ನನ್ನ ಸಲಹೆ ಏನೆಂದರೆ ನೀವು ಸಂಗೀತವನ್ನು ಆನಂದಿಸಿ, ಕವಿತೆಯನ್ನು ಆನಂದಿಸಿ, ಪ್ರಕೃತಿಯನ್ನು ಆನಂದಿಸಿ ಆದರೆ ಅವನ್ನು ಡೈಸೆಕ್ಟ್ ( ವಿಭಜನೆ) ಮಾಡುವ ಆತುರತೆಯಿಂದ ಮಾತ್ರ ಹಿಂದೆ ಸರಿಯಿರಿ. ಮತ್ತು ಯಾವತ್ತೂ ಹೋಲಿಕೆ ಮಾಡಲು ಹೋಗಬೇಡಿ, ಹೋಲಿಕೆ ಒಂದು ವಿಫಲ ಪ್ರಯತ್ನ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಜಗತ್ತಿನಲ್ಲಿ
ನಮ್ಮ ವಿಕಾಸಕ್ಕೆ ಕಾರಣವಾಗಿರುವುದು
ನಮ್ಮ ನಡುವೆ ಇರುವ ಸಮಾನತೆಗಳಲ್ಲ,
ಸಮಾನ ಹೋಲಿಕೆಗಳಲ್ಲ,
ಬದಲಾಗಿ
ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು
ನಮ್ಮ ನಡುವಿನ ವೈರುಧ್ಯಗಳು.
ಬ್ರಹ್ಮಾಂಡದ ಎಲ್ಲ ವೈರುಧ್ಯಗಳು
ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ.
ಪ್ರತೀ ಆಸ್ತಿಕನೂ ತನ್ನೊಳಗಿರುವ
ನಾಸ್ತಿಕನನ್ನು ಭೇಟಿ ಮಾಡಬೇಕು
ಮತ್ತು, ಪ್ರತೀ ನಾಸ್ತಿಕನೂ
ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು.
ಮನುಷ್ಯ
ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ
ನಂಬಿಕೆ ಕೇವಲ
ತನ್ನ ಬದ್ಧವೈರಿಯಂತೆ ಕಾಣಿಸುವ
ಅಪನಂಬಿಕೆಯನ್ನು ಉದ್ದೀಪಿಸುವ
ನಿಧಾನ ಪ್ರಕ್ರಿಯೆ ಮಾತ್ರ.
~ ಶಮ್ಸ್ ತಬ್ರೀಝಿ
ಗುಲಾಬಿಯನ್ನು marigold ಹೂವಿಗೆ ಹೋಲಿಕೆ ಮಾಡಲು ಹೋಗಬೇಡಿ. ಅವರೆಡು ಕೂಡ ಹೂವುಗಳು, ಹಾಗಾಗಿ ಅವುಗಳ ನಡುವೆ ಕೆಲವೊಂದು ಸಮಾನತೆಗಳಿವೆ, ಮತ್ತು ಅವುಗಳ ನಡುವಿನ ಹೋಲಿಕೆ ಇಷ್ಟಕ್ಕೆ ಮಾತ್ರ ಸೀಮಿತ. ಮಾರಿಗೋಲ್ಡ್ ಮಾರಿಗೋಲ್ಡೇ, ಅದರ ಬಂಗಾರದ ಬಣ್ಣ ಅದಕ್ಕೆ ಮಾತ್ರ ಸೀಮಿತ. ಹಾಗೆಯೇ ಗುಲಾಬಿ ಕೂಡ ಗುಲಾಬಿಯೇ, ಆ ಗುಲಾಬಿತನ, ಆ ಜೀವಂತಿಕೆ ಗುಲಾಬಿಗೆ ಮಾತ್ರ ಸಂಬಂಧಪಟ್ಟದ್ದು. ಎರಡು ಕೂಡ ಹೂವುಗಳೇ ಆದ್ದರಿಂದ ಅವುಗಳ ನಡುವೆ ಕೆಲವು ಸಮಾನತೆಯ ಅಂಶಗಳಿವೆ, ಮತ್ತು ಈ ಬಗ್ಗೆ ವಿಶ್ಲೇಷಣೆ ಮಾಡುತ್ತ ಕೂಡುವುದು ನಿರರ್ಥಕ. ಹಾಗೆ ಮಾಡಿದಾಗ ನೀವು ಅವುಗಳ ಅನನ್ಯತೆಯನ್ನು ಮಿಸ್ ಮಾಡಿಕೊಳ್ಳುತ್ತೀರಿ ಮತ್ತು ಅವುಗಳ ಅನನ್ಯತೆಯೇ ಅವುಗಳ ಚೆಲುವಿಗೆ ಕಾರಣ. ಆದರೆ ಕೆಲವರು ಸಿಮಿಲ್ಯಾರಿಟಿಗಳನ್ನು ಪಟ್ಟಿ ಮಾಡುತ್ತ ಹೋಗುತ್ತಾರೆ : ಕುರಾನ್ ಮತ್ತು ಬೈಬಲ್ ಗಳ ನಡುವಿನ ಸಮಾನತೆಗಳು ಯಾವವು? ಬೈಬಲ್ ಮತ್ತು ವೇದಗಳ ನಡುವಿನ ಸಮಾನತೆಗಳು ಯಾವವು? ಇವರು ಮೂರ್ಖ ಜನರು ; ಅವರು ತಮ್ಮದಷ್ಟೇ ಅಲ್ಲ ಬೇರೆ ಎಲ್ಲರ ಸಮಯ ಹಾಳು ಮಾಡುತ್ತಿದ್ದಾರೆ. ಯಾವುತ್ತೂ ಅನನ್ಯತೆಗಳನ್ನು ಗಮನಿಸಿ, ಸಿಮಿಲ್ಯಾರಿಟಿಗಳನ್ನು ಪಟ್ಟಿ ಮಾಡುವ ಪ್ರಲೋಭನೆಯಿಂದ ದೂರವಿರಿ. ಏಕೆಂದರೆ ಹೋಲಿಕೆಗಳು ನೀವು ನೋಡುತ್ತಿರುವುದನ್ನ ನೀರಸವಾಗಿಸುತ್ತವೆ, ಸಾಮಾನ್ಯವಾಗಿಸುತ್ತವೆ.
ಜೀಸಸ್ ನೀರನ್ನ ವೈನ್ ಆಗಿಸಿದ. ಅದು ಕವಿಯ ಮಾಂತ್ರಿಕತೆ. ನೀರನ್ನು ವೈನ್ ಆಗಿಸಿದ್ದು ಕವಿತೆ. ಕವಿಯಿಂದ ಬಂದ ಸಾಮಾನ್ಯ ಪದಗಳೂ ಅಮಲು ಏರಿಸುತ್ತವೆ. ಮತ್ತು ಅಸಾಮಾನ್ಯವನ್ನೂ ನಿರಸವಾಗಿಸುವ ಪ್ರೊಫೆಸರ್ಗಳು, ಪಂಡಿತರು, ಮತ್ತು ಸ್ಕಾಲರ್ ಗಳು ಇನ್ನೊಂದೆಡೆ : ಅವರು ವೈನ್ ನ ಕೂಡ ನೀರಾಗಿಸುವ ನಿಷ್ಣಾತರು. ಅವರು ನಿಜವಾದ ಕ್ರಿಸ್ತ ವಿರೋಧಿಗಳು. ಹಾಗೆ ಮಾಡಬೇಡಿ. ನಿಮಗೆ ನೀರನ್ನು ವೈನ್ ಆಗಿಸುವುದು ಸಾಧ್ಯವಾಗಬಹುದಾದರೆ, ನೀವು ಬೇರೇನನ್ನೂ ಮಾಡಬೇಡಿ.

