮ ಮಾಸ್ಟರ್ ಅಲ್ಲ, ನಿಮ್ಮ ಸೇವಕ ಮಾತ್ರ. ನೀವು ಕೇವಲ ನಿಮ್ಮ ದೇಹ-ಮೈಂಡ್ ಅಲ್ಲ ಎನ್ನುವುದು ನಿಮ್ಮ ಅರಿವಿಗೆ ಬರುತ್ತಿದ್ದಂತೆಯೇ, ನೀವು ವಿಸ್ತಾರಗೊಳ್ಳಲು ಶುರು ಮಾಡುತ್ತೀರಿ, ನೀವು ಹೆಚ್ಚು ಹೆಚ್ಚು ವಿಶಾಲಗೊಳ್ಳುತ್ತ ಹೋಗುತ್ತೀರಿ. ನೀವು ಮಹಾ ಸಾಗರದಂತೆ, ಮಹಾ ಆಕಾಶದಂತೆ ಅಗಾಧವಾಗುತ್ತ ಹೋಗುತ್ತೀರಿ. ಇಂಥ ಬದಲಾವಣೆ ನಿಮ್ಮ ವಿಜಯಕ್ಕೆ, ವೈಭವಕ್ಕೆ ಕಾರಣವಾಗುತ್ತದೆ.
ಒಂದು ಪುರಾತನ ಕಥೆ ನೆನಪಾಗುತ್ತಿದೆ.
ಒಂದು ಹರೆಯದ ಫಿಲಾಸೊಫಿಕಲ್ ಮನಸ್ಸಿನ ಮೀನು, ತನ್ನ ಜೊತೆಯಿದ್ದ ಇನ್ನೊಂದು ಮೀನನ್ನು ಪ್ರಶ್ನೆ ಮಾಡಿತು, “ ನಾವು ಸಮುದ್ರದ ಬಗ್ಗೆ ಎಷ್ಟೆಲ್ಲ ಕೇಳಿದ್ದೇವೆ, ಎಲ್ಲಿದೆ ಈ ಸಮುದ್ರ?, ನಾನು ಒಮ್ಮೆ ನೋಡಬೇಕು ಈ ಸಮುದ್ರವನ್ನ.”
ಸುತ್ತಲಿನ ಎಲ್ಲ ಮೀನುಗಳು, “ ನಮಗೂ ಗೊತ್ತಿಲ್ಲ, ನಾವೂ ಒಮ್ಮೆ ನೋಡಬೇಕು ಈ ಸಮುದ್ರವನ್ನ” ಎಂದು ಉತ್ತರಿಸಿದವು.
ಈ ಯುವ ಮೀನುಗಳ ಮಾತುಕತೆಯನ್ನ ಗಮನಿಸಿದ ಒಂದು ವಯಸ್ಸಾದ ಮೀನು, ಆ ಫಿಲಾಸೊಫಿಕಲ್ ಮೀನನ್ನು ಪಕ್ಕಕ್ಕೆ ಕರೆದು ಹೇಳಿತು, “ ಸಮುದ್ರ ಬೇರೆಲ್ಲೂ ಇಲ್ಲ, ನಮ್ಮ ಸುತ್ತ ಇರುವುದೇ ಸಮುದ್ರ, ನಾವು ಈಗ ಇರೋದು ಅದರಲ್ಲಿಯೇ, ನಾವು ಹುಟ್ಟೋದು, ಬದುಕೋದು, ಸಾಯೋದು ಎಲ್ಲ ಈ ಸಮುದ್ರದಲ್ಲಿಯೇ, ಇದೇ ಸಮುದ್ರ.”
ನಾನು ನಿಮಗೆ ಹೇಳೋದು ಇದನ್ನೇ. ಇದು ನಮಗೂ ಅನ್ವಯಿಸುವ ಸತ್ಯ. ನಾವು ದೈವತ್ವದಲ್ಲಿಯೇ ಹುಟ್ಟಿರುವುದು, ದೈವತ್ವದಲ್ಲಿಯೇ ಬದುಕುತ್ತಿರುವುದು, ದೈವತ್ವದಲ್ಲಿಯೇ ಸಾವು ನಮಗೆ ಎದುರಾಗುತ್ತದೆ.
ನಾವು ಗಮನಿಸಬೇಕಾದದ್ದು ಏನೆಂದರೆ, ಇಂಥಹ ಒಂದು ಅದ್ಭುತ ಬದುಕಿನ ಅನುಭವವನ್ನ ನಾವು ನಿದ್ರಾವಸ್ಥೆಯಲ್ಲಿ ದಾಟುತ್ತಿದ್ದೇವೋ ಅಥವಾ ಸಂಪೂರ್ಣ ಪ್ರಜ್ಞೆಯಲ್ಲಿ ದಾಟುತ್ತಿದ್ದೇವೋ ಎನ್ನುವುದನ್ನ ಮಾತ್ರ.
ಇಂಥ ಒಂದು ಅರಿವನ್ನು ನಮಗೆ ಸಾಧ್ಯ ಮಾಡಿಕೊಡುವುದು ಧ್ಯಾನ. ಒಮ್ಮೆ ನಮಗೆ ಈ ಅರಿವು ಸಾಧ್ಯವಾದಾಗ, ನಮ್ಮ ಸುತ್ತ ಇರುವ ಎಲ್ಲವೂ ದೈವತ್ವದ ಸಮುದ್ರ. ಈ ಬದುಕು, ಈ ಪ್ರಜ್ಞೆ ಎಲ್ಲವೂ ಡಿವೈನ್. ಈ ದಿವ್ಯ ಎಲ್ಲ ರೂಪಗಳಲ್ಲೂ ಕಾಣಿಸಿಕೊಳುತ್ತದೆ, ಗುಲಾಬಿಗಳಲ್ಲಿ, ಕಮಲದ ಹೂಗಳಲ್ಲಿ, ಗಿಡ ಮರಗಳಲ್ಲಿ, ನದಿ ಸಾಗರ ಝರಿಗಳಲ್ಲಿ, ಪ್ರತಿಯೊಂದು ಪ್ರಾಣಿಯಲ್ಲಿ ದೈವತ್ವ ತುಂಬಿಕೊಂಡಿದೆ. ಬದುಕು ಎಲ್ಲಿದೆಯೋ ಅಲ್ಲೆಲ್ಲ ದೈವತ್ವ ಇದೆ.
ನಾವು ಬದುಕುತ್ತಿರುವುದೇ ದೈವತ್ವದ ಸಮುದ್ರದಲ್ಲಿ. ಆದ್ದರಿಂದ ದೈವತ್ವವನ್ನು ಬೇರೆಲ್ಲೂ ಹುಡುಕಲು ಹೋಗಬೇಡಿ. ನಿಮ್ಮ ಒಳಗನ್ನೊಮ್ಮೆ ಪ್ರಜ್ಞಾಪೂರ್ವಕವಾಗಿ ಗಮನಿಸಿ. ಅದು ದೈವತ್ವ ನಿಮಗೆ ಲಭ್ಯವಾಗಬಹುದಾದ ಅತ್ಯಂತ ಹತ್ತಿರದ ಜಾಗ.

