ಅಕ್ಕ ತನ್ನ ಹಿರಿಯ ಸಂಗಾತಿಗೆ, ಅವ್ವನಿಗೆ ಹೇಳುವಂತೆ ಈ ವಚನ ಇದೆ… । ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಎರದ ಮುಳ್ಳಿನಂತೆ ಪರಗಂಡರೆನಗವ್ವಾ
ಸೋಂಕಲಮ್ಮೆ ಸುಳಿಯಲಮ್ಮೆ
ನಂಬಿ ನಚ್ಚಿ ಮಾತಾಡಲಮ್ಮೆನವ್ವಾ
ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವಾ [೧೦೯]
[ಎಱ=ಕಬ್ಬಿಣ; ಪರಗಂಡರು=ಬೇರೆಯ ಗಂಡಸರು; ಸೋಂಕಲಮ್ಮೆ=ಮುಟ್ಟಲಾರೆ; ಸುಳಿಯಲಮ್ಮೆ=ಸುಳಿಯಲಾರೆ; ನಚ್ಚು= ವಿಶ್ವಾಸವಿರಿಸು, ನಂಬು; ಉರ=ಎದೆ; ಮಾತಾಡಲಮ್ಮೆ=ಮಾತಾಡಲಾರೆ; ನಾನಪ್ಪಲಮ್ಮೆ=ನಾನು ಅಪ್ಪಿಕೊಳ್ಳಲಾರೆ]
ಬೇರೆಯ ಗಂಡಸರು ನನ್ನ ಪಾಲಿಗೆ ಕಬ್ಬಿಣದ ಮುಳ್ಳಿನ ಹಾಗೆ. ಅವರನ್ನು ಮುಟ್ಟಲು, ಅವರ ಬಳಿ ಸುಳಿಯಲು, ಅವರಲ್ಲಿ ಪೂರ್ತಿ ವಿಶ್ವಾಸ ಇರಿಸಿ ಮಾತನಾಡಲು ನನಗಾಗದು. ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆಯ ಗಂಡಂದಿರಿಗೆ ಎದೆಯಲ್ಲಿ ಮುಳು ಇದೆ ಅನ್ನುವ ಕಾರಣಕ್ಕೆ ಅವರು ಯಾರನ್ನೂ ಆಲಂಗಿಸಲಾರೆ, ಅವ್ವಾ.
ಚೆನ್ನಮಲ್ಲಿಕಾರ್ಜುನ, ಅಕ್ಕನೇ ಇನ್ನೊಂದು ವಚನದಲ್ಲಿ ಹೇಳುವ ಹಾಗೆ, ʻಅತ್ಮಸಂಗಾತʼ ಒದಗಿಸಿದವನು; ʻಇಷ್ಟʼ ದೈವ. ಅವನ ಒಡನಾಟ, ಮುನಿಸು, ವಿರಹ, ತಿರಸ್ಕಾರ ಎಲ್ಲವೂ ಒಪ್ಪಿತ, ಪ್ರಿಯ. ಅವನಲ್ಲದೆ ಮಿಕ್ಕ ಗಂಡಸರು, ʻಗಂಡರುʼ ಅಪಾಯಕಾರಿಗಳು. ಗಂಡ ಅನ್ನುವ ಮಾತಿಗೆ ಅಪಾಯ ಅನ್ನುವ ಅರ್ಥವೂ ಇದೆ. ಅವರ ಎದೆಯಲ್ಲಿ ಕಬ್ಬಿಣದ ಮುಳ್ಳು ಇದೆ, ಲೋಕದ ಗಂಡರನ್ನು ಅಪ್ಪಲೊಲ್ಲೆ, ಅವರ ಸಮೀಪವೂ ಸುಳಿಯಲೊಲ್ಲೆ, ಅವರೊಡನೆ ಮಾತು ಕೂಡ ಬೇಡ ಅನ್ನುವ ದೃಢವಾದ ಮಾತನ್ನು ಅಕ್ಕ ತನ್ನ ಹಿರಿಯ ಸಂಗಾತಿಗೆ, ಅವ್ವನಿಗೆ ಹೇಳುವಂತೆ ಈ ವಚನ ಇದೆ.
ಒಲ್ಲದ ಗಂಡಸಿನ ಎದೆಯಲ್ಲಿ ಕಬ್ಬಿಣದ ಮುಳ್ಳು ಅನ್ನುವ ರೂಪಕವೇ ಅಕ್ಕನ ಮನಸಿನ ಮಾತನ್ನು ಮೊನಚಾಗಿ ಹೇಳುತ್ತದೆ. ಅಪೂರ್ಣತೆಯೇ, ನಾನು-ನೀನು ಎಂಬ ಹೊಂದಲಾಗದ ಭಿನ್ನತೆಯೇ, ನಾನು ಅನ್ನುವ ಅಹಂಕಾರವೇ ಇಂಥ ಇರಿತಕ್ಕೆ ಕಾರಣವೇ, ಕಲ್ಪಿತ ಆತ್ಮ ಸಂಗಾತವೊಂದೇ ನೆಮ್ಮದಿಯೇ ಅನ್ನುವ ಪ್ರಶ್ನೆಯನ್ನೂ ಈ ವಚನ ಮೂಡಿಸುತ್ತದೆ. ʻಇಹಕ್ಕೊಬ್ಬ ಗಂಡನೆ ಪರಕ್ಕೊಬ್ಬ ಗಂಡನೆʼ ಎಂಬ ಇನ್ನೊಂದು ವಚನದಲ್ಲಿ (ಸಂ.೫, ವ ೭೭) ಚೆನ್ನಮಲ್ಲಿಕಾರ್ಜುನನಲ್ಲದೆ ʻಮಿಕ್ಕಿನ ಗಂಡರೆಲ್ಲ ಮುಗಿಲಮರೆಯ ಗೊಂಬೆಯಂತೆʼ ಎಂಬ ಖಚಿತ ನಿಲುವು ಕಾಣುತ್ತದೆ.
ಅಮ್ಮೆ-ನನಗೆ ಆಗದು ಅನ್ನುವ ಪದ ರಿಪೀಟ್ ಆಗುವ ಬಗೆಯೂ ಗಮನ ಸೆಳೆಯುತ್ತದೆ. ಲೋಕದ ಗಂಡರನ್ನು ನಂಬಲಾರೆ, ವಿಶ್ವಾಸದಿಂದ ಮಾತಾಡಿಸಲಾರೆ, ಅವರ ಮೈ ಮುಟ್ಟಿ ಅಪ್ಪುವುದಕ್ಕೂ ನನಗೆ ಸಾಧ್ಯವಾಗದು ಅನ್ನುವಾಗ ಒಲುಮೆಗೆ ಶರಣಾಗುವುದು ಎರಡು ಜೀವಗಳಲ್ಲೂ ಘಟಿಸಬೇಕಾದ ಅಗತ್ಯವನ್ನು ಮನಗಂಡಂತೆ ತೋರುತ್ತದೆ. ಗಂಡೇ ಆಗಲಿ ಹೆಣ್ಣೇ ಆಗಲಿ ಪ್ರೀತಿಯ ಮೂಲಕ ಇನ್ನೊಂದು ಜೀವದ ಮೇಲೆ ಒಡೆತನವನ್ನು ಸಾಧಿಸುವ ಅಪೇಕ್ಷೆ ಹೊಂದಿದ್ದರೆ ಅದು ಕಬ್ಬಿಣದ ಮುಳ್ಳಾಗಿ ನೋಯಿಸುತ್ತದೆ.

