ಶೂನ್ಯ ಬಿಂದು ( Zero Point ): 365 #Day 196

ಬದುಕಿನ ಏರಿಳಿತಗಳಿಗೆ ನಾವು ಹೊಂದಿಕೊಂಡುಬಿಟ್ಟಿದ್ದೇವೆ. ಬದುಕಿನ ಏರು ಸಮಯ ನಮಗೆ ಖುಶಿ ನೀಡುತ್ತದೆ ಮತ್ತು ಇಳಿತದ ಸಮಯ ನಮ್ಮನ್ನು ದುಃಖಕ್ಕೆ ದೂಡುತ್ತದೆ. ಈ ಏರು ಮತ್ತು ಇಳಿತಗಳ ನಡುವೆ ಒಂದು ಬಿಂದು ಇದೆ; ಅದು ತಟಸ್ಥ ಬಿಂದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



‘ಮಧ್ಯಮ ಮಾರ್ಗ’
ಎಂದರೆ ಸಾಮಾನ್ಯ ಹಾದಿಯಲ್ಲ
ಶೂನ್ಯದಿಂದ ಅನಂತಕ್ಕೆ
ಅನಂತದಿಂದ ಶೂನ್ಯಕ್ಕೆ
ಛಂಗನೆ ಹಾರುವ
ಭಾರಿ ಸಾಹಸ.
ಆದರೆ ಯಾವುದೀ ಮಧ್ಯಮ ಸ್ಥಿತಿ
ಎಂದು ನಿರ್ಧರಿಸುವುದು
ಒಂದು ಜಿಜ್ಞಾಸೆಯ ವಿಷಯ.
ರಭಸದಿಂದ ಹರಿಯುತ್ತಿರುವ
ಹಳ್ಳದ ನೀರು
ಒಂಟೆಗೆ, ಮೊಣ ಕಾಲ
ಕೆಳಗಿನ ವಿಷಯವಾದರೆ
ಇಲಿಗೆ, ಒಂದು ದೊಡ್ಡ ಸುನಾಮಿ.

– ರೂಮಿ

ಕೆಲವೊಮ್ಮೆ ಈ ತಟಸ್ಥ ಬಿಂದು ಭಯ ಹುಟ್ಟಿಸುತ್ತದೆ, ಏಕೆಂದರೆ ನಮಗೆ ದುಃಖ ಆಗುತ್ತಿದ್ದರೆ ಅದು ಏಕೆ ಎಂದು ನಮಗೆ ಗೊತ್ತಿರುತ್ತದೆ, ಖುಶಿ ಆಗುತ್ತಿದ್ದರೆ ಕೂಡ ಹಾಗೆಯೇ. ಆದರೆ ಯಾವಾಗ ನಿಮಗೆ ಏನೂ ಅನಿಸುತ್ತಿಲ್ಲವೋ, ಯಾವಾಗ ನಿಮಗೆ ಅತಂತ್ರ ಭಾವ ಕಾಡುತ್ತದೆಯೋ ಅದನ್ನು ನಿಮಗೆ ಅರ್ಥ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಇಂಥ ಸ್ಥಿತಿ ನಿಮ್ಮನ್ನು ಭಯಕ್ಕೆ ನೂಕುತ್ತದೆ. ಆದರೆ ಅಂಥ ತಟಸ್ಥ ಬಿಂದು ಬಹಳ ಸುಂದರವಾದದ್ದು. ನೀವು ಈ ಸ್ಥಿತಿಯನ್ನು ಮುಕ್ತವಾಗಿ ಒಪ್ಪಿಕೊಳ್ಳುವಿರಾದರೆ, ಬದುಕಿನ ಕುರಿತಾದ ಹಲವು ಒಳನೋಟಗಳು ನಿಮಗೆ ಲಭ್ಯವಾಗುವವು. ನೀವು ಬದುಕಿನ ಉತ್ಕರ್ಷದ ಸ್ಥಿತಿಯಲ್ಲಿರುವಾಗ ಆ ಉತ್ಕರ್ಷ ನಿಮ್ಮನ್ನು ಡಿಸ್ಟರ್ಬ್ ಮಾಡುತ್ತದೆ; ಎಲ್ಲ ಸುಖಗಳು ಉತ್ಕಟತೆ ಮತ್ತು ಜ್ವರಕ್ಕೆ ಕಾರಣಗಳು. ಮತ್ತು ನಿಮ್ಮ ಬದುಕು ಇಳಿಮುಖವಾಗಿದ್ದಾಗಲೂ ನಿಮಗೆ ಡಿಸ್ಟರ್ಬ್ ಆಗುತ್ತದೆ, ಆದರೆ ಋಣಾತ್ಮಕವಾಗಿ. ನೀವು ಉತ್ಕರ್ಷಕ್ಕೆ ಅಂಟಿಕೊಳ್ಳ ಬಯಸುವಿರಾದರೆ, ಇಳಿಮುಖದಿಂದ ದೂರವಾಗ ಬಯಸುವಿರಿ. ಆಗ ನಿಮ್ಮನ್ನು ಬ್ಯುಸಿ ಆಗಿ ಇಡುವ ಏನೋ ಒಂದು ಕೆಲಸ ಇದೆ. ಆದರೆ ನೀವು ಮಧ್ಯಮದಲ್ಲಿ ಇರುವಾಗ, ಯಾವ ಜ್ವರವೂ ನಿಮ್ಮನ್ನು ಕಾಡುವುದಿಲ್ಲ, ಇದು ತಟಸ್ಥ ಬಿಂದು.

ಈ ತಟಸ್ಥ ಬಿಂದುವಿನ ಮೂಲಕ, ನಿಮಗೆ ನಿಮ್ಮ ಕುರಿತಾದ ಅದ್ಭುತ ಒಳನೋಟಗಳು ಲಭ್ಯವಾಗುತ್ತವೆ, ಏಕೆಂದರೆ ಇಲ್ಲೊಂದು ಗಾಢ ಮೌನವಿದೆ. ಇಲ್ಲಿ ಯಾವ ಖುಶಿ ಇಲ್ಲ, ಯಾವ ದುಃಖ ಇಲ್ಲ, ಹಾಗಾಗಿ ಇಲ್ಲಿ ಯಾವುದೇ ಬಗೆಯ ಸದ್ದು ಗದ್ದಲವಿಲ್ಲ, ಇಲ್ಲಿ ಅಖಂಡ ಮೌನ ನೆಲೆಸಿದೆ. ಬುದ್ಧ ತನ್ನ ಶಿಷ್ಯರೊಂದಿಗೆ ಕೆಲಸ ಮಾಡುವಾಗಲೆಲ್ಲ ಈ ಬಿಂದುವನ್ನು ಯಥೇಚ್ಛವಾಗಿ ಬಳಸುತ್ತಾನೆ. ಇದನ್ನು ಎಲ್ಲರೂ ಸಾಧಿಸಲೇ ಬೇಕಿತ್ತು ಮೊದಲು ನಂತರ ಬಾಕಿ ಎಲ್ಲಕ್ಕೂ ಬುದ್ಧನ ಪರವಾನಗಿ ಇತ್ತು. ಇದನ್ನು ಬುದ್ಧ ಉಪೇಕ್ಷಾ ಎಂದು ಕರೆಯುತ್ತಿದ್ದ, ಇದು ತಟಸ್ಥತೆಗೆ ಇನ್ನೊಂದು ಹೆಸರು.

ಒಂದು ದಿನ ಯಾರೋ ಒಬ್ಬ ಜುವಾಂಗ್ ತ್ಸು ನ ಹತ್ತಿರ ಬಂದು ಶಹರದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವ್ಯಕ್ತಿಯ ಬಗ್ಗೆ ವಿಷಯ ತಿಳಿಸಿ ಅವನನ್ನು ಹಲವಾರು ಬಗೆಯಲ್ಲಿ ನಿಂದಿಸಿದ,
“ ಅವನೊಬ್ಬ ಪಾಪಿ, ಬಹಳ ಕೆಟ್ಟ ಮನುಷ್ಯ, ದೊಡ್ಡ ಕಳ್ಳ “

ಎಲ್ಲವನ್ನು ಕೇಳಿಸಿಕೊಂಡ ಮೇಲೆ ಜುವಾಂಗ್ ತ್ಸು ಉತ್ತರಿಸಿದ, “ ಅವ ಅದ್ಭುತವಾಗಿ ಕೊಳಲು ನುಡಿಸುತ್ತಾನೆ “

ಅಷ್ಟರಲ್ಲೇ ಇನ್ನೊಬ್ಬ ಮನುಷ್ಯ ಹೇಳಿದ, “ ಅವನು ಹಾಡು ಕೂಡ ಅದ್ಭುತವಾಗಿ ಹಾಡುತ್ತಾನೆ “

ಜುವಾಂಗ್ ತ್ಸು ತಕ್ಷಣ ಉತ್ತರಿಸಿದ, “ ಆದರೆ ಆ ಮನುಷ್ಯ  ದರೋಡೆ ಖೋರ “

ಜುವಾಂಗ್ ತ್ಸು ನ ಪ್ರತಿಕ್ರಿಯೆ ಕೇಳಿ ಆ ಇಬ್ಬರೂ ಆಶ್ಚರ್ಯಚಕಿತರಾಗಿ ಕೇಳಿದರು “ ನೀನು ಏನನ್ನ ಹೇಳಲು ಬಯಸುತ್ತಿದ್ದೀಯ? “

“ ನಾವು ಕೇವಲ ಸಮತೋಲನ ಸಾಧಿಸುವ ಪ್ರಯತ್ನ ಮಾಡುತ್ತಿದ್ದೇನೆ – ಅವನ ಬಗ್ಗೆ ತೀರ್ಮಾನ ಹೇಳಲು ನಾನು ಯಾರು ? ಅವನು ಕಳ್ಳನೂ ಹೌದು, ಅದ್ಭುತ ಕೊಳಲುವಾದಕನೂ ಹೌದು. ನನಗೆ ಅವನು ಸ್ವೀಕಾರಾರ್ಹನೂ ಅಲ್ಲ ನಿರಾಕರಿಸಲು ಯೋಗ್ಯನೂ ಅಲ್ಲ. ಅವನ ಬಗ್ಗೆ ನನಗೆ ಆಯ್ಕೆಗಳಿಲ್ಲ. ಅವನ ಬಗ್ಗೆ ವಿಪರೀತದ ತೀರ್ಮಾನಗಳನ್ನು ಹೇಳುವುದು ನನಗೆ ಅಸಾಧ್ಯ. ನನಗೆ ಅವನು ಒಳ್ಳೆಯವನೂ ಅಲ್ಲ, ಕೆಟ್ಚವನೂ ಅಲ್ಲ. ಅವನು, ಅವನ ಹಾಗಿದ್ದಾನೆ ಮತ್ತು ಅದು ಅವನ ವ್ಯವಹಾರ. ನೀವು ಕೇಳಿದಾಗ ನಾನು ಏನೋ ಹೇಳಬೇಕಿತ್ತು ಹಾಗಾಗಿ ನಾನು ಸಮತೋಲನ ಸಾಧಿಸುವ ಪ್ರಯತ್ನ ಮಾಡಿದೆ “ ಜುವಾಂಗ್ ತ್ಸು ತನ್ನ ಪ್ರತಿಕ್ರಿಯೆಗೆ  ಸಮಜಾಯಿಶಿ ನೀಡಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.