ದೌರ್ಬಲ್ಯ ( Vulnerability ): ಓಶೋ 365 #Day197

ದೇಹದೊಳಗಿನ ನಿಮ್ಮ ಅಸ್ತಿತ್ವ ತುಂಬ ಅನಿಶ್ಚಿತ. ಯಾವುದೇ ಕ್ಷಣದಲ್ಲಿ, ಚೂರು ಹೆಚ್ಚು ಆಕ್ಸಿಜನ್ ಅಥವಾ ಕೊಂಚ ಕಡಿಮೆ ಆಕ್ಸಿಜನ್, ನೀವು ಇರುವುದೇ ಇಲ್ಲ! ರಕ್ತದಲ್ಲಿ ಚೂರು ಕಡಿಮೆ ಸಕ್ಕರೆಯಾದರೂ ಅಸ್ತಿತ್ವಕ್ಕೆ ಅಪಾಯ, ಮೆದುಳಿನ ವೈರಿಂಗ್ ಲ್ಲಿ ಚೂರು ವ್ಯತ್ಯಾಸವಾದರೂ ನಿಮಗೆ ಉಳಿಗಾಲವಿಲ್ಲ!  ~ ಓಶೋ ರಜನೀಶ್; ಚಿದಂಬರ ನರೇಂದ್ರ


ಬದುಕು ಇರುವುದು ಅಪಾಯಕ್ಕೆ ಆಹ್ವಾನ ನೀಡುವ ತನ್ನ ದೌರ್ಬಲ್ಯಗಳ ನಡುವೆ. ಅದು ಇರುವುದು ಅಪಾಯಗಳ ನಡುವೆ, ಅಸುರಕ್ಷತೆಯ ನಡುವೆ, ಮತ್ತು ಬದುಕಿಗೆ ಸುರಕ್ಷತೆ ಸಾಧ್ಯವಿಲ್ಲ ಕೂಡ. ಸುರಕ್ಷತೆ ಕೇವಲ ಸತ್ತ ಜೀವಗಳಿಗೆ ಸಂಬಂಧಿಸಿದ್ದು. ಅವರು ಮಹಾ ಶಕ್ತಿಶಾಲಿಗಳು. ಸತ್ತ ಮನುಷ್ಯನನ್ನು ಕೊಲ್ಲುವುದು ಸಾಧ್ಯವೇ? ಸಾಧ್ಯವಿಲ್ಲ. ಸತ್ತ ಮನುಷ್ಯನನ್ನು ನಾಶ ಮಾಡುವುದು ಸಾಧ್ಯವೇ? ಸಾಧ್ಯವಿಲ್ಲ. ಸತ್ತ ಮನುಷ್ಯರು ಅತ್ಯಂತ ಶಕ್ತಿಶಾಲಿಗಳು.

ಬದುಕಿನ ಕ್ವಾಲಿಟಿ ಹೆಚ್ಚುತ್ತಿದ್ದಂತೆಯೇ ಅದು ನಾಜೂಕಾಗುತ್ತ ಹೋಗುತ್ತದೆ. ಗುಲಾಬಿಯನ್ನ ತೆಗೆದುಕೊಳ್ಳಿ, ಕವಿತೆಯನ್ನು ತೆಗೆದುಕೊಳ್ಳಿ, ಸಂಗೀತವನ್ನು ತೆಗೆದುಕೊಳ್ಳಿ – ಅದು ಕೆಲವು ಸೆಕೆಂಡ್ ಮಾತ್ರ ಕಂಪಿಸಿ ನಿಂತು ಬಿಡುತ್ತದೆ. ಪ್ರೇಮವನ್ನು ತೆಗೆದುಕೊಳ್ಳಿ – ಒಂದು ಕ್ಷಣ ಇದ್ದದ್ದು ಇನ್ನೊಂದು ಕ್ಷಣಕ್ಕೆ ಇರುವುದಿಲ್ಲ. ಧ್ಯಾನವನ್ನು ತೆಗೆದುಕೊಳ್ಳಿ. ನೀವು ಎತ್ತರದ ಹಂತಗಳನ್ನು ತಲುಪುತ್ತಿದ್ದಂತೆಯೇ ಸಂಗತಿಗಳು ಹೆಚ್ಚು ಹೆಚ್ಚು ನಾಜೂಕಾಗುತ್ತವೆ. ಆದ್ದರಿಂದ ಇಂಥ ದೌರ್ಬಲ್ಯ ತಪ್ಪೇನಲ್ಲ; ಬದುಕು ಹೇಗೆ ಎನ್ನುವುದರ ತಿಳುವಳಿಕೆ ಇದು. ಹಾಗಾಗಿ ನಾವು ಶಕ್ತಿಶಾಲಿಗಳೆಂದು ತೋರಿಸಿಕೊಳ್ಳುವುದು ಮೂರ್ಖತನ. ಯಾರೂ ಶಕ್ತಿಶಾಲಿಗಳಲ್ಲ, ಯಾರಿಗೂ ಸಾಧ್ಯವಿಲ್ಲ ಕೂಡ. ಇದು ಕೇವಲ ಅಹಂ ನ ಆಟ. ಮಹಾ ಯೋಧ ಅಲೆಕ್ಸಾಂಡರ್ ಕೂಡ ಶಕ್ತಿಶಾಲಿಯಲ್ಲ – ಯಾವ ಶಕ್ತಿಯೂ ಇಲ್ಲವಾಗುವಂಥ ಒಂದು ದಿನ ಬಂದೇ ಬರುತ್ತದೆ.

ಆದ್ದರಿಂದ ನಿಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳುವುದನ್ನ ಕಲಿಯಿರಿ. ಆಗ ನಿಮ್ಮೊಳಗೆ  ನಿಮ್ಮ ಶಕ್ತಿಯ  ಆಳ ತಿಳುವಳಿಕೆ ಮತ್ತು ಹರಿವು ಸಾಧ್ಯವಾಗುತ್ತದೆ. ಆಗ ಅದು ನಿಮಗೆ ಸಮಸ್ಯೆ ಅಲ್ಲ ; ಆಗ ಅದು ನಿಮಗೆ ಬಹಳ ಮಹತ್ವದ್ದು.

ತೀವ್ರ ಚಳಿಗಾಲದ ರಾತ್ರಿಯೊಂದರಲ್ಲಿ ಮೈ ತುಂಬ ಬೆಚ್ಚಗಿನ ಬಟ್ಟೆ ಧರಿಸಿದ್ದ ಶ್ರೀಮಂತ ವ್ಯಕ್ತಿಯೊಬ್ಬ ತೆಳುವಾದ ಬಟ್ಟೆ ಧರಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಮುಲ್ಲಾ ನಸ್ರುದ್ದೀನ್ ನನ್ನು ಮಾತನಾಡಿಸಿದ,

“ ನಸ್ರುದ್ದೀನ್ ನಾನು ಇಷ್ಟು ಬೆಚ್ಚಗಿನ ಬಟ್ಟೆ ಹಾಕಿಕೊಂಡಿದ್ದರೂ ನನಗೆ ಚಳಿಯ ತೀವ್ರ ಅನುಭವವಾಗುತ್ತಿದೆ, ನೀನು ಇಷ್ಟು ತೆಳು ಬಟ್ಟೆ ಹಾಕಿಕೊಂಡಿದ್ದೀಯಲ್ಲ ಚಳಿ ಆಗುವದಿಲ್ಲವೆ? “

“ ನನಗೆ ಬೆಚ್ಚಗಿನ ಬಟ್ಟೆ ಹೊಂದುವ ಸೌಕರ್ಯ ಇಲ್ಲ ಆದ್ದರಿಂದ ಚಳಿಯನ್ನು ಅನುಭವಿಸುವ ಸ್ವಾತಂತ್ರ್ಯ  ಕೂಡ ಇಲ್ಲ, ನಿಮ್ಮ ಹತ್ತಿರ ಸಾಕಷ್ಟು ಬಟ್ಟೆಯಿದೆ ಆದ್ದರಿಂದ ಚಳಿ ಅನುಭವಿಸುವ ಅದೃಷ್ಟವೂ ಇದೆ “

ನಸ್ರುದ್ದೀನ್ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.