ಶಾಶ್ವತತೆ ಎನ್ನುವುದು ಕಾಲದ ನಿರಂತರ ಮುಂದುವರಿಕೆ ಅಲ್ಲ. ಅದು ಡಿಕ್ಷನರಿ ಮೀನಿಂಗ್ ಆಗಿರಬಹುದು : ಸದಾ, ಯಾವತ್ತೂ, ಇತ್ಯಾದಿಯಾಗಿ. ಆದರೆ ಸದಾ ಎನ್ನುವುದು ಕಾಲದ ಭಾಗ – ಮುಂದುವರೆದ ಭಾಗ, ಆದರೆ ಅದು ಇನ್ನೂ ಕಾಲ. ಶಾಶ್ವತತೆ ಕಾಲವನ್ನು ಮೀರಿದ್ದು, ಅದು ತಾತ್ಕಾಲಿಕವಲ್ಲ, ಅದು ಕಾಲವೂ ಅಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭೂತ ಕಾಲದ ವಿಷಯ
ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ ,
ಭವಿಷ್ಯದ ನಿರೀಕ್ಷೆಗಳು
ಭ್ರಮೆಯ ಭಾಗ.
ಭೂತದಿಂದ ಭವಿಷ್ಯಕ್ಕೆ
ಕಾಲದ ಮೂಲಕ ಸಾಗುವ
ಜಗತ್ತಿನ ಪಯಣ
ಸರಳ ರೇಖೆಯಲ್ಲಲ್ಲ
ಬದಲಾಗಿ ಕಾಲದ ಚಲನೆ
ನಮ್ಮ ಮೂಲಕ, ನಮ್ಮೊಳಗೆ
ಕೊನೆಯಿಲ್ಲದ ಸುರುಳಿಯಾಕಾರದ
ದಿವ್ಯ ಪಥದಲ್ಲಿ.
ಶಾಶ್ವತ ಎಂದರೆ ಅನಂತ ಕಾಲವಲ್ಲ,
ಬದಲಾಗಿ ಶಾಶ್ವತ
ಕಾಲದ ಪರಿವೆಯೇ ಇಲ್ಲದ್ದು.
ಭೂತ, ಭವಿಷ್ಯಗಳನ್ನು
ಬುದ್ಧಿಯ ಪರಿಧಿಯಿಂದ ಹೊರಗಿಟ್ಟು
ವರ್ತಮಾನದ ಕ್ಷಣಗಳಲ್ಲಿ
ಬದುಕು ಸಾಧ್ಯವಾದಾಗ
ಒಳಗೆ ಇಳಿಯುತ್ತದೆ
ಶಾಶ್ವತದ ಬೆಳಕು
~ ಶಮ್ಸ್ ತಬ್ರೀಝಿ
ವರ್ತಮಾನದ ಗಳಿಗೆ ಶಾಶ್ವತತೆಯ ಬಾಗಿಲು. ಭೂತ ಮತ್ತು ಭವಿಷ್ಯ ಎರಡೂ ಕಾಲದ ಭಾಗಗಳು. ಆದರೆ ‘ಸಧ್ಯ’ ಕಾಲದ ಭಾಗವಲ್ಲ, ಸಧ್ಯ ಎರಡರ ನಡುವಿನದು, ಭೂತ ಮತ್ತು ಭವಿಷ್ಯಗಳ ಮಧ್ಯದ್ದು. ನೀವು ಅತ್ಯಂತ ಎಚ್ಚರದಲ್ಲಿರುವಾಗ ಮಾತ್ರ ಸಧ್ಯವನ್ನು ಸ್ಪರ್ಶಿಸುವುದು ಸಾಧ್ಯವಾಗುತ್ತದೆ, ಇಲ್ಲವಾದರೆ ನೀವು ಅದನ್ನು ಮಿಸ್ ಮಾಡಿಕೊಳ್ಳುತ್ತ ಹೋಗುತ್ತೀರಿ. ನೀವು ಜಾಗೃತವಾಗಿಲ್ಲವಾದರೆ, ಜಾಗೃತವಾಗುವಷ್ಟರಲ್ಲಿ ಅದು ಹಿಂದೆ ಹೋಗಿ ಬಿಟ್ಟಿರುತ್ತದೆ, ಭೂತವಾಗಿ ಬಿಟ್ಟಿರುತ್ತದೆ; ಅದು ಅಷ್ಟು ತ್ವರಿತ.
ಹಾಗಾಗಿ ಭೂತ ಮತ್ತು ಭವಿಷ್ಯಗಳ ನಡುವೆ ಬಾಗಿಲು ಇದೆ , ಒಂದು ಗ್ಯಾಪ್, ಒಂದು ಮಧ್ಯಂತರ- ಸಧ್ಯ (now) – ಇದು ಶಾಶ್ವತತೆಯ ಬಾಗಿಲು. ಕೇವಲ ಶಾಶ್ವತತೆಯಲ್ಲಿ ಮಾತ್ರ ಆನಂದ ಸಾಧ್ಯ. : ಕಾಲದ ಪರಿಧಿಯಲ್ಲಿ ಜಾಸ್ತಿ ಎಂದರೆ ಒಂದಿಷ್ಟು ಸುಖ ಸಾಧ್ಯವಾಗಬಹುದು, ಒಂದಿಷ್ಟು ನೋವು ಸಂಭವಿಸಬಹುದು : ಆದರೆ ಎರಡು ಕೂಡ ಕ್ಷಣಿಕವಾದವು. ಅವುಗಳ ನೇಚರ್ ಬೇರೆ ಅಲ್ಲ. ನೋವು ಬಂದು ಹೋಗುತ್ತದೆ ಹಾಗೆಯೇ ಸುಖ ಕೂಡ. ಅವು ಕ್ಷಣಿಕ, ನೀರಿನ ಗುಳ್ಳೆಗಳ ಹಾಗೆ.
ಆದರೆ ಆನಂದಕ್ಕೆ ಪರ್ಯಾಯವಿಲ್ಲ. ಅದಕ್ಕೆ ಸುಖ ದುಃಖಗಳ, ರಾತ್ರಿ ಹಗಲುಗಳ ಹಾಗೆ ಎರಡು ಮುಖವಿಲ್ಲ. ಅದು ಅದ್ವೈತ. ಅದಕ್ಕೆ ಯಾವ ವೈರುಧ್ಯದ ಪರಿಚಯವಿಲ್ಲ. ಅದು ಒಂದು ಮೀರುವಿಕೆ. ಸಾಧ್ಯವಾದಷ್ಟು ಸಧ್ಯದಲ್ಲಿರುವ ಪ್ರಯತ್ನ ಮಾಡಿ. ಕಲ್ಪನೆಯಲ್ಲಿ, ನೆನಪುಗಳಲ್ಲಿ ಬಹಳ ಹೊತ್ತು ಅಲೆದಾಡಬೇಡಿ. ಯಾವತ್ತಾದರೂ ನಿಮ್ಮನ್ನು ನೀವು ಕಲ್ಪನಾಲೋಕದಲ್ಲಿ, ನೆನಪುಗಳ ಪರಿಧಿಯಲ್ಲಿ ಕಂಡಿರಾದರೆ, ಮತ್ತೆ ನಿಮ್ಮನ್ನು ಸಧ್ಯಕ್ಕೆ ಕರೆದುಕೊಂಡು ಬನ್ನಿ. ನಿಮ್ಮನ್ನು ಮತ್ತೆ ಮತ್ತೆ ಸಧ್ಯಕ್ಕೆ ಎಳೆದುಕೊಂಡು ಬನ್ನಿ. ಇದನ್ನು ಬುದ್ಧ ತಮ್ಮನ್ನು ತಾವು ಒಂದುಗೂಡಿಸಿಕೊಳ್ಳುವುದು ( recollecting self) ಎನ್ನುತ್ತಾನೆ ; ಇಂಥ ಒಂದುಗೂಡಿಸಿಕೊಳ್ಳುವಿಕೆಯಲ್ಲಿ ನಿಧಾನವಾಗಿ ನೀವು ಶಾಶ್ವತತೆಯನ್ನು ಅರ್ಥಮಾಡಿಕೊಳ್ಳುವಿರಿ.

